ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ
ದೇಶಕ್ಕೆ ಬಲಿಷ್ಟವಾದ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ಗೆ ಕಾಂಗ್ರೆಸ್ ಸಣ್ಣ ಗೌರವ ಕೊಡಲಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಆರೋಪಿಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ೧೨೯ ನೇ ಜಯಂತಿ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ನಿಧನರಾದಾಗ ಅವರ ಶವ ಸಾಗಿಸಲು ಕಾಂಗ್ರೆಸ್ ನೆರವಾಗಲಿಲ್ಲ. ಆದರೆ ಈಗ ದಲಿತರು, ಪರಿಶಿಷ್ಟರು, ಹಿಂದುಳಿದವರನ್ನು ಓಲೈಸಿಕೊಳ್ಳುವುದಕ್ಕಾಗಿ ಅಂಬೇಡ್ಕರ್ರವರನ್ನು ಪಕ್ಷದ ಆಸ್ತಿಯನ್ನಾಗಿ ಮಾಡಿಕೊಂಡಿದೆ. ಜನಸಂಘದ ಕಾಲದಿಂದಲೂ ಅಂಬೇಡ್ಕರ್ರವರನ್ನು ಗೌರವಿಸಿಕೊಂಡು ಬರಲಾಗುತ್ತಿದೆ ಎನ್ನುವುದನ್ನು ಮೊದಲು ಕಾಂಗ್ರೆಸ್ ಅರ್ಥಮಾಡಿಕೊಂಡರೆ ಒಳ್ಳೆಯದು ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರಮೋದಿರವರು ಅಂಬೇಡ್ಕರ್ರವರಿಗೆ ಐದು ವಿಶೇಷತೆಗಳನ್ನು ನೀಡಿ ಗೌರವಿಸಿದ್ದಾರೆ. ಮೊದಲಿನಿಂದಲೂ ಅಂಬೇಡ್ಕರ್ರವರ ವಿಚಾರಧಾರೆಗಳನ್ನು ಬಿಜೆಪಿ ಪಾಲಿಸಿಕೊಂಡು ಬರುತ್ತಿದೆ. ಅಂಬೇಡ್ಕರ್ ಜೀವನ ಚರಿತ್ರೆಯನ್ನು ಎಲ್ಲರೂ ಓದಿದಾಗ ಅಂಬೇಡ್ಕರ್ ಅನುಭವಿಸಿದ ನೋವು, ಸಂಕಟ, ಅಸ್ಪೃಶ್ಯತೆ, ಅವಮಾನ ಎಷ್ಟರ ಮಟ್ಟಿಗಿತ್ತು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.
ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ ದಲಿತರಲ್ಲಿಯೇ ಸಾಕಷ್ಟು ಪೈಪೋಟಿಯಿದೆ. ಅಲ್ಲಿಯೂ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವವರು ಸಾಕಷ್ಟಿರುವುದರಿಂದ ಉನ್ನತ ಹುದ್ದೆಗಳಿಗೆ ಪರಿಶಿಷ್ಟರಲ್ಲಿಯೇ ಸ್ಪರ್ಧೆ ಏರ್ಪಟ್ಟಿದೆ. ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ನವರು ಮೀಸಲಾತಿಯನ್ನು ಸರಿಯಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕಲ್ಪಿಸಿಕೊಟ್ಟಿದ್ದರೆ ಇಂತಹ ಪರಿಸ್ಥಿತಿ ದೇಶಕ್ಕೆ ಎದುರಾಗುತ್ತಿರಲಿಲ್ಲ ಎಂದು ವಿಷಾದಿಸಿದರು.
ದೇಶಕ್ಕೆ ಕಾಂಗ್ರೆಸ್ ಯಾವ ಕೊಡುಗೆಯನ್ನು ಕೊಟ್ಟಿಲ್ಲ. ಜನಸಾಮಾನ್ಯನು ಎಂತಹ ಉನ್ನತ ಮಟ್ಟಕ್ಕಾದರೂ ಏರಬಹುದು ಎನ್ನುವುದಕ್ಕೆ ಮೋದಿರವರು ದೇಶದ ಪ್ರಧಾನಿಯಾಗಿರುವುದೇ ಕಾರಣ. ಮೀಸಲಾತಿ ಪಡೆಯುತ್ತಿರುವವರ ನಡುವೆಯೇ ಪೈಪೋಟಿಯಿದ್ದರೆ ಇನ್ನು ಕೊಳಗೇರಿ ಹಾಗೂ ಬಡ ಮಕ್ಕಳ ಗತಿ ಏನು ಎಂದು ಪ್ರಶ್ನಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ಸಿದ್ದಾಪುರ, ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತೇಗೌಡ, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ಯಾದವ್, ವಕ್ತಾರ ನಾಗರಾಜ್ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಶಿವಣ್ಣಾಚಾರ್, ಸಂಪತ್ಕುಮಾರ್, ನಗರಾಧ್ಯಕ್ಷ ಶಶಿಧರ್, ಎಸ್.ಅನೀತ್, ಶಂಭು, ಕಿರಣ್ಕುಮಾರ್ ಇದ್ದರು.