ಮಾಜಿ ಶಾಸಕ ತಿಪ್ಪೇಸ್ವಾಮಿ, ರಘುಮೂರ್ತಿಗೆ ಟಿಕೆಟ್ ಫಿಕ್ಸ್, ಯೋಗೇಶ್ ಬಾಬು ಔಟ್, ಸುಧಾಕರ್, ಆಂಜನೇಯ, ಗೋವಿಂದಪ್ಪ ಇವರ ಕಥೆ ಏನು…?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ರಾಜಕೀಯ

ಮಾಜಿ ಶಾಸಕ ತಿಪ್ಪೇಸ್ವಾಮಿ, ರಘುಮೂರ್ತಿಗೆ ಟಿಕೆಟ್ ಫಿಕ್ಸ್, ಯೋಗೇಶ್ ಬಾಬು ಔಟ್, ಸುಧಾಕರ್, ಆಂಜನೇಯ, ಗೋವಿಂದಪ್ಪ ಇವರ ಕಥೆ ಏನು…?

ಎಚ್.ಸಿ.ಗಿರೀಶ್ ಹರಿಯಬ್ಬೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಅಧಿಕಾರ ಹಿಡಿಯಲೇಬೇಕು ಎನ್ನುವ ಚಲದಲ್ಲಿರುವ ಕಾಂಗ್ರೆಸ್ ಪಕ್ಷ ಬೇರು ಮಟ್ಟದ ಕಾರ್ಯಕರ್ತರು, ಒಂದಿಷ್ಟು ಆರ್ಥಿಕ ಬಲಾಢ್ಯರು, ಗೆಲ್ಲುವಂತ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳ ಹುಡುಕಾಟ ಮಾಡುತ್ತಿದ್ದು ತನ್ನದೇ ಆದ ತಂಡದ ಮೂಲಕ ವೈಯಕ್ತಿಕ ಸರ್ವೆ ಮಾಡಿಸಿ ಒಂದಿಷ್ಟು ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಪಡೆಯಲಾಗಿದೆ.

ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರಿಗೆ ಬಹುತೇಕ ಟಿಕೆಟ್ ಅಂತಿಮ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಏ.13ರಂದು ಬುಧವಾರ ನಡೆದ ಚಿತ್ರದುರ್ಗ-ದಾವಣಗೆರೆ ಅವಿಭಜಿತ ಜಿಲ್ಲೆಗಳ ಕಾರ್ಯಕರ್ತರ, ಮುಖಂಡರ, ವಿವಿಧ ಪದಾಧಿಕಾರಿಗಳ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೀಸೆ ತಿಪ್ಪೇಸ್ವಾಮಿ ಅವರಿಗೆ ಬಹುತೇಕ ಟಿಕೆಟ್ ಅಂತಿಮ ಮಾಡಿದರು ಎನ್ನಲಾಗಿದೆ. ತಮ್ಮ ಹೆಸರೇಳಲು ಇಚ್ಚಿಸದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡಿದ್ದ ಟಿಕೆಟ್ ಆಕಾಂಕ್ಷಿಯೊಬ್ಬರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ವಿಷಯ ಪ್ರಸ್ತಾಪ ಮಾಡಿ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿದ್ದ ಸಭೆಯಲ್ಲಿ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕ್ಷೇತ್ರವಾರ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು, ಗೆಲ್ಲುವ ಶಕ್ತಿ ಇರುವಂತವರು, ಜನಮನದಲ್ಲಿರುವವರ ಮಾಹಿತಿ ಪಡೆದುಕೊಂಡರು. ಆದರೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮತ್ತು ಹಾಲಿ ಶಾಸಕ ಟಿ.ರಘುಮೂರ್ತಿ ಅವರಿಗೆ ಅವರಿಗೆ ಟಿಕೆಟ್ ಬಹುತೇಕ ಅಂತಿಮ ಎನ್ನಬಹುದಾದ ವಿಷಯ ಮಂಡನೆ ಆಯಿತು ಎನ್ನಲಾಗಿದೆ.

ಹಾಗಾದರೆ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಿತ್ರದುರ್ಗ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಿಗೆ ಯಾವುದೇ ಭರವಸೆಯನ್ನು ನೀಡಲಿಲ್ಲ, ಬದಲಿಗೆ ಯಾರು ಎಷ್ಟೇ ಪ್ರಭಾವಿ ಆಗಿದ್ದರೂ ಎಷ್ಟೇ ಲಾಭಿ ಮಾಡಿದರು ಟಿಕೆಟ್ ನೀಡಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ. ಕಾಂಗ್ರೆಸ್ ನಾಯಕರು ನೀಡಿರುವ ಎಚ್ಚರಿಕೆ ನೋಡಿದರೆ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಿತ್ರದುರ್ಗ ಕ್ಷೇತ್ರಗಳಿಗೆ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ಅಷ್ಟೇ ಅಲ್ಲ ಟಿಕೆಟ್ ಆಕಾಂಕ್ಷಿಗಳಿಗೆ ಈಗಾಗಲೇ ಢವಢವ ಶುರುವಾಗಿದೆ.

ಮಾದಿಗರಿಗೆ ಕಾರ್ಯಾಧ್ಯಕ್ಷ ಹುದ್ದೆ?

ಕರ್ನಾಟಕ ರಾಜ್ಯದಲ್ಲಿ ಮಾದಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಆದರೆ ಕಾಂಗ್ರೆಸ್ ಪಕ್ಷ ಮಾದಿಗ ಜಾತಿಯನ್ನು ನಿರ್ಲಕ್ಷಿಸಿದೆ. ಕನಿಷ್ಠ ಒಂದು ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಿಲ್ಲ, ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಆಗುವ ಸಾಧ್ಯತೆ ಇದ್ದು ಕೂಡಲೇ ಮಾದಿಗ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆ ನೀಡುವಂತೆ ಮಾದಿಗ ಸಮಾಜದ ಮುಖಂಡರು ಡಿಕೆಶಿ, ಸಿದ್ದು ಅವರಲ್ಲಿ ಕೋರಿಕೊಂಡಿದ್ದು ಮತ್ತೊಂದು ಕಾರ್ಯಾಧ್ಯಕ್ಷ ಹುದ್ದೆ ಸೃಜಿಸಿ ಮಾದಿಗ ಸಮಾಜಕ್ಕೆ ನೀಡುವ ಚಿಂತನೆ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಿದೆ ಎನ್ನಲಾಗಿದೆ.

What’s your Reaction?
+1
0
+1
1
+1
0
+1
1
+1
0
+1
1
+1
0