ಜನತಾ ಜಲಧಾರೆಗೆ ಹರಿದು ಬಂದ ಜನಸಾಗರ, ಜೆಡಿಎಸ್ ಪಕ್ಷದ ಭರ್ಜರಿ ಶಕ್ತಿ ಪ್ರದರ್ಶನ, 123 ಸೀಟು ಗೆಲುವಿಗೆ ರಹಕಹಳೆ ಊದಿದ ಜೆಡಿಎಸ್…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಬೆಂಗಳೂರು ಮೇಕ್ ಇನ್ ಇಂಡಿಯಾ ರಾಜಕೀಯ

ಜನತಾ ಜಲಧಾರೆಗೆ ಹರಿದು ಬಂದ ಜನಸಾಗರ, ಜೆಡಿಎಸ್ ಪಕ್ಷದ ಭರ್ಜರಿ ಶಕ್ತಿ ಪ್ರದರ್ಶನ, 123 ಸೀಟು ಗೆಲುವಿಗೆ ರಹಕಹಳೆ ಊದಿದ ಜೆಡಿಎಸ್…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಬೆಚ್ಚಿಬೀಳುವಂತೆ ಜೆಡಿಎಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಜನತಾ ಜಲಧಾರೆ ಸಮಾವೇಶಕ್ಕೆ ಹರಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಎಲ್ಲಿಗೆ ಎಂದು ಕುಹಕ ಮಾಡುತ್ತಿದ್ದವರು ಬೆಚ್ಚಿಬೀಳುವಂತಾಗಿದೆ.

ಬೆಂಗಳೂರು ಸಮೀಪದ ನೆಲಮಂಗಲ ಸಮೀಪ ಜೆಡಿಎಸ್ ಪಕ್ಷವು ಜನತಾ ಜಲಧಾರೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿದೆ. 2023ರಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು, ಪ್ರಾದೇಶಿಕ ಪಕ್ಷದ ಶಕ್ತಿ ಸಾಮರ್ಥ್ಯವನ್ನು ರಾಷ್ಟ್ರ ಮತ್ತು ರಾಜ್ಯಕ್ಕೆ ಸಾರುವ ಕೆಲಸವನ್ನು ಜೆಡಿಎಸ್ ಪಕ್ಷದ ನಾಯಕರು ಮಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಜನತಾ ಪಕ್ಷ 1994ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ರಾಜ್ಯಾಧ್ಯಕ್ಷನಾಗಿದ್ದೆ. 2023ರಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಈಗ ರಾಜ್ಯಾಧ್ಯಕ್ಷನಾಗಿದ್ದೇನೆ. 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮೋದಿ, ಸೋನಿಯಾ ಇದನ್ನು ನೋಡಿ ಜೆಡಿಎಸ್ ಶಕ್ತಿ ಏನೆಂದು ಕಾಣುತ್ತದೆ. ರಹಕಹಳೆ ಊದಿದ್ದೇವೆ. ಕುಮಾರಸ್ವಾಮಿ ಅರ್ಜುನನಾದರೆ ಸಾಬಿಯಾದ ನಾನು ಸಾರಥಿಯಾಗಿ ರಥ ಓಡಿಸುತ್ತೇನೆ. ಶ್ರೀಕೃಷ್ಣನಾಗಿ ದೇವೇಗೌಡ ಅಪ್ಪಾಜಿ ಅವರು ಇರುತ್ತಾರೆ ಎಂದು ಘೋಷಣೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಜನತೆಗಾಗಿ ಪ್ರಾಣವನ್ನು ಲೆಕ್ಕಿಸುವುದಿಲ್ಲ, ಕಾರ್ಯಕರ್ತರ ಋಣ ನನ್ನ ಮೇಲಿದೆ. ಎರಡು ಸಲ ನಾನು ಮುಖ್ಯಮಂತ್ರಿಯಾದೆ. ಆದರೆ ಕಾರ್ಯಕರ್ತರಿಗಾಗಿ ಏನು ಮಾಡಲು ಸಾಧ್ಯವಾಗಲಿಲ್ಲ.  ಮೈತ್ರಿ ಸರ್ಕಾರದ ಸಹವಾಸ ಬೇಡ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಕರೆ ನೀಡಿದರು.

ಜೆಡಿಎಸ್ ಪಕ್ಷ ನೀರಿಗೆ ಮಹತ್ವ ನೀಡಿದೆ. ಕೃಷಿ ಮತ್ತು ಕುಡಿಯುವ ನೀರಲ್ಲಿ ರಾಜ್ಯದ ಪಾಲನ್ನು ತೆಗೆದುಕೊಳ್ಳಬೇಕಾದರೆ  ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದರು. 

ಮುಂಬರುವ ಜೂನ್, ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ, ಇಡೀ ರಾಜ್ಯದ ಹಳ್ಳಿ, ಹಳ್ಳಿಗಳಲ್ಲಿ ರಥಯಾತ್ರೆ ನಡೆಸುತ್ತೇವೆ. ನಾನೇ ಜನರ ಮುಂದೆ ಹೋಗುತ್ತೇನೆ. ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ದೇವೇಗೌಡರು 90ರ ಇಳಿ ವಯಸ್ಸಿನಲ್ಲೂ ನಾಡಿನ ಜನರಿಗಾಗಿ, ರೈತರಿಗಾಗಿ, ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದ 6.50 ಕೋಟಿ ಜನತೆ ಅಧಿಕಾರ ನೀಡಿದರೆ ಅವರ ಮಾರ್ಗದರ್ಶನದಲ್ಲಿ ಮಾದರಿ ರಾಜ್ಯ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ಸಾಕಷ್ಟು ನೋವು ಅನುಭವಿಸಿದೆ. ಜೆಡಿಎಸ್ ಪಕ್ಷ ಅಥವಾ ದೇವೇಗೌಡರ ಕುಟುಂಬದ ಬಗ್ಗೆ ವಿರೋಧಿಗಳು ಮಾಡುವ ಯಾವ ಟೀಕೆಗಳಿಗೂ ಹೆದರಬೇಕಿಲ್ಲ. ಜನರ ಕೆಲಸವನ್ನು ಹೃದಯದಿಂದ ಮಾಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ ಇವರುಗಳಿಗೆ ಕುಮಾರಸ್ವಾಮಿ ಸಲಹೆ ನೀಡಿದರು‌.

ಜೆಡಿಎಸ್ ಪಕ್ಷದಿಂದ ಬೆಳೆದು ದೊಡ್ಡವರಾದವರು, ಅಧಿಕಾರ ಅನುಭವಿಸಿದವರು ಜೆಡಿಎಸ್ ನಲ್ಲಿ ಟಿಕೆಟ್ ಸಿಗಬೇಕಾದರೆ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ ಅತ್ಯಂತ ಕಡು ಬಡವ ಅನ್ನದಾನಿ ಅವರಿಗೆ ಟಿಕೆಟ್ ನೀಡಿ ಚುನಾವಣಾ ಖರ್ಚನ್ನು ಪಕ್ಷ ಭರಿಸಿದೆ ಎಂದು ಭಾವುಕರಾಗಿ ಎಲ್ಲವನ್ನು ಆ ದೇವರು ನೋಡ್ತಾನೆ ಎಂದರು.

ಜಲಧಾರೆ ಕಾರ್ಯಕ್ರಮವನ್ನು ಕಳೆದ ತಿಂಗಳು ಆರಂಭ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಒಂದೂ ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು. ಆದರೆ ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ತೋರಿಸಿದ್ದಿರಾ. ಕೊನೆಯ ಉಸಿರು ಇರುವವರೆಗೂ ರಾಜ್ಯದ ಜನರಿಗಾಗಿ ಜೀವನ ಮುಡುಪಾಗಿಟ್ಟಿರುತ್ತೇನೆ ಎಂದು ಹೇಳಿದರು.

ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಐದು ಲಕ್ಷ ರೂ. ಕೊಡುತ್ತೇವೆ ಅಂದರು. ಆದರೆ, ಇನ್ನೂ ಕೊಟ್ಟಿಲ್ಲ. ನಿತ್ಯ ಸಾಕಷ್ಟು ಜನರು ಜೀವನಕ್ಕಾಗಿ ಪರದಾಡುತ್ತಿದ್ದಾರೆ. ಜನ ಸಾಮಾನ್ಯರ ಕಷ್ಟ ದೂರ ಮಾಡಲು ಪಂಚರತ್ನ ಯೋಜನೆ ಹುಡುಗಾಟಿಕೆಗೆ ಮಾಡಿದ್ದಲ್ಲ. ನಿಮ್ಮಗಳ ಕಷ್ಟಗಳನ್ನು ನೋಡಿಯೇ ಮಾಡಿರೋದು ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರ ಕಿತ್ತುಕೊಂಡಾಗ ಧೂಳಿನ ಫಿನೀಕ್ಸ್ ನಂತೆ ಎದ್ದು ಬರ್ತೀನಿ ಅಂತ ದೇವೇಗೌಡರು ಹೇಳಿದ್ದರು 2023ಕ್ಕೆ ಫಿನೀಕ್ಸ್ ನಂತೆ ಜೆಡಿಎಸ್ ಎದ್ದು ಬಂದು ಜನರ ಸಂಕಷ್ಟಕ್ಕೆ ಪರಿಹಾರ ನೀಡಲಿದೆ. ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ. ಪಕ್ಷ ಅಧಿಕಾರಕ್ಕೆ ಬರಲಿದೆ. ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಬೆನ್ನಿಗೆ ನಿಲ್ಲುತ್ತೇನೆ. ಐದು ವರ್ಷಗಳಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ಇದ್ದರೆ ನಿಮ್ಮ ಮುಂದೆ ಬರುವುದಿಲ್ಲ ಎಂದು ಶಪತ ಮಾಡಿದರು.

ರಾಜ್ಯದ ಜನತೆ ನನಗೆ ಸಹಕಾರ ಕೊಡಬೇಕು. ಜೆಡಿಎಸ್ ಅಧಿಕಾರಕ್ಕೆ ಬರಲು 123 ಗುರಿ ಮುಟ್ಟುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇನೆ. ಜನ ಸಾಮಾನ್ಯರು ಅಂಜಿಕೆ, ಆತಂಕವಿಲ್ಲದೆ ಬದುಕುವ ನಿಟ್ಟಿನಲ್ಲಿ ಈ ಸರ್ಕಾರ ಬರಲೇ ಬೇಕು ಎಂದು ಹೇಳಿದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply