ಶಾಲಾ ಕಾಲೇಜ್ ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು, ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಲಿ, ರಜೆ ಘೋಷಣೆ ಮಾಡಲಿ…

ಅರೋಗ್ಯ ಕೋರೊನ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಶಾಲಾ ಕಾಲೇಜ್ ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು, ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಲಿ, ರಜೆ ಘೋಷಣೆ ಮಾಡಲಿ…

ವಿಶೇಷ ವರದಿ-

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕು ಸೇರಿದಂತೆ ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿನ ಶಾಲಾ ಕಾಲೇಜ್, ನರ್ಸಿಂಗ್ ಕಾಲೇಜ್ ಗಳಲ್ಲಿ ಕೋವಿಡ್ ಸೋಂಕು ದಿನೇ ದಿನ ಏರಿಕೆಯಾಗುತ್ತಿದೆ. ಅದರಲ್ಲೂ 0 ದಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. 3ನೇ ಅಲೆ ಅಷ್ಟೇನು ಕೆಟ್ಟ ಪರಿಣಾಮ ಬೀರುವುದಿಲ್ಲ ಎನ್ನುವ ಮೊಂಡು ಧೈರ್ಯ ಬಿಟ್ಟು ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಹೆಚ್ಚಿನ ಪರಿಣಾಮ ಆಗುವ ಸಾಧ್ಯತೆ ಇದೆ.

ಈಗಾಗಲೇ ಚಿತ್ರದುರ್ಗ ವ್ಯಾಪ್ತಿಯ 10 ಶಾಲಾ, ಕಾಲೇಜ್, ಪೊಲೀಸ್ ಠಾಣೆ ಮತ್ತಿತರ ಕಡೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿರುವುದರಿಂದ ಸೀಲ್ ಡೌನ್ ಮಾಡಲಾಗಿದೆ. ಹಿರಿಯೂರು ಮತ್ತು ಚಳ್ಳಕೆರೆ ವ್ಯಾಪ್ತಿಯಲ್ಲಿ ತಲಾ ಎರಡು ಕಡೆ ಸೀಲ್ ಡೌನ್ ಮಾಡಿದ್ದರೆ, ಹೊಳಲ್ಕೆರೆಯಲ್ಲಿ ಮೂರು ಕಡೆ ಸೀಲ್ ಡೌನ್ ಮಾಡಲಾಗಿದೆ. ಜನವರಿ-20 ಗುರುವಾರ ಚಿತ್ರದುರ್ಗದ ಬಾಲಕಿಯರ ಕಾಲೇಜ್ ನಲ್ಲಿ 8 ವಿದ್ಯಾರ್ಥಿನಿಯರಿಗೆ, ಹೊಲ್ಕೆರೆಕೆ ತಾಲೂಕಿನ ಮಾಡ್ನಾಯಕನಹಳ್ಳಿ ಸರ್ಕಾರಿ ಶಾಲೆಯ 14 ಮಕ್ಕಳಿಗೆ, ಚಿಕ್ಕಜಾಜೂರಿನ 6 ಮಂದಿಗೆ ಸೋಂಕು ದೃಢ ಪಟ್ಟಿದೆ. ಜಿಲ್ಲೆಯಾದ್ಯಂತ 161 ಶಾಲಾ-ಕಾಲೇಜ್ ಗಳ ಮಕ್ಕಳಿಗೆ ಸೋಂಕು ದೃಢವಾಗಿದೆ. ಹಾಗಾಗಿ ಮತ್ತಷ್ಟು ಸೋಂಕು ಹರಡುವುದನ್ನು ತಡೆಯಬೇಕಾಗಿದೆ. ಅದು ಅಲ್ಲದೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿವ್ ದರ ನಿತ್ಯ ಏರಿಕೆಯಾಗುತ್ತಲೇ ಇದೆ. ಗುರುವಾರದ ಪಾಸಿಟಿವ್ ರೇಟ್ 18.94 ಇದ್ದು, ಕಳೆದ ಹತ್ತು ದಿನಗಳ ಪಾಸಿಟಿವ್ ರೇಟ್ 9.18 ಇದೆ.

3ನೇ ಅಲೆಯ ತೀವ್ರತೆ ಕಡಿಮೆ ಮಾಡಬೇಕಿರುವುದರಿಂದ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಜೊತೆಯಲ್ಲಿ ಶಾಲಾ-ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿ ಸೋಂಕು ಹೆಚ್ಚು ಹರಡದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು.

ಜಿಲ್ಲೆಯಲ್ಲಿ ನಿತ್ಯ ಎರಡು ಸಾವಿರಕ್ಕೂ ಹೆಚ್ಚಿನ ಗಂಟಲು ದ್ರವ ಸಂಗ್ರಹ ಮಾಡಿ ಪರಿಕ್ಷೀಸಲಾಗುತ್ತಿದೆ. ಇದನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಯಲ್ಲಿ ಆಯಾಯ ದಿನ ಫಲಿತಾಂಶವನ್ನು ಅಂದೇ ಪ್ರಕಟಿಸಲು ಆರೋಗ್ಯ ಇಲಾಖೆ ಸಿದ್ಧ ಇರಬೇಕು. ಸೋಂಕು ದೃಢ ಪಟ್ಟ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿತ ಕುಟುಂಬದ ಸದಸ್ಯರ ಗಂಟಲು ದ್ರವ ಸಂಗ್ರಹ ಮಾಡಲು ಸಂಚಾರಿ ವಾಹನ ಬಳಕೆ ಮಾಡಿ ಕೋವಿಡ್ ಪತ್ತೆ ಕಾರ್ಯಕ್ಕೆ ಮುಂದಾಗಬೇಕು. 3ನೇ ಅಲೆ ನಮ್ಮನ್ನು ಏನು ಮಾಡುವುದಿಲ್ಲ ಎಂದು ಬೇಕಾಬಿಟ್ಟಿಯಾಗಿ ಸಾರ್ವಜನಿಕರು ವರ್ತಿಸದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚೆನ್ನಾಗಿ ಕೈ ತೊಳೆಯುವ ಕಾರ್ಯವನ್ನು ಮಾಡಬೇಕಾಗಿದೆ. ಅಗತ್ಯ ಇದ್ದರಷ್ಟೇ ಮನೆಯಿಂದ ಹೊರ ಬರಬೇಕು. ಏನು ಕೆಲಸ ಇಲ್ಲದಿದ್ದರೆ ಮನೆಯಲ್ಲೇ ಇದ್ದು ಕೊರೊನಾ ಹರಡುವುದನ್ನು ತಡೆಯಬೇಕಾಗಿದೆ.

ಕೋವಿಡ್-19 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳಿಗೆ ಸೋಂಕು ತಗುಲುತ್ತಿದ್ದು ಅವರಿಂದ ಇತರರಿಗೆ ವೇಗವಾಗಿ ಪ್ರಸರಣ ಆಗದಂತೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ.

ಕೋವಿಡ್-19 1 ಮತ್ತು 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿ ಇದೀಗ ಮಾರಕ ಸೋಂಕಿನ 3ನೇ ಅಲೆಯ ಭೀತಿ ಕಾಡುತ್ತಿದೆ. ಮಾರಕ  ಕೊರೊನಾ ವೈರಸ್ ಸಾಂಕ್ರಾಮಿಕದ 3ನೇ ಅಲೆಯಿಂದ ಮಕ್ಕಳು, ವಯೋವೃದ್ಧರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸುರಕ್ಷಿತವಾಗಿ ರಕ್ಷಿಸಬೇಕಾಗಿದೆ.

ಕೊರೊನಾ ಸೋಂಕಿನ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 3ನೇ ಅಲೆ ತಹಬದಿಗೆ ಬರುವತನಕ, ಜಿಲ್ಲೆಗಳಲ್ಲಿ ದೈನಂದಿನ ಸೋಂಕಿನ ಪ್ರಮಾಣ ಒಂದಂಕಿಗೆ ಇಳಿಕೆಯಾಗುವ ತನಕ, ಸೋಂಕು ಸಕಾರಾತ್ಮಕ ದರ ಇಳಿಕೆಯಾಗುವ ತನಕ ಸರ್ಕಾರ ಗಮನ ಕೇಂದ್ರೀಕರಿಸಬೇಕು. ಅಗತ್ಯ ಇರುವ ಬೆಡ್, ವೆಂಟಿಲೇಟರ್, ಸೂಕ್ತ ಔಷಧೋಪಚಾರದ ವ್ಯವಸ್ಥೆ, ಆಕ್ಸಿಜನ್ ಪೂರೈಕೆ ಇತ್ಯಾದಿ ವೈದ್ಯಕೀಯ ಸೇವೆಗಳು ಕಡಿಮೆಯಾಗದಂತೆ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅತಿ ಎಚ್ಚರಿಕೆಯ ಹೆಜ್ಜೆ ಇಟ್ಟು ಮಕ್ಕಳು, ವಯೋವೃದ್ಧರು ಇತರೆ ಮಾರಕ ರೋಗಗಳಿಂದ ಬಳಲುತ್ತಿರುವವರನ್ನು 3ನೇ ಅಲೆ ಬಾದಿಸದಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪ್ರತಿಯೊಬ್ಬರು ಪಾಲಿಸಬೇಕು. 

What’s your Reaction?
+1
0
+1
0
+1
0
+1
0
+1
1
+1
0
+1
3
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply