ಪ್ರೊ.ಸ್ವಾಮಿನಾಥನ್ ಅವರ ಆಯೋಗದ ವರದಿ ಅನುಷ್ಠಾನಗೊಳ್ಳಲಿ| ಕೃಷಿ ವಲಯಕ್ಕೆ ’ಕಾರ್ಪೊರೇಟ್’ ಬೇಡ, ’ಕೋ-ಆಪರೇಟ್’ ಇರಲಿ| ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ…

ಬೆಂಗಳೂರು ವಿಶೇಷ ಸುದ್ದಿ ಸಾಧನೆ

 ಬೆಂಗಳೂರು:

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ:

ಕೃಷಿ ವಲಯಕ್ಕೆ ಕಾರ್ಪೊರೇಟ್ಬೇಡ, ’ಕೋ-ಆಪರೇಟ್ಇರಲಿ.

(ಹೋದ ಭಾನುವಾರ ಪ್ರಕಟಗೊಂಡ ಲೇಖನದ ಮುಂದುವರೆದ ಭಾಗ)

     ಕರ್ನಾಟಕ ಸರ್ಕಾರ ಈಗ ತಂದಿರುವ ತಿದ್ದುಪಡಿ ಕುರಿತಂತೆ ಇರುವ ವಿರೋಧಗಳಲ್ಲಿ ಅದು ಕೃಷಿ ವಲಯಕ್ಕೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಆಗಮನಕ್ಕೆ ಅನಿಯಂತ್ರಿತ ಅವಕಾಶ ಮಾಡಿಕೊಡುತ್ತದೆ ಎನ್ನುವುದೂ ಒಂದು.  ಜೊತೆಗೆ ಈ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ಮಾಡುವ ಕಾರಣಕ್ಕೆಂದೇ ಕೊಂಡ ಜಮೀನನ್ನು ನಂತರದ ವರ್ಷಗಳಲ್ಲಿ ನಿಧಾನವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆಯ ನೆಪದಲ್ಲೋ, ಮತ್ತಿನ್ನಾವುದೇ ಕಾರಣ ಒಡ್ಡಿಯೋ ಕೃಷಿಯೇತರ ಬಳಕೆಗೆ ವಿಸ್ತರಿಸಿಕೊಂಡರೆ ಅದನ್ನು ತಡೆಯುವ ಸಾಮರ್ಥ್ಯ ಆಡಳಿತದ ಹಣೆ ಹೊತ್ತ ಸರ್ಕಾರಗಳಲ್ಲಿ ಉಳಿದಿರತ್ತದೆಯೇ ಎನ್ನುವ ಅನುಮಾನ.  ಏಕೆಂದರೆ, ೨೦೦೬ರಲ್ಲಿ ಪ್ರೊ. ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ನೇಮಕವಾದ ರಾಷ್ಟ್ರೀಯ ಕೃಷಿ ಆಯೋಗ ನೀಡಿರುವ ವರದಿ ಪ್ರಕಾರ ಕೃಷಿ ಭೂಮಿಯನ್ನು ಕೃಷಿಯೇತೆರ ಬಳಕೆಗಾಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಡುವುದನ್ನು ನಿರ್ಬಂಧಿಸಿ ಶಿಫಾರಸ್ಸು ಮಾಡಿದೆ.  ಕೃಷಿ ಉದ್ದೇಶಕ್ಕಾಗಿ ಅವು ಕೊಳ್ಳುದರ ಬಗ್ಗೆ ಆಕ್ಷೇಪಣೆ ಇಲ್ಲ.  ಒಂದು ವೇಳೆ ಕಾರ್ಪೊರೇಟ್ ಕಂಪನಿಗಳು ಈಗ ಭಾವಿಸಿರುವಂತೆ ಕೃಷಿಗಾಗಿಯೇ ಕೊಂಡು ಕೃಷಿಯಲ್ಲಿ ತೊಡಗುತ್ತವೆ ಎಂದುಕೊಂಡರೂ, ಅವು ಹಾಗೊಂದುವೇಳೆ ಕೃಷಿ ಅಭಿವೃದ್ಧಿಯಲ್ಲಿ ಸೋತು ದಿವಾಳಿಯೆದ್ದು ಹೋದರೆ, ಆ ಜಮೀನು ಬ್ಯಾಕು ಮುಂತಾದ ಹಣಕಾಸು ಸಂಸ್ಥೆಗಳಿಗೆ ಆಧಾರವಾಗಿದ್ದಾಗ, ಅಂತಹ ಜಮೀನುಗಳು ಹರಾಜು ಮುಂತಾದ ಸಾಲ ವಸೂಲಾತಿ ಪ್ರಕ್ರಿಯೆಗಳಲ್ಲಿ ಮತ್ತೊಂದು ಕೃಷಿ ಕಂಪನಿಗೇ ಹೋಗುತ್ತವೆ ಎನ್ನುವುದು ಯಾವ ಭರವಸೆ?

     ಅಷ್ಟಕ್ಕೂ ಈ ಕಂಪನಿಗಳು ಈಗಿಂದೀಗಲೇ ಜಮೀನುಗಳನ್ನು ಕ್ರೋಢೀಕರಿಸಿ, ಕೇಂದ್ರ ಸರ್ಕಾರ ಈ ವರ್ಷದ ಮುಗಂಡ ಪತ್ರದಲ್ಲಿ ಹೇಳಿಕಂಡಿರುವಂತೆ, ೨೦೨೫ನೇ ವರ್ಷದ ಹೊತ್ತಿಗೆ ಕೃಷಿ ಉತ್ಪನ್ನವನ್ನು ಈಗಿರುವುದರ ದುಪ್ಪಟ್ಟುಗೊಳಿಸುವ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಬಹುದು?   ದೇಶದಲ್ಲಿ ಒಂದು ಕಡೆ ಕೃಷಿ ಭೂಮಿಯನ್ನು ಕಡಿತ ಮಾಡಿಕೊಳ್ಳುತ್ತಾ, ಮತ್ತೊಂದು ಕಡೆ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಅಧಿಕ ಬೆಳೆ ಬೇಳೆಯುವ ಗುರಿ ಹೊಂದುವುದು ವಿಪರ್ಯಾಸವಲ್ಲವೇಕಡಿಮೆ ಪ್ರಮಾಣದ ಕೃಷಿ ಭೂಮಿಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನ ಮತ್ತು ಆದುನಿಕ ಕೃಷಿ ವಿಧಾನಗಳ ಮೂಲಕ ಕೃಷಿ ಉತ್ಪಾದನೆಯನ್ನು ಅಸಾಧಾರಣವಾಗಿ ಹೆಚ್ಚಿಸಿಕೊಳ್ಳುವ ಸಾಧ್ಯತೆ ಬಗ್ಗೆ ಯಾರು ಏನೇ ಹೇಳಿದರೂ ಅದು ನಂಬುವಂತಹುದಲ್ಲ.  ಭಾರತದಲ್ಲಿ ಈಗಾಗಲೇ ಅಂದರೆ, ೨೦೧೪ರಿಂದ ಈಚೆಗೆ ಪೌಷ್ಟಿಕಾಂಶಗಳ ಕೊರತೆ ಮತ್ತು ಆಹಾರ ಅಭದ್ರತೆ ದರ ಹೆಚ್ಚಾಗುತ್ತಿರುವುದನ್ನು ಜಾಗತಿಕ ಮಟ್ಟದ ಅದ್ಯಯನಗಳು ಹೊರ ಹಾಕಿವೆ.  ಉದಾಹರಣೆಗೆದಿನಾಂಕ; ೨೪.೮.೨೦೨೦ರಂದು ದಿ ಹಿಂದುಪತ್ರಿಕೆಯ ಸಂಪಾದಕಿಯ ವಿಭಾಗದ ಪುಟದಲ್ಲಿ ಪ್ರಕಟವಾಗಿರುವ ವೈಶಾಲಿ ಬನ್ಸಾಲ್ ಅವರ ಮೋರ್ ಎವಿಡೆನ್ಸ್ ಆಫ್ ಇಂಡಿಯಾಸ್ ಫುಡ್ ಇನ್‌ಸೆಕ್ಯುರಿಟಿಎನ್ನುವ ಲೇಖನದಲ್ಲಿ, ವಿಶ್ವ ಸಂಸ್ಥೆ ಬಿಡುಗಡೆಗೊಳಿಸಿರುವ ಜಾಗತಿಕ ಅಧ್ಯಯನವೊದರ ವರದಿ ಆಧರಿಸಿ, ಭಾರತದಲ್ಲಿ ೨೦೧೪-೧೫ನೇ ಸಾಲಿನಲ್ಲಿ ಅಪೌಷ್ಟಿಕತೆ ಮತ್ತು ಆಹಾರ ಅಭದ್ರತೆಗೆ ಒಳಗಾದ ಜನಸಂಖ್ಯೆ, ಒಟ್ಟು ಜನಸಂಖ್ಯೆಯ ಶೇ.೨೭.೮ ಇದ್ದದ್ದು, ೨೦೧೭-೧೮ನೇ ವರ್ಷದ ಹೊತ್ತಿಗೆ ಶೇ. ೩೧.೬ ಆಗಿರುವುದನ್ನು ಪ್ರಸ್ತಾಪಿಸಲಾಗಿದೆ.  ಕಳೆದ ಏಳು ದಶಕಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರ ಇನ್ನೂ ಸ್ಥಿರಗೊಂಡಿಲ್ಲ.  ಸ್ವಾತಂತ್ರ್ಯ ಬಂದಾಗ ಇದ್ದ ಸುಮಾರು ೩೬ ಕೋಟಿ ಜನಸಂಖ್ಯೆ ಈಗ ೧೩೬ ಕೋಟಿಗೂ ಹೆಚ್ಚಾಗಿದೆ.  ಅಂದರೆ, ಕಳೆದ ೭೦ ವರ್ಷಗಳಲ್ಲಿ ೧೦೦ ಕೋಟಿ ಈ ದೇಶದ ಜನಸಂಖ್ಯೆ ಹೆಚ್ಚಾಗಿದೆ.  ಇದೇ ಅವಧಿಯಲ್ಲಿ ಕೃಷಿ ಭೂಮಿ ಕೃಷಯೇತರ ಉದ್ದೇಶಗಳಿಗೆ ಬಳಕೆಯಾಗಿದೆ, ಕೃಷಿ ಯೋಗ್ಯವಾದ ಒಂದಷ್ಟು ಭೂಮಿ ಕೃಷಿ ಭೂಮಿಯಾಗಿ ಪರಿವರ್ತನೆಗಂಡಿದೆ.  ಈಗ ಪ್ರಶ್ನೆ ಎಂದರೆ, ಇಷ್ಟೊಂದು ಜನಸಂಖ್ಯೆಗೆ ಈ ತಿದ್ದುಪಡಿಗಳ ಮೂಲಕ ಕೃಷಿಯೇತರರನ್ನು ಕೃಷಿಗೆ ಆಹ್ವಾನಿಸಿ ಅಥವಾ ಕಾರ್ಪೊರೇಟ್ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿ, ಕೃಷಿ ಉತ್ಪನ್ನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡು, ಜಾಗತಿಕ ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರಿ ಬರುವ ವರ್ಷಗಳಲ್ಲಿ ಸುಮಾರು ಒಂದೂವರೆ ಶತಕೋಟಿ ತಲುಪಬಹುದಾದ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸುವ ಸಾದ್ಯತೆ.

     ಈ ಸಾಧ್ಯತೆಯ ಬಗ್ಗೆ ಅನುಮಾನ ಹುಟ್ಟುವುದಾದರೆ, ಪ್ರಸ್ತುತ ಭೂ ಸೂಧಾರಣಾ ಕಾಯಿದೆಗೆ ತಂದಿರುವ ತಿದ್ದುಪಡಿ, ಬರುವ ಮೂರ್‍ನಾಲ್ಕು ವರ್ಷಗಳಲ್ಲಿ ಕೃಷಿ ಉತ್ಪನ್ನವನ್ನು ದ್ವಿಗುಣಗೊಳಿಸುವ ಉದ್ದೇಶಕ್ಕೆ ಯಾವುದೇ ಕೊಡುಗೆ ನೀಡಲಾರದು, ದೇಶದ ಆಹಾರ ಭದ್ರತೆಗೆ ನೆರವಾಗಲಾರದು ಎಂದೇ ನಂಬಬೇಕಾಗುತ್ತದೆ.  ಹಾಗಾದರೆ, ಈ ತಿದ್ದುಪಡಿಗಳನ್ನು ಸಾರಾಸಗಟಾಗಿ ಕೈಬಿಡಬೇಕೇ ಅಥವಾ ಇನ್ನೊಂದು ಆಯಾಮಗಳಲ್ಲಿ ಮಾರ್ಪಾಡುಗೊಳಿಸಿ ಜಾರಿಗೊಳಿಸುವ ಮೂಲಕ ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳನ್ನು ಅನ್ವೇಷಿಸಿಕೊಳ್ಳಬೇಕೆಮೊದಲನೆಯದಾಗಿ, ಕೃಷಿ ಭೂಮಿಯ ಮಾಲಿಕತ್ವವನ್ನು ಕೆಲವೇ ವ್ಯಕ್ತಿಗಳಲ್ಲಿ ಅಥವಾ ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕರಿಸುವುದರಿಂದ ಕೃಷಿ ವಲಯವನ್ನು ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸುವಷ್ಟರ ಮಟ್ಟಿಗೆ ಅಭಿವೃದ್ಧಿಗೊಳಸುವುದು ಆಗದ ಮಾತು ಎನ್ನುವುದನ್ನು ಸ್ಪಷ್ಟವಾಗಿ ಮನಗಾಣಬೇಕಿದೆ.  ಏಕೆಂದರೆ, ಅದೇ ಸ್ವಾಮಿನಾಥನ್ ವರದಿಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ೧೯೯೧-೯೨ರಲ್ಲಿ, ೧೫ ಎಕರೆಗಳಿಗಿಂತ ಕಡಿಮೆ ಜಮೀನು ಹೊಂದಿದ್ದ ಶೇ.೮೫ರಷ್ಟು ಗ್ರಾಮೀಣ ರೈತ ಕುಟುಂಬಗಳು ಹೊಂದಿದ್ದ ಜಮೀನು, ದೇಶದ ಒಟ್ಟು ಕೃಷಿ ಜಮೀನಿನ ಶೇ.೫೨ರಷ್ಟು. ಆದರೆ, ಅದೇ ಶೇ.೨.೬೨ರಷ್ಟು ರೈತ ಕುಟುಂಬಗಳು ಹೊಂದಿದ್ದ ಜಮೀನು, ಒಟ್ಟು ಕೃಷಿ ಭೂಮಿಯ ಶೇ.೨೬.೬೭ರಷ್ಟು.  ಉಳಿದ ಶೇ.೧೧ರಷ್ಟು ಕೃಷಿ ಕಾರ್ಮಿಕ ಕುಟುಂಬಗಳಾಗಿದ್ದವು.  ಈ ಭೂ ಮಾಲಿಕತ್ವ ಸಂರಚನೆ ೨೦೧೧ರ ಜನಗಣತಿಯ ಹೊತ್ತಿಗೆ ಮತ್ತಷ್ಟು ಕೇದ್ರೀಕರಣಗೊಂಡಿತೇ ಹೊರತು, ಜಮೀನಿನ ಮಾಲಿಕತ್ವವೇ ಇಲ್ಲದವರಿಗಾಗಲೀ ಮತ್ತು ಅತೀ ಕಡಿಮೆ ಇದ್ದವರಲ್ಲಾಗಲೀ ವಿಕೇಂದ್ರೀಕರಣಗೊಳ್ಳಲಿಲ್ಲ. 

     ಒಟ್ಟಿನಲ್ಲಿ, ಸ್ವಾತತ್ರ್ಯದ ನಂತರದ ವರ್ಷಗಳಲ್ಲಿ ಭೂ ಮಾಲಿಕತ್ವ ಕೂಡ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಆರ್ಥಿಕ ಸಂಪತ್ತು-ಸಂಪನ್ಮೂಲಗಳಂತೆ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುತ್ತಾ ಬಂದಿದೆಯೇ ಹೊರತು, ಬಹುಸಂಖ್ಯಾತ ಸಣ್ಣ ಸಣ್ಣ ರೈತರಲ್ಲಿ ಹಂಚಿ ಹೋಗಲಿಲ್ಲ.  ಅಂದರೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಜಾರಿಗಾಗಿ ತಂದ ಕೆಲವು ಕಾನೂನುಗಳಂತೆ, ಈ ಭೂ ಸುಧಾರಣಾ ಕಾಯೆದೆ ಕೂಡ ತನ್ನ ಆಶಿತ ನೆಲೆಯಲ್ಲಿ ಜಾರಿಗೊಳ್ಳಲಿಲ್ಲ.  ಆದ್ದರಿಂದ ಸ್ವಾಮಿನಾಥನ್ ವರದಿಯಲ್ಲಿ ಸ್ಪಷ್ಟವಾಗಿ ಗರಹಿಸಿರುವ ಪ್ರಕಾರ, ಇವತ್ತಿನ ರೈತರ ಸಮಸ್ಯೆಗಳಿಗೆ, ಆತ್ಮಹತ್ಯೆಯಂತಹ ಪ್ರಕರಣಗಳಿಗೆ ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸಲು ಸಾಧ್ಯವಾಗದ  ಅನಾರ್ಥಿಕ ಎನ್ನುವ ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿ ಕಾರಣವಾಗಿರದೆ, ಬೀಜ-ಗೊಬ್ಬರ, ಕಳೆ-ತುಳಿಸು, ಉಳುಮೆ ಮುಂತಾದುವುಗಳಿಗೆ ಸಂಬಂಧಿಸಿದ ಖರ್ಚು-ವೆಚ್ಚಗಳ ಹೆಚ್ಚಳ ಹಾಗೂ ಅವುಗಳನ್ನು ಸರಿದೂಗಿಸಿ ಒಂದಷ್ಟು ಹೆಚ್ಚುವರಿ ಆದಾಯ ಕೈಗೆ ಬರುವಂಥ ಬೆಲೆ ಸಿಗದೆ ಇರವುದು ಕಾರಣ ಎನ್ನುದನ್ನೂ ಸಹ ವರದಿಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ.  ಆದ್ದರಿಂದ ಕೃಷಿ ಅಭಿವೃದ್ಧಿ ಎಂದರೆ, ಸಣ್ಣ ಸಣ್ಣ ಹಿಡುವಳಿದಾರರಿಂದ ಭೂಮಿಯನ್ನು ಕಸಿದುಕೊಂಡು, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಗ್ಗೂಡಿಸಿ ಕೃಷಿಕರನ್ನು ಕೃಷಿ ಕಾರ್ಮಿಕರನ್ನಾಗಿಯೋ, ನಗರದ ಹೊರ-ಒಳ ವಲಯದ ಕೊಳಗೇರಿ ನಿವಾಸಿಗಳನ್ನಾಗಿಸುವುದಾಗಿರದೆ, ಇದೇ ರೈತರ ದಾರುಣ ಸ್ಥಿತಿಯನ್ನು ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಯಿಂದ ನೋಡಿ ಅವರಿರುವ ಗ್ರಾಮಗಳಲ್ಲೇ ಸುಸ್ಥಿರ ಬದುಕನ್ನು ಕಂಡುಕೊಳ್ಳಲು ನೆರವಾಗುವುದಾಗಿದೆ.  ನೊಬೆಲ್ ಪ್ರಶಸ್ತಿ ಪುರಸ್ಕೃತ ಶುಮೇಕರ್ ಅವರ ಸಣ್ಣದು ಸುಂದರ, ಮತ್ತು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗಳ ನೆಲೆಯಲ್ಲಿ ಇವತ್ತಿನ ಸಂದರ್ಭಗಳನ್ನು ಅನುಸರಿಸಿ ಭೂಮಿಯೂ ಒಳಗೊಂಡಂತೆ ಉತ್ಪಾದನಾ ಸಂಪನ್ನೂಲಗಳ ಮಾಲೀಕತ್ವವನ್ನು ವ್ಯಕ್ತಿ ಕೇಂದ್ರವಾಗಿಸದೆ ಸಾಂಸ್ಥೀಕರಿಸಿ, ಉತ್ಪಾದಕತೆ ಹೆಚ್ಚಿಸುವ ವ್ಯವಹಾರ-ವಹಿವಾಟು ಸಂಘಟನೆಗಳನ್ನು ರಚಿಸಿ, ಮಾರುಕಟ್ಟೆ ನೆರವು ನೀಡಿ ನಿರಂತರವಾದ ಮೇಲಿಸ್ತುವಾರಿ ಮತ್ತು ನಿಗಾ ಇಡುವ ಸರ್ಕಾರದ ಜವಾಬ್ದಾರಿಯೇ ಇವತ್ತಿನ ಅಭಿವೃದ್ಧಿ ಅಗತ್ಯವಾಗಗಿದೆ.   

     ಎರಡನೆಯದಾಗಿ, ಕೃಷಿ ಭೂಮಿಯನ್ನು ಕಾರ್ಪೊರೇಟ್ ವಲಯಕ್ಕೆ ಬಿಟ್ಟು ಕೊಡುವುದರ ಬದಲಾಗಿ ೧೯೩೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ತನ್ನ ವಾರ್ಷಿಕ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಅನುಸರಿಸಿ, ಸ್ವಾತಂತ್ರ್ಯ ನಂತರದ ಎರಡು ದಶಕಗಳಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಿ, ಒಮ್ಮತ ಮೂಡದ ಕಾರಣಕ್ಕೆ ಯಶಸ್ವಿಯಾಗದೇ ಹೋದ ಸಹಕಾರಿ ಬೇಸಾಯ ಪದ್ದತಿಯನ್ನು ಮರು ಅಸ್ತಿತ್ವಕ್ಕೆ ತಂದು ಬೆಳೆಸುವುದು.  ಹೇಳಲು-ಕೇಳಲು ಇದೊಂದು ಆದರ್ಶವೇ ಹೊರತು ಜಾರಿಗೊಳಿಸಲು ಸಾಧ್ಯವಾದುದಲ್ಲ ಎನ್ನು ಮನೋಭಾವನೆ ಬಹಳಷ್ಟು ಜನರದ್ದಾಗಿದೆ.  ಎಪ್ಪತ್ತರ ದಶಕದದಲ್ಲಿ ಶುಮೇಕರ್ ಅವರು ಚಿಕ್ಕದು ಸುಂದರಎನ್ನುವುದನ್ನು ಆರ್ಥಿಕ ಅಭಿವೃದ್ಧಿ ಸಿದ್ಧಾಂತವಾಗಿಸಿದಾಗ ಇದೇ ಅಭಿಪ್ರಾಯಗಳು ಸುದ್ದಿಯಾದವು.  ಅವರ ನಂತರ ಅವರ ಪತ್ನಿ ಮತ್ತು ಶಿಷ್ಯರುಗಳು ಕೂಡಿ ಅವರಿಗೆ ಬಂದ ನೊಬಲ್ ಪ್ರಶಸ್ತಿಯ ಮೊತ್ತವನ್ನೇ ಬಂಡವಾಳವಾಗಿಟ್ಟುಕೊಂಡು ಸಣ್ಣದು ಸುಂದರ ಅಷ್ಟೇ ಅಲ್ಲ, ಅದು ಸಾಧ್ಯವು ಹೌದುಎಂದು ಪ್ರಾಯೋಗಿಸಿ ತೋರಿಸಿದರು.  ಆ ಪ್ರಯೋಗ, ಪ್ರಾತ್ಯಕ್ಷಿಕೆ ವಿವರಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದ ಪುಸ್ತಕವೇ ಸ್ಮಾಲ್ ಈಜ್ ಪಾಸಿಬಲ್.  ಒಬ್ಬ ವ್ಯಕ್ತಿ ಮತ್ತು ಒಂದು ಚಿಕ್ಕ ಗುಂಪು ಜಾಗತಿಕ ಮಟ್ಟದ ಇಂಥ ಪ್ರಯೋಗಗಳನ್ನು ಮಾಡುವುದು ಸಾಧ್ಯವಾಗುವುದಾದರೆ, ಕ್ರಿಯಾಶೀಲ ಗಟ್ಟಿ ಸರ್ಕಾರಕ್ಕೆ ಸಹಕಾರಿ ಬೇಸಾಯ ಪದ್ದತಿಯನ್ನು ಸಾಧ್ಯಗೊಳಿಸುವುದು ಅಸಾಧ್ಯವೇನಲ್ಲ.  ಇದರತ್ತ ಆಸಕ್ತಿಯಿಲ್ಲದಿದ್ದರೆ, ಆವತ್ತು ಯಾವ ಕಾರಣಗಳಿಂದಾಗಿ ಈ ಬೇಸಾಯ ಪದ್ದತಿ ಯಶಸ್ವಿಯಾಗಲಿಲ್ಲವೋ ಆ ಕಾರಣಗಳು ಇವತ್ತು ಇಲ್ಲವೇ, ಎನ್ನುವ ಪ್ರಶ್ನೆಯೊಂದಿಗೆ ಈ ಬಗೆಗಿನ ಚಿಂತನೆಯನ್ನೇ ತಳ್ಳಿಹಾಕಬಹುದು. 

     ಜಾಗತಿಕ ಕೃಷಿ ವಲಯದಲ್ಲಿ ಇವತ್ತು ಆಗುತ್ತಿರುವ ಆಧುನಿಕ ಅಭಿವೃದ್ಧಿ ಬೆಳವಣಿಗೆಳನ್ನು ಗಮನಿಸಿ, ದೊಡ್ಡ ಪ್ರಮಾಣದ ಕೃಷಿ ವ್ಯವಸ್ಥೆಯಿಂದ ಮಾತ್ರ ಬಾರತದಲ್ಲಿ ಸೂಕ್ತ ಆಹಾರ ರಕ್ಷಣೆ ಒದಗಿಸಲು ಸಾದ್ಯ ಎನ್ನುವ ತೀರ್ಮಾನಕ್ಕೆ ಭಾರತ ಸರ್ಕಾರವಾದರೂ ಕಳೆದ ದಶಕದ ಆರಂಭದಲ್ಲಿ ಬಂದಿತೆಂದು ಕಾಣುತ್ತದೆ.  ಸಣ್ಣ ಸಣ್ಣ ರೈತರ ಭೂ ಮಾಲಿಕತ್ವವನ್ನು ಕಸಿದುಕೊಳ್ಳದೆ ಕೃಷಿ ಜಮೀನನ್ನು ಒಟ್ಟುಗೂಡಿಸಲು ಇರುವ ಸಾದ್ಯತೆಗಳನ್ನು ಸೂಚಿಸಲು “Expert Committee on Land Leasing”,  ಎನ್ನುವ ಪರಿಣಿತರ ಸಮಿತಿಯೊಂದನ್ನು ನೇಮಿಸಿತು.  ಅದು ೨೦೧೬ರಲ್ಲಿ ಕೊಟ್ಟ ತನ್ನ ವರದಿಯಲ್ಲಿ ಕೃಷಿಕರ ಜಮೀನನ್ನು ಒಗ್ಗೂಡಿಸುವಾಗ ಅದನ್ನು ಸಾರಾಸಗಟಾಗಿ ಕೊಳ್ಳದೆ ಅಥವಾ ಕಡ್ಡಾಯವಾಗಿ ವಶಪಡಿಸಿಕೊಳ್ಳದೆ ಗುತ್ತಿಗೆಯ ಮೇಲೆ ಪಡೆಯುವುದು ಮತ್ತು ರೈತರು ನಿರ್ಭೀತಿಯಿಂದ ಅದನ್ನು ಕೊಡಬಹುದೆಂದು ಶಿಫಾರಸ್ಸು ಮಾಡಿದೆ.  ಸಮಿತಿಯ ಶಬ್ದಗಳಲ್ಲೇ ಇದನ್ನು ಹೇಳುವುದಾದರೆ, “the critical need of today is to leagally allow farmers to lease out without any fear of losing land ownership right and provide support for their upward occupational mobility by way of access to either self-employment or wage employment (p. 15)  ಎಂದಿದೆ.  ಇದನ್ನು ಸಂಜಯ್ ಚಕ್ರವರ್ತಿ, ಎಸ್. ಚಂದ್ರಶೇಖರ್ ಮತ್ತು ಕಾರ್ತಿಕೇಯ ನರಪರಾಜು ಎನ್ನುವ ಸಂಶೋಧಕರು ತಮ್ಮ, “Land distribution, Income Generation and Inequality in India’s Agricultural Sector”,  ಎನ್ನುವ ಶೀರ್ಷಿಕೆಯ ಸಂಶೋಧನಾ ಪ್ರಬಂಧದಲ್ಲಿ ವಿವರಿಸಿದ್ದಾರೆ (ದಿ ರೆವ್ಯ್ಯೂ ಆಫ್ ಇನ್ಕಮ್ ಅಂಡ್ ವೆಲ್ತ್’, ಪು. ಎಸ್೨೦೧).   

ಇದೇ ಅಧ್ಯಯನಾಂಶಗಳನ್ನು ಮುಂದಿಟ್ಟುಕೊಂಡು, ಸಹಕಾರೀ ಸಂಯುಕ್ತ ಬೇಸಾಯ ಪದ್ದತಿ ಹೇಗೆ ಕಾರ್ಪೊರೇಟ್ ಕೃಷಿ ಪದ್ದತಿಗೆ ಪ್ರಬಲ ಪರ್ಯಾಯವಾಗಬಹುದೆನ್ನುವದನ್ನು ಸಂಕ್ಷಿಪ್ತವಾಗಿ ಗಮನಿಸಬಹುದು.  ಸಹಕಾರಿ ಚಳುವಳಿ ೨೦ನೇ ಶತಮಾನದ ಆರಂಭದ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆರಂಭವಾದರೂ ಸಹಕಾರಿ ಬೇಸಾಯ ಪದ್ದತಿ ನಮ್ಮ ಹಳ್ಳಿಗಳಿಗೆ ಹೊಸದೇನೂ ಆಗಿರಲಿಲ್ಲ.  ಊರುಗಳಲ್ಲಿ ಅಕ್ಕ ಪಕ್ಕದ ಮನೆಯವರೋ, ಹೊಲದವರೋ ಜೊತೆಯಗಿ ಉಳುವುದು, ಬಿತ್ತುವುದು, ಕಳೆ ತೆಗೆಯುವುದು, ಸುಗ್ಗಿ ಮಾಡುವುದು ಸಹಜವಾಗಿತ್ತು.  ಸಹಕಾರಿ ಬೇಸಾಯ ಅದರ ಮುಂದುವರೆದ ಭಾಗವಾಗಿ ಯೋಜಿತ ರೀತಿಯಲ್ಲಿ ಪರಿಕಲ್ಪನೆಗೊಂಡು, ತುಂಡು ಭುಮಿ ಇರುವವರು ಸಹಕಾರಿ ತತ್ವದ ಅಡಿಯಲ್ಲಿ ಸಂಘಟಿತರಾಗಿ ವಿವಿಧ ವಿಧಾನಗಳಲ್ಲಿ ತಮ್ಮ ಜಮೀನುಗಳನ್ನು ಒಗ್ಗೂಡಿಸಿಕೊಂಡು, ಸೂಕ್ತವಾದ ಬೆಳೆಗಳನ್ನು ನಿರ್ಧರಿಸಿ, ಒಟ್ಟಿಗೆ ಕೃಷಿ ಕೆಲಸಗಳಲ್ಲಿ ಪಾಲ್ಗೊಂಡು, ಬಂದ ಉತ್ಪನ್ನಗಳನ್ನು ತಾವು ಯಾವ ಪ್ರಮಾಣದಲ್ಲಿ ಭೂಮಿಯನ್ನು ಸಂಘಕ್ಕೆ ಬಿಟ್ಟುಕೊಟ್ಟಿರುತ್ತಾರೋ ಅದೇ ಪ್ರಮಾಣದಲ್ಲಿ ಹಂಚಿಕೊಳ್ಳುವ ಒಂದು ಔಪಚಾರಿಕ ವಿಧಾನ.  ಸಹಕಾರಿ ಬೇಸಾಯ ಪದ್ದತಿಯ  ಅನುಷ್ಠಾನದ ಮೂಲಕ ಗ್ರಾಮ ಸ್ವರಾಜ್ಯಕಟ್ಟುವ ಕನಸನ್ನು ಕಂಡ ಮಹಾತ್ಮಾ ಗಾಂಧೀಜಿ ಮತ್ತು ಜಮೀನ್ದಾರಿ ಪದ್ದತಿಯ ಶೋಷಣೆಯಿಂದ ರೈತರನ್ನು ವಿಮೋಚನೆಗೊಳಿಸಲು ಸಜ್ಜಾಗಿದ್ದ ಪ್ರಧಾನಿ ಜವಾಹರ್‌ಲಾಲ್ ನೆಹರೂರವರು, ಭೂ ಸುಧಾರಣಾ ಕಾಯಿದೆಯ ಜೊತೆ ಜೊತೆಗೆ, ಸಹಕಾರಿ ಬೇಸಾಯ ಪದ್ದತಿ ಜಾರಿಗೊಳಿಸಲು ಮುಂದಾದರು.  ಭೂಮಿಯನ್ನು ಒಗ್ಗೂಡಿಸುವಾಗ ರೈತರ ಮೇಲೆ ಒತ್ತಡ ತರುವುದು ಅನಿವಾರ್ಯವಾಗುತ್ತದೆ ಎನ್ನುವ ಕಾರಣ ಒಡ್ಡಿ ಸಿ. ರಾಜಗೋಪಾಲಚಾರಿ, ಚೌಧರಿ ಚರಣ್ ಸಿಂಗ್ ಮತ್ತು ಎನ್. ಜಿ. ರಂಗಾ ಅವರುಗಳು ಈ ಸಾಂಸ್ಥಿಕ ವ್ಯವಸ್ಥೆಯನ್ನು ವಿರೋಧಿಸಿ, ಇದು ರೈತರು ತಮ್ಮ ಜಮೀನನ್ನು ಬಿಟ್ಟುಕೊಡುವಂತೆ ಒತ್ತಡ ತರುತ್ತದೆ ಎಂದು ಆಕ್ಷೇಪಿಸಿದ್ದರು ಮತ್ತು ಅಸಹಕಾರ ಒಡ್ಡಿದ್ದರು.  ಯಾವುದನ್ನು ಇವತ್ತು ಕಾರ್ಪೊರೇಟ್ ಸಂಸ್ಥೆಗಳು ಪೈಪೋಟಿ (ಕಾಂಪಿಟೇಷನ್) ನೆಲೆಯಲ್ಲಿ ನಿರ್ವಹಿಸಲು ಮುಂದಾಗುತ್ತಿದ್ದಾವೆಯೋ, ಅದನ್ನು ಸಹಕಾರಿ (ಕೊ-ಆಪರೇಶನ್) ನೆಲೆಯಲ್ಲಿ ನಿರ್ವಹಿಸಲು ಇಡೀ ದೇಶ ಮತ್ತು ಸರ್ಕಾರ ಸಜ್ಜುಗೊಂಡಿದ್ದವು.

     ಕಾರ್ಪೊರೇಟ್ ಸಂಸ್ಥೆಗಳೆಂದರೆ, ಭಾರತೀಯ ಕಾಪನಿ ಕಾಯಿದೆ ೧೯೫೫ರ ಅಡಿಯಲ್ಲಿ ನೊಂದಾಯಿಸಿಕೊಂಡ ಸಂಯುಕ್ತ ಬಂಡವಾಳ ಸಂಸ್ಥೆಗಳು.  ಸಹಕಾರಿ ಸಂಸ್ಥೆಗಳು ರಾಜ್ಯ ಸಹಕಾರಿ ಸಂಸ್ಥೆಗಳ ಕಾಯಿದೆಯ ಅಡಿಯಲ್ಲಿ ನೊಂದಾಯಿಸಿಕೊಂಡು ಅಸ್ಥಿತ್ವ ಪಡೆದ ಸಂಸ್ಥೆಗಳು.  ಕಾರ್ಪೊರೇಟ್ ಸಂಸ್ಥೆಗಳಲ್ಲಿ ಯಾರು ಎಷ್ಟು ಷೇರುಗಳನ್ನು ಹೊಂದಿರುತ್ತಾನೋ ಅಷ್ಟು ಪ್ರಮಾಣದಲ್ಲಿ ತೀರ್ಮಾನ ಕೈಗೊಳ್ಳುವ ಸಭೆಗಳಲ್ಲಿ ಮತ ಹಾಕಲು ಹಕ್ಕನ್ನು ಹೊಂದಿರುತ್ತಾನೆ.  ಇಲ್ಲಿ ಹೆಚ್ಚು ಷೇರುಗಳನ್ನು ಕೊಂಡವರು ಬಂಡವಾಳಶಾಹಿ ಶಕ್ತಿಯನ್ನು ಗಳಿಸಿ ಇಡೀ ಕಂಪನಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಹಜ.  ಆದರೆ, ಸಹಕಾರಿ ಸಂಘಟನೆಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಒಬ್ಬರು ಒಂದು ಷೇರನ್ನು ಮಾತ್ರ ಕೊಳ್ಳಲು ಅವಕಾಶವಿರುತ್ತದೆ ಮತ್ತು ಒಂದು ಷೇರಿಗೆ ಒಂದು ಮತ ಹಾಕುವ ಹಕ್ಕಿರುತ್ತದೆ.  ಇಲ್ಲಿ ಸಂಸ್ಥೆಯನ್ನು ನಡೆಸುವ ಅಧಿಕಾರ ಯಾರೊಬ್ಬರಲ್ಲಿ ಕೇಂದ್ರೀಕರಣಗೊಳ್ಳಲು ಸಾಧ್ಯವಿಲ್ಲ.  ಈಗಾಗಲೇ ಭಾರತದಲ್ಲಿ ಕೃಷಿ ವಲಯದ ಒಂದು ಭಾಗವಾದ ಹೈನುಗಾರಿಕೆಯಲ್ಲಿ ಜಗತ್ತಿನಲ್ಲಿಯೇ ಮಾದರಿಯಾದ ವಿಕ್ರಮ ಸಾಧನೆಗಳಿಸಿದ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಇದಕ್ಕೆ ಸಾಕ್ಷಿಯಗಿದೆ.  ಹಾಗೆಯೇ ತೋಟಗಾರಿಕೆ ಮತ್ತು ಸಾಲ ನೀಡುವ ಬ್ಯಾಂಕ್ ವ್ಯವಹಾರ ಕ್ಷೇತ್ರದಲ್ಲಿಯೂ ಈ ಸಂಸ್ಥೆಗಳು ಅಭಿವೃದ್ಧಿಗೆ ಹೆಸರಾಗಿವೆ.  ಈಗಿನ ಭೂ ಸುಧಾರಣಾ ಕಾಯಿದೆಗೆ ತಂದಿರುವ ತಿದ್ದುಪಡಿಯಿಂದಾಗಿ ಕಂಪನಿಗಳು ರೈತರ ಜಮೀನುಗಳನ್ನು ಕೊಂಡು ಮಾಲಿಕತ್ವವನ್ನು ಪಡೆಯುತ್ತವೆ.  ಸಹಕಾರಿ ಬೇಸಾಯ ಪದ್ದತಿಯಲ್ಲಿ ರೈತರು ಭೂಮಿಯನ್ನು ಇಂತಿಷ್ಟು ವರ್ಷಗಳಿಗೆ ಎಂದು ಭೌತಿಕವಾಗಿ ಸಹಕಾರ ಸಂಘಕ್ಕೆ ಉಳುಮೆಗಾಗಿ ಬಿಟ್ಟುಕೊಡುತ್ತಾರೆಯೇ ಹೊರತು ಮಾಲಿಕತ್ವವನ್ನಲ್ಲ.  ಜೊತೆಗೆ, ಅವರು ಆ ಕೃಷಿ ಜಮೀನುಗಳಲ್ಲಿ ಕೆಲಸ ಮಾಡಿದ್ದಕ್ಕೆ ಇತರೆ ಕಾರ್ಮಿಕರಿಗೆ ಸಿಗುವಂತೆ ಕೂಲಿಯೂ ಸಿಗುತ್ತದೆ.  ಇಲ್ಲಿ ಭೂಮಿಯನ್ನು ಒಪ್ಪಿಸಿ ಸಹಕಾರಿ ಸಂಘದ ಸದಸ್ಯರಾದ ಎಲ್ಲರಿಗೂ ಇತರರೊಂದಿಗೆ ಸಹಕರಿಸಿ ಕೆಲಸ ಮಾಡುತ್ತಲೇ ತಮ್ಮ ಸ್ವಂತ ಆರ್ಥಿಕ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ಅವಕಾಶವಿರುತ್ತದೆ.

     ಮುಂದುವರೆದು ಹೇಳುವುದಾದರೆ, ಇಲ್ಲಿ ಒಂದು ಊರಿಗೆ ಬೇಕಾದ ಎಲ್ಲ ಕೃಷಿ ಬೆಳೆಗಳನ್ನು ಬೆಳೆಯಲು ಅವಕಾಶವಿದೆ.  ಜೊತೆಗೆ ಕೃಷಿಗೆ ಪೂರಕವಾದ ವೃತ್ತಿ, ಕಸುಬುಗಳನ್ನೂ ಮಾಡಿಕೊಳ್ಳಬಹುದು.  ಹೈನುಗಾರಿಕೆ, ಮೀನುಗಾರಿಕೆ, ಕುರಿ-ಕೋಳಿ ಸಾಕಣಿಕೆಗಳನ್ನು ಸ್ವತಂತ್ರವಾಗಿಯೂ ಮಾಡಿಕೊಳ್ಳಬಹುದು.  ಕೃಷಿ ವಲಯದಲ್ಲಿ ಯಾವ ತಂತ್ರಜ್ಞಾನ, ಆಧುನಿಕರಣ, ವೈಜ್ಞಾನಿಕ ವಿಧಾನ, ಒಗ್ಗೂಡಿದ ಮಾರುಕಟ್ಟೆ ಸೌಲಭ್ಯ ಮೊದಲಾದುವುಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಯಶಸ್ವಿಯಾಗಿ ನಿರ್ವಹಿಸಿ ದೊಡ್ಡ ಪ್ರಮಾಣದ ಆರ್ಥಿಕತೆಯ ಅನುಕೂಲಗಳನ್ನು ಪಡೆಯಲು ಸಾಧ್ಯ ಎಂದು ವೈಭವಿಕರಿಸಲಾಗುತ್ತಿದೆಯೋ ಅವೆಲ್ಲ ಅನುಕೂಲಗಳನ್ನು ಸಹಕಾರಿ ಸಂಯುಕ್ತ ಬೇಸಾಯ ಪದ್ದತಿಯಲ್ಲಿ ಪಡೆಯಬಹುದು.  ಆದಾಗ್ಯೂ, ಭಾರತದಲ್ಲಿ ಸಹಕಾರಿ ವಲಯದ ಕೆಲವೊಂದು ಸಂಸ್ಥೆಗಳು ವಿಫಲವಾಗಲು ಕಾರಣ ಈ ಸಂಸ್ಥೆಗಳಲ್ಲಿ ನುಸುಳಿಕೊಂಡ ಸ್ವಾರ್ಥಿಗಳೇ ಹೊರತು ತತ್ತ್ವಗಳಲ್ಲ.  ಒಂದೇ ಮಾತಿನಲ್ಲಿ ಹೇಳುವುದಾದದರೆ, ಕಾರ್ಪೊರೇಟ್ ಸಂಸ್ಥೆಗಳನ್ನು ಬೆಳೆಸುವುದರಿಂದ ಬೃಹತ್ ಬಂಡವಾಳಶಾಹಿ ಶಕ್ತಿ ಬೆಳೆಯುತ್ತದೆ; ಸಹಕಾರಿ ವಲಯವನ್ನು ಬೆಳೆಸುವುದರಿಂದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ, ಸಮ ಸಮಾಜದ, ಸಮಾಜವಾದೀ ಸಿದ್ಧಾಂತದ ಮೇಲೆ ರೂಪುಗೊಂಡ ದೇಶವೊಂದು ಸಿದ್ಧವಾಗುತ್ತದೆ.  ಹಾಗಾಗಿ, ಯಾವುದನ್ನು ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ್ಯೋತ್ತರದ ಮೂರು ದಶಕಗಳಲ್ಲಿ ಕಾಳಜಿಯಿಂದ ಯೋಚಿಸಿ ಅನುಷ್ಠಾನಗೊಳಿಸಲು ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡಿತ್ತೋ, ಅಂಥ ಸಹಕಾರಿ ಬೇಸಾಯ ಪದ್ದತಿ ಈಗ ಅತ್ಯಂತ ಪ್ರಸ್ತುತ ಮತ್ತು ಆಕರ್ಷಣೀಯ ಎಂದು ಬಿಂಬಿಸಲಾಗುತ್ತಿರುವ ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಬಲ ಪರ್ಯಾಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಮೇಲಿನ ಎಲ್ಲ ವಿಷಯಗಳನ್ನು ಮರು ಚಿಂತನೆಗೆ ತರಲಾಗಿದೆ.                       ***

ಲೇಖನ-ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಆರ್ಥಿಕ ಚಿಂತಕರು, ಚಿತ್ರದುರ್ಗ..

(ಮುಂದಿನ ಸಂಚಿಕೆಯಲ್ಲಿ ಸಹಕಾರಿ ಬೇಸಾಯ ಪದ್ದತಿ ಹಿನ್ನಡೆಗೆ ಸರಿದಿದ್ದು ಅಥವಾ ವಿಫಲವಾಯಿತೇಕೆ ಎನ್ನುವುದನ್ನು ನೋಡೋಣ – ಮುಂದುವರೆಯುವುದು)                                       

              

  

     

 

 

What’s your Reaction?
+1
1
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ