ಚಿತ್ರದುರ್ಗ-ತುಮಕೂರು ಜಿಲ್ಲೆಗೆ ಮತ್ತೊಂದು ಹತ್ತು ಪಥಗಳ ಎಕ್ಸ್ ಪ್ರೆಸ್ ಹೈವೇ, ಹಿರಿಯೂರು-ಚಳ್ಳಕೆರೆ ಮಧ್ಯ ಹಾಗು ಹೋಗುವ ಎಕ್ಸ್ ಪ್ರೆಸ್ ಹೈವೇ…!

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಬೆಂಗಳೂರು ಮೇಕ್ ಇನ್ ಇಂಡಿಯಾ

ಚಿತ್ರದುರ್ಗ-ತುಮಕೂರು ಜಿಲ್ಲೆಗೆ ಮತ್ತೊಂದು ಹತ್ತು ಪಥಗಳ ಎಕ್ಸ್ ಪ್ರೆಸ್ ಹೈವೇ, ಹಿರಿಯೂರು-ಚಳ್ಳಕೆರೆ ಮಧ್ಯ ಹಾಗು ಹೋಗುವ ಎಕ್ಸ್ ಪ್ರೆಸ್ ಹೈವೇ…!

ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕರ್ನಾಟಕದಲ್ಲಿ ಮತ್ತೊಂದು ನೇರ ಪುಣೆ-ಬೆಂಗಳೂರು ಗ್ರೀನ್ ಎಕ್ಸ್‌ಪ್ರೆಸ್ ಹೆದ್ದಾರಿ ಚಿತ್ರದುರ್ಗ ಜಿಲ್ಲೆ ಹಾದು ಹೋಗಲಿದೆ.

ದೆಹಲಿ-ಮುಂಬೈ-ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಈ ಹೆದ್ದಾರಿ ಯೋಜನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳ ಮೂಲಕ ಹಾದು ಹೋಗಲಿದೆ.

ಕರ್ನಾಟಕ ಸರ್ಕಾರ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಹೆಚ್‌ಎಐ) ಸಹಯೋಗದೊಂದಿಗೆ ಭಾರತೀಯ ಕೈಗಾರಿಕಾ ಒಕ್ಕೂಟವು ಈ ಯೋಜನೆ ಆಯೋಜಿಸಿದೆ.

ಗ್ರೀನ್ ಎಕ್ಸ್ ಪ್ರೆಸ್ ಹೈವೇ ನಿರ್ಮಿಸುತ್ತಿದ್ದು ಪುಣೆ – ಬೆಂಗಳೂರು ನಡುವಿನ 600 ಕಿ.ಮೀ ಹೊಸ ಗ್ರೀನ್ ಎಕ್ಸ್ ಪ್ರೆಸ್ ಹೈವೇಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ 50 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಯೋಜನೆಗೆ ಶೀಘ್ರ ಬಿಡ್ಡಿಂಗ್ ಶುರು ಮಾಡಲಾಗುತ್ತದೆ. ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಸ್ವಾಧೀನಕ್ಕೆ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ನಿರ್ಮಿಸಲಾಗುವ ಮತ್ತೊಂದು ರಿಂಗ್ ರಸ್ತೆಯ ಯೋಜನೆಯ ಬಗ್ಗೆಯೂ ಸಹ ಸಭೆಯಲ್ಲಿ ಚರ್ಚಿಸಲಾಗಿದೆ.

ಯೋಜನೆ ಹೇಗಿದೆ-

ಈಗಾಗಲೇ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಇದೆ. ಈ ಹೆದ್ದಾರಿ ಜೊತೆಗೆ ಪರ್ಯಾಯವಾಗಿ ಮತ್ತೊಂದು ಬೆಂಗಳೂರು-ಪುಣೆ ರಾಷ್ಟ್ರೀಯ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ.

ಗ್ರೀನ್ ಹೈವೇ ಎಕ್ಸ್ ಪ್ರೆಸ್ ಯೋಜನೆಯಲ್ಲಿ ಒಟ್ಟು ಹತ್ತು ಪಥಗಳ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ. ಎಡ ಮತ್ತು ಬಲ ಎದುರು-ಬದರು ಹೆದ್ದಾರಿ ರಸ್ತೆಯಲ್ಲಿ ತಲಾ ಮೂರು ಪಥಗಳು ಸಾಗುತ್ತದೆ. ಎಡ ಮತ್ತು ಬಲ ಭಾಗದಲ್ಲಿ ತಲಾ ಎರಡೆರಡು ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಹೇಳಿ ಕೇಳಿ ಎಕ್ಸ್ ಪ್ರೆಸ್ ಹೈವೇ ಆಗಿರುವುದರಿಂದ ಬಹುತೇಕ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ದೂರ ಸಾಗುತ್ತದೆ. ಯಾವುದೇ ಪ್ರಮುಖ ನಗರಗಳನ್ನು ಸಂಪರ್ಕಿಸದೆ ನೇರವಾಗಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಅದೂ ಅಲ್ಲದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಹೆದ್ದಾರಿಗೆ ಪ್ರವೇಶ ಪಡೆಯಲು ಸಾಧ್ಯ ಇರುವುದಿಲ್ಲ. ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಓಪನ್ ಬಿಡಲಾಗುತ್ತದೆ. ಬಹುತೇಕ ತಂತಿ ಬೇಲಿಯಿಂದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಅಲ್ಲದೆ ರೈತರ ಜಮೀನುಗಳಿಗೆ ಮತ್ತು ಊರಿಂದ ಊರಿಗೆ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ಪ್ರತ್ಯೇಕವಾದ ಎರಡೆರಡು ರಸ್ತೆಗಳನ್ನು ಹೆದ್ದಾರಿ ಎಡ ಮತ್ತು ಬಲ ಭಾಗದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆಗಳು ಕೂಡಾ ಅತ್ಯಂತ ಗುಣಮಟ್ಟದಿಂದ ಕೂಡಿರುತ್ತದೆ.

ಎಲ್ಲಿಂದ ಎಲ್ಲಿಗೆ-

ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಪುಣೆ-ಬೆಂಗಳೂರು ಗ್ರೀನ್ ಹೈವೇ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ವರ್ತುಲ(ರಿಂಗ್) ರಸ್ತೆಯಿಂದ ಆರಂಭವಾಗಲಿದೆ.

ಅಂದರೆ ಈಗಾಗಲೇ ನಿರ್ಮಾಣ ಕಾರ್ಯ ಶೇ.80ರಷ್ಟು ಪೂರ್ಣಗೊಂಡಿರುವ ಡಾಬಾಸಪೇಟೆ-ದೊಡ್ಡಬಳ್ಳಾಪುರ-ದೇವನಹಳ್ಳಿ-ಹೊಸಕೋಟೆ-ಅತ್ತಿಬೆಲೆ-ಸರ್ಜಾಪುರ ಕರ್ನಾಟಕ ಗಡಿ ಭಾಗದ ಹೊಸೂರು-ಚೆನ್ನೈಗೆ ಈ ಹೆದ್ದಾರಿ ರಸ್ತೆ ಸೇರಲಿದೆ.

ಡಾಬಾಸಪೇಟೆ ಸಮೀಪದ ಚಿಕ್ಕಬೆಳಮಂಗಲ ಗ್ರಾಮದಿಂದ ಪುಣೆ ಮಾರ್ಗಕ್ಕೆ ತೆರಳಲಿದೆ. ಚಿಕ್ಕಬೆಳಮಂಗಲದಿಂದ ಆರಂಭವಾಗುವ ಎಕ್ಸ್ ಪ್ರೆಸ್ ಹೈವೇ ತುಮಕೂರು ನಗರ ಸೇರಿದಂತೆ ಮಧುಗಿರಿ-ಕೊರಟಗೆರೆ-ಶಿರಾ-ಹಿರಿಯೂರು-ಚಳ್ಳಕೆರೆ ಈ ಯಾವುದೇ ನಗರ ಪ್ರದೇಶಗಳಲ್ಲಿ ಹಾದು ಹೋಗುವುದಿಲ್ಲ. ಬದಲಾಗಿದೆ ನಗರ ಪ್ರದೇಶದಿಂದ ಹತ್ತಾರು ಕಿಲೋ ಮೀಟರ್ ದೂರದಲ್ಲಿ ಸಾಗುವ ಎಕ್ಸ್ ಪ್ರೆಸ್ ಹೈವೇಯು ಹಿರಿಯೂರು ತಾಲೂಕಿನ ಸಕ್ಕರ-ಹರಿಯಬ್ಬೆ-ಕಣಜನಹಳ್ಳಿ-ಬುಡುರುಕುಂಟೆ ಮಾರ್ಗವಾಗಿ ಚಳ್ಳಕೆರೆ ತಾಲೂಕಿಗೆ ಪ್ರವೇಶ ಪಡೆಯಲಿದೆ. ಚಳ್ಳಕೆರೆ ನಗರವು ಐದಾರು ಕಿಲೋ ಮೀಟರ್ ದೂರದ ಆಚೆ ಸಾಗುವ ಎಕ್ಸ್ ಪ್ರೆಸ್ ಹೈವೇ ದುಗ್ಗಾವರ ಸಮೀಪ ಹಾದು ನಾಯಕನಹಟ್ಟಿ ಕೂಡ್ಲಿಗಿ-ಹೊಸಪೇಟೆ ಮಾರ್ಗವಾಗಿ ಮುಂದೆ ಸಾಗಲಿದೆ. ಇಡೀ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆ ಅಥವಾ ತಾಲೂಕು ಕೇಂದ್ರಗಳಲ್ಲಿ ಹಾದು ಹೋಗುವುದಿಲ್ಲ.

 ರೈತರ ಪರಿಸ್ಥಿತಿ-

ಪುಣೆ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಮಾರ್ಗ ಹಾದು ಹೋಗುವ ಬಹುತೇಕ ಹಳ್ಳಿಗಳ ರೈತರು ಜಮೀನು ಕಳೆದುಕೊಳ್ಳಲಿದ್ದಾರೆ. ಚಿತ್ರದುರ್ಗ-ತುಮಕೂರು-ವಿಜಯನಗರ ಜಿಲ್ಲೆಗಳಲ್ಲಿ ಬಹುತೇಕ ರೈತರು 2 ರಿಂದ 5 ಎಕರೆ ಭೂಮಿ ಹೊಂದಿದ್ದಾರೆ. ಹೆದ್ದಾರಿ ಮಾರ್ಗದ ಬಹುತೇಕ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಂಡು ಬರಿಗೈ ದಾಸರಾಗುವುದು ನಿಶ್ಚಿತವಾಗಿದೆ.

ಹೆದ್ದಾರಿ ನಿರ್ಮಾಣದ ನಂತರ ನಿರಾಶ್ರಿತರಾಗುವ ರೈತರಿಗೆ ಒಂದಿಷ್ಟು ಪರಿಹಾರ ದೊರೆಯಲಿದೆ. ಹಣದ ರೂಪದಲ್ಲಿ ಕೊಟ್ಟ ಪರಿಹಾರವನ್ನು ರೈತರು ತಿಂದು ತೇಗಿ ಕಳೆದುಕೊಂಡರೆ ಖಂಡಿತ ಯಾವುದೇ ಭೂಮಿ ಸಿಗುವುದಿಲ್ಲ. ನಂತರ ಗುಳೆ ಹೋಗಿ ಕೂಲಿ ಕೆಲಸ ಮಾಡುವುದೇ ದೊಡ್ಡ ಕಾಯಕವಾಗಲಿದೆ.

ಪರಿಹಾರ ಮೊತ್ತ ಎಷ್ಟು-

ಪುಣೆ-ಬೆಂಗಳೂರು ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿ ಎಕ್ಸ್ ಪ್ರೆಸ್ ಹೈವೇ ಮಾರ್ಗವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ 20-30 ಕಿಲೋ ಮೀಟರ್ ದೂರದಲ್ಲಿ ಸಾಗುವುದರಿಂದ ಬಹುತೇಕ ಜಮೀನಿನ ಎಸ್ ಆರ್ ದರಗಳು ಒಂದೂವರೆ ಲಕ್ಷ ಮೀರುವುದಿಲ್ಲ. ಭೂ ಸ್ವಾಧೀನದ ಕಾಯ್ದೆಗಳ ಪ್ರಕಾರ ಎಸ್ ಆರ್ ದರಕ್ಕೆ ಮೂರು ಪಟ್ಟು ಹೆಚ್ಚಿನ ಪರಿಹಾರ ರೈತರಿಗೆ ದೊರೆಯಲಿದೆ. ಅಂದರೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಒಂದು ಎಕರೆಗೆ ಒಂದೂವರೆ ಲಕ್ಷ ಎಸ್ ಆರ್ ದರ ಇದೆ ಎಂದುಕೊಂಡರೆ ಗರಿಷ್ಠ 6 ಲಕ್ಷ ರೂ.ಪ್ರತಿ ಎಕರೆಗೆ ಪರಿಹಾರ ದೊರೆಯಲಿದೆ.

ಆದರೆ ಮಾರುಕಟ್ಟೆ ದರ 20 ರಿಂದ 30 ಲಕ್ಷ ರೂ. ಇದ್ದು ಅಷ್ಟು ಹಣ ನೀಡಿದರೂ ಭೂಮಿಗಳು ಸಿಗುತ್ತಿಲ್ಲ. ಹಾಗಾಗಿ ಎಕ್ಸ್ ಪ್ರೆಸ್ ಹೈವೇ ನಮ್ಮೂರ ಸಮೀಪ ಹಾದು ಹೋಗಲಿದೆ ಎನ್ನುವುದು ಖುಷಿ ವಿಷಯವಾದರೂ ಪರಿಹಾರ ಮಾತ್ರ ಗುಲಗಂಜಿ ಅಷ್ಟಿರುತ್ತದೆ.

ಹೆದ್ದಾರಿ ಯೋಜನೆಗಳು ಕರ್ನಾಟಕದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ. ಆದರೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರು ನಿರಾಶ್ರಿತರಾಗುತ್ತಾರೆ. ಅವರಿಗೆ ಯಾವ ರೀತಿಯ ಜೀವನ ಭದ್ರತೆ ನೀಡಲಾಗುತ್ತದೆ ಎನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾತ್ರಿ ಮಾಡಬೇಕಿದೆ.

What’s your Reaction?
+1
9
+1
7
+1
10
+1
12
+1
11
+1
13
+1
41
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ