ಮೂರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ, ಬೀದಿ ನಾಯಿಗಳ ಹಾವಳಿ ತಡೆಯದ ನಗರಸಭೆ, ಮಕ್ಕಳ ರಕ್ಷಿಸುವುದು ಯಾರು…?
ವರದಿ-ಎಂ.ಎಲ್.ಗಿರಿಧರ ಹಿರಿಯೂರು
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಹತ್ತನೇ ವಾರ್ಡ್ ನಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ಮೂರು ಮಕ್ಕಳು ಬೀದಿ ನಾಯಿಗಳು ಕಚ್ಚಿ ಆಸ್ಪತ್ರೆ ಸೇರಿದ್ದಾರೆ.
ಹಿರಿಯೂರು ನಗರದ ಹತ್ತನೇ ವಾರ್ಡ್ ಅಶೋಕ ರಸ್ತೆ ಬಡಾವಣೆಯ ಆಸುಪಾಸಿನಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು ಮೂರು ಜನ ಮಕ್ಕಳಿಗೆ ನಾಯಿಗಳು ಕಚ್ಚಿದ್ದು ಮಕ್ಕಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಇಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಯಾವ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಪೋಷಕರು ಮತ್ತು ನಾಗರಿಕರು ಚಂದ್ರವಳ್ಳಿ ಪತ್ರಿಕೆಗೆ ದೂರಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮುಂಚೆ ನಗರಸಭೆಯವರು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ನಗರದ 10ನೇ ವಾರ್ಡ್ ಸೇರಿದಂತೆ ವಿವಿಧ ರಸ್ತೆ, ಬೀದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಅದರಲ್ಲೂ ಮಕ್ಕಳು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
ಬೀದಿ ಬೀದಿಗಳಲ್ಲಿ ಗುಂಪು ಗುಂಪಾಗಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ಮಕ್ಕಳು, ಮಹಿಳೆಯರು, ವಯೋವೃದ್ಧರು, ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೋನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.
ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ.
ಮಾಂಸದ ಅಂಗಡಿಗಳು ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತಡೆಯಲು ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ನಗರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.