ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಗೆ ಬಿಗ್ ಶಾಕ್ ನೀಡಿದ ಮತದಾರ, ಸ್ಥಳೀಯ ಅಭ್ಯರ್ಥಿ ನವೀನ್ ಪರ ಹೆಚ್ಚುತ್ತಿರುವ ಒಲವು….

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ರಾಜಕೀಯ ಸಾಧನೆ

ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಗೆ ಬಿಗ್ ಶಾಕ್ ನೀಡಿದ ಮತದಾರ, ಸ್ಥಳೀಯ ಅಭ್ಯರ್ಥಿ ನವೀನ್ ಪರ ಹೆಚ್ಚುತ್ತಿರುವ ಒಲವು….

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದ್ದು, ಎರಡೂ ಪಕ್ಷಗಳು ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಆದರೆ ಯಾರು ಎಷ್ಟೇ ಗೆಲುವಿಗೆ ಕಾರ್ಯತಂತ್ರ ರೂಪಿಸಲಿ, ಮತದಾರರು ಮಾತ್ರ ಈಗಾಗಲೇ ಇಂತವರಿಗೆ ಮತ ನೀಡಬೇಕು ಎನ್ನುವ ಸ್ಪಷ್ಟ ತೀರ್ಮಾನ ಮಾಡಿದಂತಿದೆ.

ಇಡೀ ಕ್ಷೇತ್ರದಲ್ಲಿ ಚಂದ್ರವಳ್ಳಿ ಪತ್ರಿಕಾ ತಂಡ ಒಂದು ರೌಂಡ್ ಸುತ್ತಿ ಬಂದಿದ್ದು ಬಹುತೇಕ ಮತದಾರರ ಒಲವು ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಪರವಾದ ಅಲೆ ವ್ಯಕ್ತವಾಗುತ್ತಿದೆ.

ಎಲ್ಲಿಂದಲೋ ಬರುವಂತ ಹಣವಂತರು ಹಣ ಚೆಲ್ಲಿ ಗೆದ್ದು ಹೋದರೆ ಚಿತ್ರದುರ್ಗ ಜಿಲ್ಲೆಯ ಮಾನ-ಅಪಮಾನಗಳು, ಮತದಾರರು ಮಹಾ ಭ್ರಷ್ಟರು, ದುಡ್ಡಿಗಾಗಿ ಮತ ಮಾರಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಶಾಶ್ವತವಾಗಿ ಉಳಿದು ಬಿಡುತ್ತದೆ.

ಈಗಾಗಲೇ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಮತ್ತು ಆಗುತ್ತಿರುವ ಸುದ್ದಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿದರೆ ಚಿತ್ರದುರ್ಗ ಜಿಲ್ಲೆಯನ್ನು ಸಾಕಷ್ಟು ಅಪಮಾನಿಸಲಾಗುತ್ತಿದೆ. ನಿಮ್ಮಲ್ಲಿ ಹಣ ಇದ್ದರೆ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗೆಲ್ಲುಸುತ್ತಾರೆ ಎನ್ನುವ ಸಂದೇಶ ಕರೆಗಳು ಇಡೀ ಜಿಲ್ಲೆಯನ್ನು ಮತ್ತಷ್ಟು ಅಪಮಾನಕ್ಕೆ ಒಳಗಾಗುವಂತೆ ಮಾಡಿದೆ.

ಈ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷ ಹಣವಂತರನ್ನು ಹುಡುಕಿ ಚಿತ್ರದುರ್ಗ ಕ್ಷೇತ್ರಕ್ಕೆ ತಂದು ನಿಲ್ಲಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಅನೇಕರು, ಯಾರು ಎಷ್ಟೇ ದುಡ್ಡು ನೀಡಲಿ, ಆದರೆ ಜಿಲ್ಲೆಯ ಮರ್ಯಾದೆ ಪ್ರಶ್ನೆಯಾಗಿದ್ದು ಮತವನ್ನು ಕೇವಲ ಕೆ.ಎಸ್.ನವೀನ್ ಅವರಿಗೆ ಹಾಕುತ್ತೇವೆ ಎಂದು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ.

ಹಾಲಿನ ದುಡ್ಡು ಹಾಲಿಗೆ, ನೀರಿನ ದುಡ್ಡು ನೀರಿಗೆ-

ತಾವುಗಳು ಹೆಚ್ಚಿನ ಹಣ ಪಡೆದು ಮತ ನೀಡದೇ ಮೋಸ ಮಾಡಿದರೆ ಹೇಗೆಂದು ಪತ್ರಿಕಾ ತಂಡ ಪ್ರಶ್ನಿಸಿದರೆ, ಸರ್ ದುಡಿದ ದುಡ್ಡನ್ನು ನೀರಿನಂತೆ ಯಾರೂ ಖರ್ಚು ಮಾಡಲು ಸಾಧ್ಯವಿಲ್ಲ, ಅಷ್ಟೊಂದು ಹಣವನ್ನು ಖರ್ಚು ಮಾಡುವವರು ಸಾಕಷ್ಟು ಅಕ್ರಮ-ಅನ್ಯಾಯದಿಂದಲೇ ದುಡಿದಿರುತ್ತಾರೆ. ಹಾಲಿನ ದುಡ್ಡು ಹಾಲಿಗೆ, ನೀರಿನ ದುಡ್ಡು ನೀರಿಗೆ ಅಲ್ಲವೇ, ಇಂತಹ ಹಣ ಪಡೆದು ಮೋಸ ಮಾಡಿದರೂ ದೇವರು ಮೆಚ್ಚಿಕೊಳ್ಳುತ್ತಾನೆ, ಇಲ್ಲಿ ಮೋಸದ ಪ್ರಶ್ನೆಯೇ ಬರುವುದಿಲ್ಲ ಎಂದು ಬಿಗುಮಾನದಿಂದ ಮತದಾರರು ಅಲ್ಲಲ್ಲಿ ಹೇಳುತ್ತಿರುವುದು ಗಮನಕ್ಕೆ ಬಂದಿತ್ತು.

ಈಗಾಗಲೇ ಪುರುಷ ಮತದಾರರಿಗೆ ಬೆಳ್ಳಿ ಗಣೇಶ್, ಮಹಿಳಾ ಮತದಾರರಿಗೆ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಿದ್ದರಂತಲ್ಲ ಎಂದು ಪ್ರಶ್ನಿಸಿದರೆ, ಬೆಳ್ಳಿ ಗಣೇಶನನ್ನಾದರೂ ನೀಡಲಿ, ರೇಷ್ಮೆ ಸೀರೆ, ಕಂಚಿ ಸೀರೆಯನ್ನಾದರೂ ನೀಡಲಿ ಎಲ್ಲವನ್ನೂ ಪಡೆದು ಹಣವಂತರಿಗೆ ಬುದ್ದಿ ಕಲಿಸುವ ಸಮಯ ಇದು, ಮತದಾರರು ದಡ್ಡರಲ್ಲ, ಹಣ ಇಲ್ಲದಂತ ಸಾಮಾನ್ಯರು ಗೆಲ್ಲಬೇಕು ಎನ್ನುವ ಮಾತುಗಳು ಮತದಾರರಿಂದ ವ್ಯಕ್ತವಾಗುತ್ತಿವೆ.

ಹಣ ಇದೆ ಎಂದು ಎರಡು ಸಲ ರಘು ಆಚಾರ್ ಅವರನ್ನು ಜಿಲ್ಲೆಯ ಜನರು ಗೆಲ್ಲಿಸಿದ್ದಾರೆ. ಯಾವ ಗ್ರಾಮ ಪಂಚಾಯಿತಿಗಳಿಗೆ ಅವರು ಎಷ್ಟು ಸಲ ಭೇಟಿ ನೀಡಿ ಪಂಚಾಯಿತಿ ಅಥವಾ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ನಿವಾರಿಸಿದ್ದಾರೆ, ಮತ್ತೇಕೆ ಅಂತವರಿಗೆ ಮತ ನೀಡಿ ನಮ್ಮ ಮತದ ಮೌಲ್ಯಕ್ಕೆ ಅಪಮಾಲ್ಯ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆಯನ್ನೂ ಮತದಾರರೇ ಮುಂದಿಡುತ್ತಾರೆ.

ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಯಾವುದೇ ಹಣ, ಆಮಿಷಗಳಿಗೆ ಬಲಿಯಾಗದೆ ಸ್ಥಳೀಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ. ಹಾಗಾಗಿ ಈ ಚುನಾವಣಾ ಫಲಿತಾಂಶ ಮುಂದಿನ ಎಲ್ಲ ಚುನಾವಣೆಗಳಿಗೂ ದಿಕ್ಸೂಚಿ ಆಗಲಿದೆ ಅಲ್ಲದೆ ಭವಿಷ್ಯದ ಚುನಾವಣೆಗಳಲ್ಲಿ ಹಣವಂತರು ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸಂದೇಶವು ರವಾನೆ ಆಗಲಿದೆ ಎಂದು ಎದೆ ಉಬ್ಬಿಸಿ ಮತದಾರರು ಹೇಳುತ್ತಿದ್ದಾರೆ.

ಮಾಡಿದಷ್ಟು ನೀಡು ಭಿಕ್ಷೆ-

ನಮ್ಮ ಹಟ್ಟಿ ತಿಪ್ಪೇಶನ ಕೂಲಿ ಮಹಿಮೆ ಗೊತ್ತಿಲ್ಲವೇ, ನಾಯಕನಹಟ್ಟಿಯ ಕೆರೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೈಗಳ್ಳರು, ಶ್ರಮಪಟ್ಟು ಕೂಲಿ ಮಾಡುವವರು, ಕಳ್ಳ ಕಾಕರು ಸಂಜೆ ಆಗುತ್ತಿದ್ದಂತೆ ಕೂಲಿ ನೀಡುವಂತೆ ಬಂದು ಕೇಳುತ್ತಾರೆ, ಆಗ ಹಟ್ಟಿ ತಿಪ್ಪೇಶ ಎದುರು ಮಾತನಾಡದೇ ಆಯ್ತು ಎಲ್ಲರೂ ಸಾಲಾಗಿ ಕುಳಿತು ಮರಳು ಗುಡ್ಡೆ ಮಾಡಿಕೊಳ್ಳಿ ನಂತರ ಅದನ್ನು ಕೆದಕಿ ನೋಡಿ ನಿಮ್ಮ ಕೂಲಿ ಸಿಗುತ್ತದೆ ಎಂದು ಹೇಳುತ್ತಾರೆ. ಎಲ್ಲರಿಗೂ ಅಚ್ಚರಿ, ಕೊನೆಗೆ ಶ್ರಮ ಪಟ್ಟವನಿಗೆ ಪೂರ್ಣ ಕೂಲಿ, ಮೈಗಳ್ಳರಿಗೆ, ಕೆಲಸ ಮಾಡದ ಕಳ್ಳಕಾಕರಿಗೆ ಎಷ್ಟು ಸಿಗಬೇಕೋ ಅಷ್ಟು ಕೂಲಿ ಹಣ ಲಭ್ಯವಾಗಿರುತ್ತದೆ.

ಅದೇ ರೀತಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತವರಿಗೆ ಹಟ್ಟಿ ತಿಪ್ಪೇಶನ ಕೂಲಿ ಖಂಡಿತ ಸಿಗಲಿದೆ, ಈ ಹಿನ್ನೆಲೆಯಲ್ಲೇ ನಾವು ಹೇಳುತ್ತಿರುವುದು ಸ್ಥಳೀಯ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸುವ ಕಾರ್ಯ ಮಾಡುತ್ತೇವೆಂದು ಹೆಮ್ಮೆಯಿಂದ ಮತದಾರರು ತಿಳಿಸುತ್ತಿರುವುದನ್ನು ನೋಡಿದರೆ ಈ ಬಾರಿ ಅಚ್ಚರಿ ಮತ್ತು ಎಚ್ಚರಿಕೆ ಫಲಿತಾಂಶ ಖಂಡಿತ ಮತದಾರ ನೀಡಲಿದ್ದಾರೆ.

ಸ್ಥಳೀಯನಾಗಿರುವ ನಾನು ಕಳೆದ 20 ವರ್ಷಗಳಿಂದ ಕ್ಷೇತ್ರದ ಜನರ ಸೇವೆಯನ್ನು ನಿಸ್ವಾರ್ಥದಿಂದ ಮಾಡಿರುವೆ. ಎರಡು ಸಲ ಸೋತಿರುವೆ. ನೋವಿನಲ್ಲಿದ್ದೇನೆ, ಈ ಬಾರಿ ಖಂಡಿತ ಮತದಾರ ಪ್ರಭುಗಳು ಹೆಚ್ಚಿನ ಮತಗಳನ್ನು ನೀಡಿ ಗೆಲುವಿನ ದಡ ಸೇರಿಸುತ್ತಾರೆ ಎನ್ನುವ ಆತ್ಮವಿಶ್ವಾಸವಿದೆ. ಕೆ.ಎಸ್.ನವೀನ್, ಬಿಜೆಪಿ ಅಭ್ಯರ್ಥಿ.

ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಅವರ ಮೊಬೈಲ್ ಸಂಖ್ಯೆ-70220-85555 ಗೆ ಸಾಕಷ್ಟು ಸಲ ಕರೆ ಮಾಡಿದರೂ ಅವರು ರಿಸೀವ್ ಮಾಡಿ ಮಾತನಾಡಲಿಲ್ಲವಾದ್ದರಿಂದ ಅವರ ಪ್ರತಿಕ್ರಿಯೆ ದಾಖಲು ಮಾಡಲು ಸಾಧ್ಯವಾಗಿಲ್ಲ.

What’s your Reaction?
+1
2
+1
0
+1
0
+1
6
+1
1
+1
2
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply