SSLC ಮಕ್ಕಳಿಗೆ ಗುಡ್ ನ್ಯೂಸ್, ಶೇ.10ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ತೀರ್ಮಾನ, ಮೇ-19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಪೈಕಿ ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಮೇ 19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದ್ದು ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ.
2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್ ಅಂಕದಿಂದಾಗಿ ಶೇ.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಗ್ರೇಸ್ ಅಂಕ ನೀಡುವ ವಿಚಾರ ನಿಯಮಾವಳಿಯಲ್ಲೇ ಇದೆ. ಅದು ಈ ವರ್ಷವೂ ಮುಂದುವರೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ಮಾಹಿತಿ ನೀಡಿದ್ದಾರೆ.