ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ-ಸಪಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಬೆಂಗಳೂರು ಮೇಕ್ ಇನ್ ಇಂಡಿಯಾ
ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ-ಸಪಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ನೇರ ಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆಯ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪೌರ ಕಾರ್ಮಿಕರ ಮೇಲ್ವಿಚಾರಕರು ಮತ್ತು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂಗೊಳಿಸುವ ಸಂಬಂಧ, ಎಲ್ಲಾ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರನ್ನು ಖಾಯಂಗೊಳಿಸಲು ಮಾನ್ಯ ಮುಖ್ಯಮಂತ್ರಿಗಳು  ತಾತ್ವಿತವಾಗಿ ಒಪ್ಪಿರುತ್ತಾರೆ ಎಂದು ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ ಅವರು ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿಗಳ ನ್ಯಾಯಾಂಗಣ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು,  ಪೌರಕಾರ್ಮಿಕರ ಖಾಯಂಗೊಳಿಸುವಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ನಿಗಮದ ಅಧ್ಯಕ್ಷರುಗಳು ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಪ್ರತಿನಿಧಿಗಳು ಒಳಗೊಂಡಂತೆ ಸದರಿ ಸಮಿತಿಯನ್ನು ರಚಿಸಿ ಸಮಿತಿಯ ವರದಿಯನ್ವಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಐಪಿಡಿ ಸಾಲಪ್ಪನವರ ವರದಿ, ಚಂದ್ರಶೇಖರ್ ವರದಿ ಮತ್ತು ರಾಷ್ಟ್ರೀಯ ಕಾನೂನು ಶಾಲೆ ವರದಿ ಅನ್ವಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 500 ಜನರಿಗೆ ಒಬ್ಬ ಪೌರಕಾರ್ಮಿಕರಂತೆ ನೇಮಿಸಿಕೊಳ್ಳಲು ಹಾಗೂ ಈ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಮೃತಪಟ್ಟಲ್ಲಿ ಅಥವಾ ನಿವೃತ್ತಿ ಹೊಂದಿದಲ್ಲಿ ತೆರವಾಗುವ ಹುದ್ದೆಗಳನ್ನು  ಕೂಡಲೇ ನೇಮಕ ಮಾಡಿಕೊಳ್ಳಲು  ಪಾಲಿಸಿ / ಆಕ್ಟ್ ಆಫ್‍ಲಾ ರೂಪಿಸಿಕೊಂಡು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಕಾರ್ಯಗತಗೊಳಿಸಲಾಗುವುದು. ಕನಿಷ್ಠ ವೇತನ ರೂ.17,000/- ಇದ್ದು ಪೌರಕಾರ್ಮಿಕರ ಜೀವನ ನಿರ್ವಹಣೆಯು ಕಷ್ಟಕರವಾಗಿರುವುದರಿಂದ ಸಮಿತಿಯ ನಿರ್ಣಯದಂತೆ ವೇತನವನ್ನು ಹೆಚ್ಚಿಸಲು ಒಪ್ಪಿಗೆ ನೀಡಿರುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಒಟ್ಟು ಪೌರಕಾರ್ಮಿಕರ 54,512 ಇದ್ದು, 10,527 ಖಾಯಂ ಆಗಿರುವ ಪೌರಕಾರ್ಮಿಕರಿದ್ದಾರೆ. ಆರ್ಥಿಕ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅನುಮೋದನೆಗೊಂಡು 10,380  ಖಾಯಂ ಗೊಳಿಸಲು ಬಾಕಿ ಉಳಿದಿವೆ. ಇವುಗಳನ್ನು ವಿಶೇಷ ನೇಮಕಾತಿ ಎಂದು ಪರಿಗಣಿಸಿ 1 ತಿಂಗಳ ಒಳಗಾಗಿ ಖಾಯಂ ಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.   ಉಳಿದಂತೆ ಬಾಕಿ ಇರುವ 33,605 ಹುದ್ದೆಗಳನ್ನು ಭರ್ತಿ ಮಾಡಲು ಮೇಲ್ಕಂಡಂತೆ ಸಮಿತಿಯನ್ನು ಆಕ್ಟ್ ಆಫ್ ಲಾ ಪ್ರಕಾರ ರಚಿಸಲಾಗುತ್ತದೆ. ಈ ಸಮಿತಿಯು ಹುದ್ದೆಗಳ ಭರ್ತಿಯಲ್ಲಿ ಇರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿರುತ್ತದೆ.

ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೋಡರ್ಸ್, ಕ್ಲೀನರ್ಸ್, ಚಾಲಕರನ್ನು ನೇರಪಾವತಿಯ ಅಡಿಯಲ್ಲಿ ಪರಿಗಣಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಯ ವತಿಯಿಂದ ನಿರ್ವಹಿಸುತ್ತಿರುವ ವಾಹನಗಳಿಗೆ ಗುತ್ತಿಗೆ ಅಡಿ ಕಾರ್ಯನಿರ್ವಹಿಸುತ್ತಿರುವ ಲೋಡರ್ಸ್, ಕ್ಲೀನರ್ಸ್ ಮತ್ತು ಚಾಲಕರ ಹುದ್ದೆಗಳನ್ನು ನೇರಪಾವತಿ ಅಡಿ ನೇಮಿಸಿಕೊಂಡು ಹಂತಹಂತವಾಗಿ ಖಾಯಂಗೊಳಿಸಲಾಗುವುದು. ಅಲ್ಲಿಯವರೆಗೆ ಈ ಎಲ್ಲಾ ಪೌರ ಕಾರ್ಮಿಕರಿಗೂ ಕಾರ್ಮಿಕ ಕಾಯ್ದೆ ಅನ್ವಯ ಕನಿಷ್ಠ ವೇತನವನ್ನು ಹೆಚ್ಚಿಸಲು ಸರ್ಕಾರವು ಈ ಕುರಿತು ಉನ್ನತ ಮಟ್ಟದ ಅಧಿಕಾರಗಳನ್ನು ಒಳಗೊಂಡಂತೆ ಚರ್ಚಿಸಿ ವರದಿ ನೀಡಲು ತಿಳಿಲಾಗಿದೆ.  

ಪೌರಕಾರ್ಮಿಕರಲ್ಲಿ ಅತಿ ಹೆಚ್ಚು ಮಹಿಳಾ ಪೌರಕಾರ್ಮಿಕರೇ ಇದ್ದರು, ಅವರಿಗೆ ಅವಶ್ಯಕವಾಗಿ ಬೇಕಾಗಿರುವ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹ, ಯಾವುದನ್ನು ನೀಡುತ್ತಿಲ್ಲ. ಈ ಕೂಡಲೇ ರಾಜ್ಯದ ಎಲ್ಲಾ ಕಡೆ ವಿಶ್ರಾಂತಿ ಗೃಹ, ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ ಮತ್ತು ವೈದ್ಯಕೀಯ ರಜೆ ಸೌಲಭ್ಯ ನೀಡಬೇಕು. ಈ ಕುರಿತು ತಕ್ಷಣ ಸರ್ಕಾರ ಆದೇಶ ಹೊರಡಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ, ಪೌರಕಾರ್ಮಿಕರಿಗೆ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‍ಗೆ 2 ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ 3 ತಿಂಗಳು ಕಾಲಾವಕಾಶ ನೀಡಿ ಇದಕ್ಕೆ ತಗಲುವ ವೆಚ್ಚವನ್ನು 15ನೇ ಹಣಕಾಸು ಆಯೋಗದಿಂದ ಭರಿಸಲು ತೀರ್ಮಾನಿಸಲಾಗಿದೆ.  

ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ, ಶೇ.85% ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಈ ಕೂಡಲೇ ಎಲ್ಲಾ ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆಯಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರನ್ನು ಗೃಹ ಭಾಗ್ಯಯೋಜನೆಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂಬ ಬೇಡಿಕೆ ಇದ್ದು, ರಾಜ್ಯದಲ್ಲಿರುವ ನಿವೇಶನ ಇಲ್ಲದ ಎಲ್ಲಾ ಪೌರಕಾರ್ಮಿಕರಿಗೂ ವಸತಿ ವಿತರಿಸಲು ವಿಶೇಷವಾದ ಹೊಸ ಯೋಜನೆಯನ್ನು ರೂಪಿಸಲಾಗುವುದು ಖಾಯಂ ಪೌರಕಾರ್ಮಿಕರಿಗೆ ನೀಡುತ್ತಿರುವ ಮಾದರಿಯಲ್ಲಿಯೇ ನೇರಪಾವತಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯನ್ನು ವಿಸ್ತರಿಸಲಾಗುವುದು ಹಾಗೂ  ಸಂಬಂಧಪಟ್ಟ ಇಲಾಖೆಗಳಿಂದ 3 ತಿಂಗಳ ಒಳಗಾಗಿ ಎಷ್ಟು ಜನ ಕಾರ್ಮಿಕರಿಗೆ ನಿವೇಶನ ಇಲ್ಲ, ವಸತಿ ಇಲ್ಲ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ನೇರ ಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆಯಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅಗತ್ಯವಿರುವ ಹಣಕಾಸಿನ ನೆರವು ನೀಡುವ ಸಂಬಂಧ,  ಪೌರಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಯನ್ನು ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅಗತ್ಯವಿರುವ ಹಣಕಾಸಿನ ನೆರವು ನೀಡಲು ಸರ್ಕಾರಿ ಆದೇಶ ಹೊರಡಿಸಲು ತೀರ್ಮಾನಿ ಕೈಗೊಂಡಿರುವುದಾಗಿ ಹಾಗೂ ರೈತ ವಿದ್ಯಾನಿಧಿ ಮಾದರಿಯಲ್ಲಿ ಎಲ್‍ಕೆಜಿ ಯಿಂದ ಪೋಸ್ಟ್ ಗ್ರಾಜ್ಯುಯೇಷನ್ ಹಂತದವರೆಗೂ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನವನ್ನು ಪಾವತಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನೇರ ಪಾವತಿಯಲ್ಲಿ ಕರ್ತವ್ಯ ನಿರ್ವಹಿಸಿ 60 ವರ್ಷ ಪೂರೈಸಿ ನಿವೃತ್ತಿ ಯಾಗುತ್ತಿರುವ ಸ್ವಚ್ಛತಾ ಕಾರ್ಮಿಕರು ಯಾವುದೇ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿ ಕೈಯಲ್ಲಿ ಹೋಗುತ್ತಿದ್ದಾರೆ. ಈ ಸ್ವಚ್ಛತಾ ಕಾರ್ಮಿಕರಿಗೆ ತಲಾ ರೂ.10.00 ಲಕ್ಷ ಪರಿಹಾರ ನೀಡಬೇಕು ಹಾಗೂ ಮಾಸಿಕ ರೂ. 5000/- ನಿವೃತ್ತಿ ವೇತನ ನೀಡಬೇಕು ಮತ್ತು ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು. ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡುವ ಬೇಡಿಕೆ ಇದ್ದು, ಈ ಸಂಬಂಧವಾಗಿ ನಿವೃತ್ತಿ ಅಥವಾ ಮೃತಪಟ್ಟ ಪೌರಕಾರ್ಮಿಕರ ಅವಲಂಬಿತರಿಗೆ ಒಂದು ಬಾರಿ ಇಡಿಗಂಟು ಅಥವಾ ಅನುಕಂಪದ ಆಧಾರದ ಮೇಲೆ ಕೆಲಸವನ್ನು ಕೊಡಲು ಬಿಬಿಎಂಪಿ ಮಾದರಿಯಲ್ಲಿ ಆದೇಶ ಹೊರಡಿಸಲು ಹಾಗೂ  ರಾಜ್ಯದ ಎಲ್ಲಾ ಪೌರಕಾರ್ಮಿಕರಿಗೂ  ಆರೋಗ್ಯ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯದಾದ್ಯಂತ ನಗರ ಪ್ರದೇಶಗಳು (ನಗರ ಸ್ಥಳೀಯ ಸಂಸ್ಥೆಗಳು) ಮತ್ತು ಗ್ರಾಮೀಣ ಭಾಗಗಳಲ್ಲಿ (ಗ್ರಾಮ ಪಂಚಾಯತಿಗಳು) ಹಾಗೂ ಖಾಸಗಿ ವಲಯಗಳಲ್ಲಿ (ಬಸ್ ನಿಲ್ದಾಣ, ವಿಶ್ವ ವಿದ್ಯಾಲಯಗಳು, ಆಸ್ಪತ್ರೆಗಳು, ಕಂಪನಿಗಳು, ದೊಡ್ಡ ಕಛೇರಿಗಳು, ಲಾಡ್ಜ್, ಹೋಟೆಲ್ ಇತರೆ) ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುವ ಸಾವಿರಾರು ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿ ಕೊಳ್ಳಲು, ವೇತನ, ಇತರೆ ಸಾಮಾಜಿಕ ಭದ್ರತೆ ನೀಡುವಂತೆ ಆದೇಶಿಸುವ ಸೂಕ್ತವಾದ ಕಾಯ್ದೆ ನಮ್ಮ ರಾಜ್ಯದಲ್ಲಿಲ್ಲ. (ರಾಷ್ಟೀಯ ಕಾನೂನು ಶಾಲೆ, ಭಾರತ ವಿಶ್ವವಿದ್ಯಾಲಯ, ಬೆಂಗಳೂರು) ಇವರು ನಡೆಸಿರುವ ಅಧ್ಯಯನದ ಶಿಫಾರಸ್ಸಿನಂತೆ ಸ್ವಚ್ಛತಾ ಕಾರ್ಮಿಕರ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ-ನ್ಯಾಯಕ್ಕಾಗಿ ಸೂಕ್ತ ಸಮಗ್ರ ಕಾನೂನು ಜಾರಿ ಸಂಬಂಧಿಸಿದಂತೆ, ಐಪಿಡಿ ಸಾಲಪ್ಪನವರ ವರದಿ, ಚಂದ್ರಶೇಖರ್ ವರದಿ ಮತ್ತು ರಾಷ್ಟ್ರೀಯ ಕಾನೂನು ಶಾಲೆ ವರದಿಯ ಅಂಶಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಸರ್ಕಾರದಿಂದ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ರಾಜ್ಯಾದ್ಯಂತ ಸರ್ಕಾರಿ/ಖಾಸಗಿ/ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ, ಮೈಸೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 3 ತಿಂಗಳೊಳಗಾಗಿ ನಡೆಸಲು ತೀರ್ಮಾನಿಸಲಾಗಿದೆ.  

ಒಡಿಸ್ಸಾ ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿ ಮತ್ತು ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಅಭಿವೃದ್ದಿಗಾಗಿ ರೂಪಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು  ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ದೇಶದಲ್ಲಿ ಪ್ರಪ್ರಥಮ ಬಾರಿಗೆ ಪೌರಕಾರ್ಮಿಕರಿಗೆ ಏಕರೂಪ ಸುರಕ್ಷತಾ ಪರಿಕರಗಳನ್ನು ಬಳಸಲು ಸಮಿತಿಯನ್ನು ರಚಿಸಿದ್ದು, ಉತ್ಪಾದನಾ ಸಂಸ್ಥೆಗಳಿಂದ ಪರಿಕರಗಳನ್ನು ಪಡೆದು ಪ್ರಾಯೋಗಿಕವಾಗಿ ಪರಿಕರಗಳನ್ನು ಬಿಬಿಎಂಪಿ 2 ವಾರ್ಡ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿತರಿಸಿ ತದನಂತರ ಕಾರ್ಮಿಕರ ಅಭಿಪ್ರಾಯ ಪಡೆದು ಉತ್ತಮ ಗುಣಮಟ್ಟದ ಪರಿಕರಗಳನ್ನು ರಾಜ್ಯಾದ್ಯಂತ ವಿತರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ಹಾಗೂ ನವದೆಹಲಿಯ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಸದಸ್ಯರಾದ ಜಗದೀಶ್ ಹೀರೇಮಣಿ ಅವರು ಉಪಸ್ಥಿತರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ