ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಡಿ-ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಸಾಧನೆ

ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಡಿ-ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾವೆಲ್ಲರೂ ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣತೊಟ್ಟು, ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
 ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠಮುಕ್ತ ಭಾರತದ ಕಡೆಗೆ-ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಹಾಗೂ ಜಿಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
 ಸ್ಪರ್ಶ್ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಜ.30 ರಿಂದ ಫೆಬ್ರವರಿ 13 ರವರೆಗೆ ಆಚರಿಸಲಾಗುತ್ತದೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು. ಜಿಲ್ಲೆಯಲ್ಲಿ ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು “ಕುಷ್ಠರೋಗ ಮುಕ್ತ ಜಿಲ್ಲೆ”ಯನ್ನಾಗಿಸಲು ಎಲ್ಲಾ ರೀತಿಯಲ್ಲಿಯೂ ಕ್ರಮಕೈಗೊಳ್ಳಲಾಗಿದೆ ಎಂದರು.


 ಕುಷ್ಠರೋಗಿಗಳಿಗೆ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರವಹಿಸುವುದರ ಮೂಲಕ ಇತರರಿಂದಲೂ ಯಾವುದೇ ರೀತಿಯಾದ ಶೋಷಣೆಗಳಾಗದಂತೆ ನೋಡಿಕೊಂಡು, ನಾವೆಲ್ಲರೂ ಒಟ್ಟಾಗಿ, ವೈಯಕ್ತಿಕ ಹಾಗೂ ನಾಗರೀಕ ವ್ಯಕ್ತಿಭಾವದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ-ಪಿಡುಗುಗಳನ್ನು ಹೋಗಲಾಡಿಸಿ, ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಕಾರಗೊಳಿಸಲು ಬದ್ಧ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ.ಕಂಬಾಳಿಮಠ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 63 ಕುಷ್ಠರೋಗದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 18, ಹೊಳಲ್ಕೆರೆ 4, ಹಿರಿಯೂರು 8, ಹೊಸದುರ್ಗ 5, ಚಳ್ಳಕೆರೆ 15 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 13 ಪ್ರಕರಣಗಳು ಸೇರಿದಂತೆ ಒಟ್ಟು 63 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕುಷ್ಠರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡದ ವಿವೇಕಾನಂದ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಇಲಾಖೆಯಿಂದ ಚಿಕಿತ್ಸೆಗಾಗಿ ರೂ.8 ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಕಳೆದ ಬಾರಿ ಒಂದು ಪ್ರಕರಣವನ್ನು ಕಳುಹಿಸಲಾಗಿತ್ತು. ಈ ಬಾರಿ ಮೂರು ಪ್ರಕರಣಗಳನ್ನು ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ವ್ಯಕ್ತಿಯ ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ವರ್ಣದ ಮಚ್ಚೆ, ದಪ್ಪದಾದ ಅಥವಾ ಹೊಳೆಯುವ ಎಣ್ಣೆಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ, ಕೈ ಅಥವಾ ಕಾಲುಗಳಲ್ಲಿ ವಾಸಿಯಾಗದ ಹುಣ್ಣು, ಬೆರಳುಗಳು ಮಡಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ, ಅಂಗೈ ಅಥವಾ ಪಾದಗಳಲ್ಲಿ ತಂಪು, ಬಿಸಿ ಸಂವೇದನಾಶೀಲತೆ ನಷ್ಟವಾಗಿರುವುದು, ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇವು ಕುಷ್ಠರೋಗದ ಲಕ್ಷಣಗಳಾಗಿದ್ದು, ಕುಷ್ಠರೋಗಕ್ಕೆ ಬಹುವಿಧ ಔಷಧಿ ಚಿಕಿತ್ಸೆ ಎಲ್ಲಾ ಸರ್ಕಾರಿ ಆಯೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಹಾಗೂ ಕಾರ್ಯಕ್ರಮ ಅಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply