ಮೂರು ಮಂದಿ ಬಿಜೆಪಿ ಜಿಲ್ಲಾಧ್ಯಕ್ಷರುಗಳಿಗೆ ಸಿಎಂ ಸಮ್ಮುಖದಲ್ಲೇ ಅವಮಾನ, ಬೂದಿಮುಚ್ಚಿದ ಕೆಂಡವಾದ ಪರಿಸ್ಥಿತಿ, ಪೊಲೀಸ್ ಅಧಿಕಾರಿಗಳ ಎತ್ತಂಗಡಿ…!?
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಹರಿಯಬ್ಬೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದ ಹೆಚ್.ಎಲ್.ಗುಣ್ಣಯ್ಯ ವೇದಿಕೆಯಲ್ಲಿ ಜೂನ್-4ರಂದು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಹಿರಿಯೂರು ತಾಲ್ಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರ ಧರ್ಮಪುರ ಕೆರೆ ಹಾಗೂ ಇತರೆ ಏಳು ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಯ ಭೂಮಿಪೂಜೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆದರೆ ಯಶಸ್ವಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆ ಎನ್ನುವಂತ ಕಹಿ ಘಟನೆಯೊಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ನಡೆದು ಹೋಯಿತು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಸಿ.ಹನುಮಂತೇಗೌಡ ಇವರುಗಳಿಗೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬರಲು ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರಿಗೂ ಮತ್ತು ಪಕ್ಷದ ಪದಾಧಿಕಾರಿಗಳಿಗೂ ಹಾಗೂ ಕಾರ್ಯಕರ್ತರಿಗೂ ವಾಗ್ವಾದ ನಡೆದುದ್ದಲ್ಲದೆ ಒಂದಿಷ್ಟು ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿತು. ನಂತರ ಮುಖ್ಯಮಂತ್ರಿಗಳ ತನಕ ದೂರು ಹೋಯಿತು. ಮುಖ್ಯಮಂತ್ರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ ತಪ್ಪಿತಸ್ಥ ಅಧಿಕಾರಿಗಳು ಕೂಡಲೇ ಕ್ಷಮೆ ಕೋರುವಂತೆ ಮಾಡಿ ಎಂದು ಸೂಚನೆ ನೀಡಿದರು.
ತಪ್ಪಿತಸ್ಥ ಅಧಿಕಾರಿಗಳು ಕ್ಷಮೆ ಕೋರಲಿಲ್ಲ, ಆದರೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ಕುರಿತು ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಇತರರಲ್ಲಿ ಕ್ಷಮೆ ಕೋರಲು ಮುಂದಾದರು. ಆಗ ಅವಮಾನಿತ ಅಧ್ಯಕ್ಷರುಗಳು ನಯವಾಗಿಯೇ ತಿರಸ್ಕರಿಸಿದರು.
ಆದರೆ ಅಲ್ಲಿ ನಿಜವಾಗಿಯೂ ನಡೆದದ್ದು ಏನು ಎನ್ನುವ ಪ್ರಶ್ನೆ ಪಕ್ಷದ ವಲಯದಲ್ಲಿ ತೀವ್ರವಾಗಿ ಚರ್ಚೆ ಆಗುತ್ತಿದೆ. ಮುರುಳಿ, ವೆಂಕಟೇಶ್ ಯಾದವ್, ಹನುಮಂತೇಗೌಡರಿಗೆ ಮಾಡಿದ ಅವಮಾನವಲ್ಲ, ಇದು ಇಡೀ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಮಾಡಿದ ಅವಮಾನವಾಗಿದೆ ಎನ್ನುವ ಕೂಗು ಪಕ್ಷದ ವಲಯದಲ್ಲಿ ಎದ್ದಿದೆ.
ಮುಖ್ಯಮಂತ್ರಿ ಅಥವಾ ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ವೇದಿಕೆಯಲ್ಲಿ ಆಸನಗಳ ವ್ಯವಸ್ಥೆ ಮಾಡುವುದು ವಾಡಿಕೆ. ನಂತರ ಅತಿಗಣ್ಯ ವ್ಯಕ್ತಿಗಳಿಗಾಗಿ ಮುಖ್ಯಮಂತ್ರಿಗಳ ಮುಂಭಾಗದಲ್ಲಿ ವೇದಿಕೆ ಮಾಡಿ ಆಸನಗಳ ವ್ಯವಸ್ಥೆ ಮಾಡಿರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ವಿಚಾರವಾಗಿದೆ.
ಜಿಲ್ಲಾಡಳಿತವು ಕಾರ್ಯಕ್ರಮವನ್ನು ನಿಯಂತ್ರಮದಲ್ಲಿ ಇಟ್ಟುಕೊಳ್ಳಲಿಲ್ಲ, ಇಡೀ ವ್ಯವಸ್ಥೆಯನ್ನು ವೇದಿಕೆಯಿಂದ ಕೆಳಗಿದ್ದ ಡಿ.ಟಿ.ಶ್ರೀನಿವಾಸ್ ನಿಯಂತ್ರಣ ಮಾಡುತ್ತಿದ್ದರು. ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ತಮ್ಮ ವಿರೋಧಿಗಳನ್ನು ನಿಯಂತ್ರಣ ಮಾಡುತ್ತಿದ್ದರು ಎನ್ನುವ ಆರೋಪಿಗಳು ಕೇಳಿ ಬಂದಿವೆ.
ಈ ಆರೋಪಿಗಳ ಹಿನ್ನೆಲೆಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕೂಡ ಪಕ್ಷದ ಕೆಲವರಿಗೆ ದೂರವಾಣಿ ಕರೆ ಮಾಡಿ ವಿಚಾರ ದೊಡ್ಡದು ಮಾಡಬೇಡಿ, ನನಗೆ ತಿಳಿಯದೇ ಆಗಿರುವ ಅಹಿತಕರ ಘಟನೆ ಎಂದು ಸಮಾಧಾನ ಮಾಡುವ ಕಾರ್ಯವನ್ನೂ ಮಾಡಿದ್ದಾರೆ ಎನ್ನಲಾಗಿದೆ.
ಇದರ ಮಧ್ಯ ಪೊಲೀಸರಿಂದ ಅವಮಾನಿತರಾದ ಅಧ್ಯಕ್ಷರುಗಳು ಕೆಲ ಪೊಲೀಸ್ ಅಧಿಕಾರಿಗಳನ್ನ ಕೂಡಲೇ ವರ್ಗಾವಣೆ ಮಾಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಈ ಪ್ರಕರಣದಿಂದ ಯಾರ ತಲೆದಂಡವಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಅಂದು ಏನು ನಡೆಯಿತು-
ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಧಾನ ಪರಿಷತ್ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ, ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರೊಂದಿಗೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಸಿ.ಹನುಮಂತೇಗೌಡ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ವ್ಯವಸ್ಥೆ ಮಾಡಿದ್ದ ಆಸನಗಳತ್ತ ಆಗಮಿಸಿದರು. ಆರಂಭದಲ್ಲೇ ಪೊಲೀಸರು ಹನುಮಂತೇಗೌಡರಿಗೆ ಆಸನಗಳಲ್ಲಿ ಕೂರಬಾರದು, ನೀವು ಹಿಂದಕ್ಕೆ ಹೋಗಿ ಎನ್ನುವ ಸೂಚನೆ ನೀಡಿದರು. ಇದನ್ನು ಪ್ರತಿಭಟಿಸಿದ ವೈ.ಎ.ನಾರಾಯಣಸ್ವಾಮಿ ಇಲ್ಲೇ ಕೂರಲಿ ಎಂದು ಪೊಲೀಸರನ್ನು ವಾಪಸ್ ಕಳುಹಿಸಿದರು. ಇದಾದ ನಂತರ ಮುಖ್ಯಮಂತ್ರಿಗಳ ಆಗಮನವಾಯಿತು. ಇದಾದ ಸ್ವಲ್ಪ ಹೊತ್ತಿನ ನಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್ ಅವರು ಪೊಲೀಸ್ ಸರ್ಪಗಾವಲು ದಾಟಿ ಅತಿಗಣ್ಯ ವ್ಯಕ್ತಿಗಳು ಕೂತಿದ್ದ ವೇದಿಕೆ ಕೆಳ ಭಾಗದ ಆಸನಗಳತ್ತ ಬರಲು ಆರಂಭಿಸಿದರು. ಇದನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪೊಲೀಸರು ಆಸನಗಳತ್ತ ಹೋಗಲಿ, ಅತಿಗಣ್ಯ ವ್ಯಕ್ತಿಗಳು ಕೂತಿದ್ದ ಕಡೆ ಬಿಡಲೇ ಇಲ್ಲ. ಈ ಹಂತದಲ್ಲಿ ಒಂದಿಷ್ಟು ವಾಗ್ವಾದ, ಸಂಘರ್ಷ ಕೂಡ ನಡೆಯಿತು. ಕೊನೆಗೆ ಹನುಮಂತೇಗೌಡ ಪೊಲೀಸರತ್ತ ತೆರಳಿ ಮುರುಳಿ ಮತ್ತು ವೆಂಕಟೇಶ್ ಯಾದವ್ ರಕ್ಷಿಸುವ ಕಾರ್ಯ ಮಾಡಿದರು. ಇದಾದ ಮೇಲೆ ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತು ಶಾಸಕ ತಿಪ್ಪಾರೆಡ್ಡಿ ಅವರು ಏಕೆ ಗಲಾಟೆ ಆಗುತ್ತಿದೆ, ಅದೂ ಬಿಜೆಪಿ ಕಾರ್ಯಕ್ರಮದಲ್ಲಿ ಎಂದು ತಿಳಿದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದರು. ಪೊಲೀಸರು ಮತ್ತು ಪಕ್ಷದ ಅಧ್ಯಕ್ಷರುಗಳೊಂದೆ ಆಗುತ್ತಿದ್ದ ಗಲಾಟೆ ನೋಡಿ ಅವರಿಗೆ ಬೇಸರವಾಯಿತು. ಕೂಡಲೇ ಸಮಾಧಾನ ಮಾಡಿ ಜಿಲ್ಲಾ ಅಧ್ಯಕ್ಷರುಗಳನ್ನು ಕರೆಕೊಂಡು ಬಂದರು.
ಇಲ್ಲಿಂದ ಆರಂಭವಾಯಿತು ದೂರುಗಳ ಸುರಿಮಳೆ. ಕೂಡಲೇ ಎಚ್ಚೆತ್ತ ಪಕ್ಷದ ಅಧ್ಯಕ್ಷರುಗಳು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರತ್ತ ತೆರಳಿ ಪೊಲೀಸರು ಇಂದು ನಮಗೆ ಮಾಡಿದ ಅವಮಾನವಲ್ಲ, ಇದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಮಾಡಿದ ಅವಮಾನ, ಈ ಅವಮಾನ ಸಹಿಸಲು ಸಾಧ್ಯವಿಲ್ಲ, ಮುಂದಿನ ಕ್ರಮವನ್ನು ತಾವುಗಳು ಕೈಗೊಳ್ಳಬೇಕು, ಕೂಡಲೇ ಪಕ್ಷಕ್ಕೆ ಅವಮಾನ ಮಾಡಿದ ಕೆಲ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು. ಮುಖ್ಯಮಂತ್ರಿಗಳು ಕ್ಷಮೆ ಕೋರುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಸಮಾಧಾನವಾಗದ ಅಧ್ಯಕ್ಷರುಗಳಾದ ಮುರುಳಿ, ವೆಂಕಟೇಶ್ ಯಾದವ್, ಹನುಮಂತೇಗೌಡ ಅವರು ಸಭೆಯನ್ನು ಬಾಯ್ ಕಟ್ ಮಾಡಿ ವೇದಿಕೆಯಿಂದಲೇ ನಿರ್ಗಮಿಸಿದರು.
ಯಾರ ತಲೆ ದಂಡವಾಗಬೇಕು ಎನ್ನುವ ಕಡಿತ ಮುಖ್ಯಮಂತ್ರಿಗಳ ಅಂಗಳದಲ್ಲಿದ್ದು ಯಾರ ತಲೆ ದಂಡವಾಗಲಿದೆ ಎನ್ನುವುದು ಇಷ್ಟರಲ್ಲೇ ತಿಳಿಯಲಿದೆ.