ಮಠದ ಕಪಿಮುಷ್ಠಿ ತಪ್ಪಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸುವುದು ಅಷ್ಟು ಸುಲಭನಾ…?

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಮಠದ ಕಪಿಮುಷ್ಠಿ ತಪ್ಪಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸುವುದು ಅಷ್ಟು ಸುಲಭನಾ…?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಮುಖ್ಯಮಂತ್ರಿಯವರು ಕ್ರಮ ವಹಿಸಲಿದ್ದು ಮುಂದಿನ ಎರಡೂವರೆ ತಿಂಗಳಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತದೆ, ಬೇಕಾದ ಅನುದಾನವನ್ನು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ರೂ.100 ಕೋಟಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಉಳಿದ ಅನುದಾನ ಭರಿಸಲಾಗುವುದು ಎನ್ನುವ ಭರವಸೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ.

ಉತ್ತರ ಕರ್ನಾಟಕ ಹಾಗೂ ಹಳೇ ಮೈಸೂರು ಕರ್ನಾಟಕದ ಹೆಬ್ಬಾಗಿಲಿನಂತಿರುವ ಚಿತ್ರದುರ್ಗ ವಿಶೇಷ ಜಿಲ್ಲೆಯಾಗಿದೆ.  ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಜೂರಾತಿ ತುರ್ತಾಗಿ ಆಗಬೇಕಿದೆ. ಜಿಲ್ಲೆಯನ್ನು ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಪ್ರತಿ ವರ್ಷ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಕ್ಕೂ ಮುನ್ನ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಮೂರು ಮಂದಿ ವೈದ್ಯರು, 25 ತಜ್ಞ ವೈದ್ಯರು, ಒಬ್ಬರು ದಂತ ವೈದ್ಯರು, ನರ್ಸ್ ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಜರುಗಿಸುವ ಅಗತ್ಯವಿದೆ.

ಪ್ರಯತ್ನಗಳು- ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು 2010ರಲ್ಲಿ ಬಿಜಿಪಿ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರು ರಾಜ್ಯದ ಕೊಪ್ಪಳ, ಗದಗ, ಚಾಮರಾಜನಗರ, ಚಿತ್ರದುರ್ಗ, ಮಡಿಕೇರಿ, ಹಾವೇರಿ ಹಾಗೂ ತುಮಕೂರುಗಳಲ್ಲಿ ಆರಂಭಿಸಲು ಮಂಜೂರಾತಿ ನೀಡಿದ್ದರೂ ಆರಂಭವಾಗಲಿಲ್ಲ. ನಂತರ ಅಧಿಕಾರಕ್ಕೆ(2013-2018ರವರೆಗೆ) ಬಂದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಪರಿಷ್ಕೃತ ಆಯವ್ಯಯದಲ್ಲಿ ಕೊಡಗು, ಕೊಪ್ಪಳ, ಕಾರವಾರ, ಚಾಮರಾಜನಗರ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿ ಅತ್ಯಂತ ಹಿಂದುಳಿದ ಚಿತ್ರದುರ್ಗ ಜಿಲ್ಲೆ ಕೈಬಿಟ್ಟರು. ನಂತರ 2018ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಹೊಣೆ ಹೊತ್ತಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸಲು ಕ್ರಮ ವಹಿಸಲಿಲ್ಲ. ನಂತರ 2020ರ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರು ಕಳೆದ ಬಜೆಟ್ ನಲ್ಲಿ ಚಿತ್ರದುರ್ಗಕ್ಕೆ ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸದೇ ಬದಲಿಗೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಸಹಭಾಗಿತ್ವದಲ್ಲಿ ಕಳೆದ ಬಜೆಟ್ ನಲ್ಲಿ ಮಂಜೂರಾತಿ ನೀಡಿದರು. ಆದರೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಖಾಸಗಿ-ಸರ್ಕಾರಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಬೇಡವೇ ಬೇಡ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಬುಡಕಟ್ಟು ಸಮುದಾಯಗಳೇ ಹೆಚ್ಚಿವೆ, ಈ ಎಲ್ಲ ವರ್ಗಗಳು ಅತ್ಯಂತ ಬಡತನದಲ್ಲಿವೆ. ಅಧಿಕ ಹಣ ನೀಡಿ ವೈದ್ಯಕೀಯ ಸೇವೆ ಪಡೆದುಕೊಳ್ಳುವಷ್ಟು ಶ್ರೀಮಂತರಲ್ಲ ಹಾಗಾಗಿ ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಕೇ ಬೇಕು ಇಲ್ಲವಾದರೆ ಸುಮ್ಮನಿರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಆಡಳಿತ ರೂಢ ಸರ್ಕಾರಕ್ಕೆ ನೀಡಿದರು. ಶಾಸಕ ತಿಪ್ಪಾರೆಡ್ಡಿ ಅವರು ಅತ್ಯುತ್ತಮ ನಿರ್ಧಾರ ಮಾಡಿ ಖಾಸಗಿ-ಸರ್ಕಾರಿ ಸಹಭಾಗಿತ್ವದ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆ ತಡೆದರು.

ಈಗ ಮತ್ತೆ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭದ ವಿಷಯ ಮುಂಚೂಣಿಗೆ ಬಂದಿದೆ. ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಟ್ಟು 23 ಎಕರೆ ಭೂಮಿ ಇದೆ. ಇದರಲ್ಲಿ 14.20 ಎಕರೆ ಜಾಗವನ್ನು ಮೆಡಿಕಲ್ ಕಾಲೇಜ್ ಗೆ ಮೀಸಲಿಟ್ಟು ಚಿತ್ರದುರ್ಗ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿಐಎಂಎಸ್-ಸಿಮ್ಸ್) ಸಂಸ್ಥೆ ನೋಂದಣಿ ಮಾಡಿ ಅದಕ್ಕೆ ಅಷ್ಟು ಭೂಮಿಯನ್ನು ನೋಂದಣಿ ಮಾಡಿಕೊಡಲಾಗಿದೆ. ಈಗಾಗಲೆ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮತ್ತು ರಾಜೀವ್ ಗಾಂಧಿ ವಿಶ್ವ ವಿದ್ಯಾಲಯಗಳು ಪ್ರತ್ಯೇಕವಾಗಿ ಭೇಟಿ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯ ಇದೆ, 450 ಹಾಸಿಗೆಗಳಿವೆ, ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ಪ್ರಮಾಣ ಮತ್ತಿತರ ಸೇವೆಗಳು, ಸಿಮ್ಸ್ ಗೆ ನೀಡಿರುವ ಖಾಲಿ ಜಾಗ, ಇತರೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಗೆ ಆಡಳಿತಾಧಿಕಾರಿ, ಡೀನ್ ನೇಮಕ ಹಂತ ಮಾತ್ರ ಬಾಕಿ ಇದೆ.

ಇಷ್ಟೇಲ್ಲ ಇದ್ದರೂ ಮುಂಬರುವ ಬಜೆಟ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಗೆ ಮಂಜೂರಾತಿ ನೀಡುವ ಸಾಧ್ಯತೆ ಇದೆ. ನಂತರ ಎರಡೂವರೆ ತಿಂಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಶಂಕು ಸ್ಥಾಪನೆ ಮಾಡುವ ಭರವಸೆಯನ್ನು ವೈದ್ಯಕೀಯ ಸಚಿವರು ನೀಡಿದ್ದಾರೆ.

ಆದರೆ… ಅಷ್ಟು ಸುಲಭವಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ ಎಂದೇಳುವುದು ಕಷ್ಟಕರ. ಏಕೆಂದರೆ ಇಲ್ಲಿನ ಮುರುಘಾಮಠದ ಅಧೀನದಲ್ಲಿ ಈಗಾಗಲೇ ಖಾಸಗಿ ಮೆಡಿಕಲ್ ಕಾಲೇಜ್ ನಡೆಯುತ್ತಿದೆ. ಈ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಬಂದರೆ ಖಾಸಗಿ ಮೆಡಿಕಲ್ ಕಾಲೇಜ್ ಮುಚ್ಚಬೇಕಾಗುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಶ್ರೀಮಠವು ಕಳೆದ ಬಜೆಟ್ ನಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಆರಂಭಕ್ಕೆ ಲಾಬಿ ಮಾಡಿತ್ತು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈಗಲೂ ಸರ್ಕಾರ ಮತ್ತು ಆಡಳಿತ ಯಂತ್ರದ ಮೇಲೆ ಶ್ರೀಮಠ ಪ್ರಭಾವ ಬೀರಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸುವ ಕಾರ್ಯಕ್ಕೆ ತಡೆಯೊಡ್ಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದನ್ನು ಮೀರಿ ಮುಖ್ಯಮಂತ್ರಿ ಅಥವಾ ವೈದ್ಯಕೀಯ ಸಚಿವರು ಅಥವಾ ಬಿಜೆಪಿ ಸರ್ಕಾರ ಹೆಜ್ಜೆ ಇಡಲಿದೆ ಎನ್ನುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಯಾವುದೇ ಲಾಬಿಗೆ ಸರ್ಕಾರ ಒಳಗಾಗದೆ ಬಿಗಿ ನಿಲುವು ಪ್ರಕಟಿಸಿ ಹಿಂದುಳಿದ ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾತಿ ನೀಡಿ ಅಗತ್ಯ ಅನುದಾನ ಒದಗಿಸಬೇಕಾಗಿದೆ.

What’s your Reaction?
+1
0
+1
0
+1
2
+1
0
+1
1
+1
0
+1
0