ಚಿತ್ರದುರ್ಗ ಕೈಗಾರಿಕಾ ಹಬ್ ಗೆ ಮೇಟಿಕುರ್ಕೆ- ಕರಿಯೋಬೇನಹಳ್ಳಿಗಳ 1149 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಸರ್ಕಾರ..?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಬೆಂಗಳೂರು ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ ಸಾಧನೆ

ಚಿತ್ರದುರ್ಗ ಕೈಗಾರಿಕಾ ಹಬ್ ಗೆ ಮೇಟಿಕುರ್ಕೆ- ಕರಿಯೋಬೇನಹಳ್ಳಿಗಳ 1149 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಸರ್ಕಾ..?

ಮೇಟಿಕುರ್ಕೆ-783 ಎಕರೆ, ಕರಿಯೋಬೇನಹಳ್ಳಿ-373 ಎಕರೆ ಭೂಸ್ವಾಧೀನ..

ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಮಧ್ಯ ಕರ್ನಾಟಕದ ಬಯಲು ಸೀಮೆಯ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಬದಲಾಗುತ್ತಿದೆ. ನಿರಂತರ ಬರ, ಬಡತನ, ಹಸಿವು, ನೀರಿನ ದಾಹ ತಣಿಸುವ ಕಾರ್ಯ ಭರದಿಂದ ಸಾಗಿದೆ. ಭದ್ರೆ, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು, ಡಿಆರ್ಡಿಒ ವಿಜ್ಞಾನ ಸಂಸ್ಥೆಗಳು, ಪರ್ಯಾಯ ಪುಣೆ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಹೀಗೆ ಹಲವು ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು ಅದರ ಜೊತೆಗೆ ಈಗ 2 ಸಾವಿರ ಎಕರೆಯಲ್ಲಿ ಚಿತ್ರದುರ್ಗ ಕೈಗಾರಿಕಾ ಹಬ್ ಸ್ಥಾಪನೆ ಮಾಡಲು 1150 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಚಿತ್ರದುರ್ಗ-ಹಿರಿಯೂರು ಮಧ್ಯ ಭಾಗದ ಮೇಟಿಕುರ್ಕೆ ಗ್ರಾಮದಲ್ಲಿ 783 ಎಕರೆ ಮತ್ತು ಕರಿಯೋಬೇನಹಳ್ಳಿ ಗ್ರಾಮದಲ್ಲಿ 373 ಎಕರೆ ಭೂಸ್ವಾಧೀನ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ(ಕೆಐಎಡಿಬಿ) ಜಾಗ ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕುಮಾರ್ ಅವರು ರಾಜ್ಯಪಾಲರ ಆದೇಶಾನುಸಾರ ದಿನಾಂಕ-14-06-2022 ರಂದು 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ3(1)ರ ಅಧಿಸೂಚನೆ ಹೊರಡಿಸಿದ್ದಾರೆ.

ಅಷ್ಟೇ ಅಲ್ಲ ಮೇಟಿಕುರ್ಕೆ ಗ್ರಾಮದ ಸರ್ವೆ ನಂಬರ್ 73/1 ರಿಂದ ಆರಂಭಿಸಿ 134/1 ತನಕ ಹಾಗೂ ಸರ್ವೆ ನಂಬರ್ 259 ಸೇರಿದಂತೆ ಸುಮಾರು 783 ಎಕರೆ ಮತ್ತು ಹಿರಿಯೂರು ತಾಲೂಕಿನ ಕರಿಯೋಬೇನಹಳ್ಳಿಯ ಸರ್ವೆ ನಂಬರ್ 54/1 ರಿಂದ ಆರಂಭಿಸಿ 73/4ರ ತನಕ ಒಟ್ಟು 373 ಎಕರೆ ಜಮೀನುಗಳನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಅನ್ವಯ ಘೋಷಣೆ ಮಾಡಲಾಗಿದೆ.

ಮೇಟಿಕುರ್ಕೆ ಮತ್ತು ಕರಿಯೋಬೇನಹಳ್ಳಿಯ ಎರಡು ಗ್ರಾಮಗಳಲ್ಲಿ ಆರಂಭವಾಗುವ ಸರ್ವೆ ನಂಬರ್ ಗಳ ಕೆಲ ಸರ್ವೆ ನಂಬರ್ ಗಳು ಬಿಟ್ಟು ಹೋಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕಾ ಹಬ್ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಅವರು ನೀಡಿದ ಭರವಸೆ ಸಕಾರಗೊಳ್ಳುವತ್ತ ಸಾಗಿದ್ದು ಇದರಿಂದ ಹಿಂದುಳಿದ ಜಿಲ್ಲೆಯ ಎನ್ನುವ ಹಣೆ ಪಟ್ಟಿ ಅಳಿಸುವ ಸಾಧ್ಯತೆ ಇದೆ.

ಬಂಡವಾಳ ಹೂಡಿಕೆ-

ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಸ್ಥಾಪನೆ ಆದರೆ ಸಾಕಷ್ಟು ಉದ್ಯೋಗಗಳ ಸೃಜನೆ ಜೊತೆಯಲ್ಲಿ ಹಲವಾರು ಕೈಗಾರಿಕೆಗಳು ಜಿಲ್ಲೆಯಲ್ಲಿ ತಲೆ ಎತ್ತಲಿವೆ.

ವಿಶ್ವ ಬಂಡವಾಳ ಹೂಡಿಕೆ ಜೊತೆಯಲ್ಲಿ ದೇಶಿಯ ಬಂಡವಾಳ ಹೂಡಿಕೆ ಜಿಲ್ಲೆಯಲ್ಲಿ ಆಗುವ ಸಾಧ್ಯತೆ ಇದ್ದು ಹೊಸ-ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳು ಬರಲಿವೆ. ಆ ಮೂಲಕ ಚಿತ್ರದುರ್ಗ ಕೈಗಾರಿಕಾ ಹಬ್ ಆಗಿ ರೂಪುಗೊಳ್ಳುತ್ತಿದೆ.

ನೆಲ, ಜಲ(ಭದ್ರಾ), ವಾಯು(ಡಿಆರ್ಡಿಒ), ರೈಲು(ನೇರ ರೈಲು) ಮಾರ್ಗಗಳ ಜತೆಗೆ ನಾನಾ ಸೌಲಭ್ಯಗಳ ಲಭ್ಯತೆ ಪರಿಣಾಮ ಕೈಗಾರಿಕೆಗಳು ಜಿಲ್ಲೆಯತ್ತ ಹೆಚ್ಚು ಮುಖ ಮಾಡಲಿವೆ.

ತಾಲೂಕು ವಾರು ಕೈಗಾರಿಕೆಗಳು-

ಚಿತ್ರದುರ್ಗ ಜಿಲ್ಲೆಯಲ್ಲಿ ಗರಿಷ್ಠ 2 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಹಿರಿಯೂರು ಸಮೀಪದ ಮೇಟಿಕುರ್ಕೆ ಕೈಗಾರಿಕಾ ಹಬ್ ಗೆ 1150 ಎಕರೆ ಭೂ ಸ್ವಾಧೀನವಾದರೆ ಉಳಿದ 850 ಎಕರೆ ಪ್ರದೇಶದಲ್ಲಿ ಚಳ್ಳಕೆರೆ ಅಥವಾ ಮೊಳಕಾಲ್ಮೂರು ತಾಲೂಕುಗಳಲ್ಲೂ ಕೈಗಾರಿಕಾ ಹಬ್ ಸ್ಥಾಪನೆ ಆಗುವ ಸಾಧ್ಯತೆ ಇದ್ದು ತಾಲೂಕುಗಳಲ್ಲಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬರಲಿವೆ.

ಯಾವ್ಯಾವ ಕೈಗಾರಿಕೆಗಳು?

ಕೃಷಿ, ತೋಟಗಾರಿಕೆ ಸಂಬಂಧಿತ ಕೈಗಾರಿಕೆಗಳು, ವಿವಿಧ ಕೈಗಾರಿಕೆಗಳಿಗೆ ಪೂರಕವಾಗಿರುವ ಬಿಡಿ ಭಾಗಗಳ ತಯಾರಿಕಾ ಘಟಕಗಳು, ಪ್ಲಾಸ್ಟಿಕ್ ಇಂಡಸ್ಟ್ರೀಸ್, ಹೋಟೆಲ್ಸ್, ಫೈವ್ ಸ್ಟಾರ್ ಹೋಟೆಲ್ ನಿರ್ಮಾಣ, ಬಿಸ್‌ನೆಸ್ ಕ್ಲಾಸ್ ಹೋಟೆಲ್‌, ಶೇಂಗಾ, ಈರುಳ್ಳಿ, ದಾಳಿಂಬೆ ಸಂಸ್ಕರಣೆ ಕೈಗಾರಿಕೆಗಳು ಸೇರಿದಂತೆ ಆಹಾರ ಸಂಸ್ಕರಣೆ ಘಟಕಗಳು, ಔಷಧ ಕ್ಷೇತ್ರ, ಕೃಷಿ ಆಧಾರಿತ ಕೈಗಾರಿಕೆ ಹೀಗೆ ನಾನಾ ಕೈಗಾರಿಕೆಗಳು ಸ್ಥಾಪನೆಯಾಗಲಿದೆ.

ದೊಡ್ಡ ದೊಡ್ಡ ಕೈಗಾರಿಕೆಗಳ ಜೊತೆಗೆ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೂ ಉತ್ತೇಜನ ನೀಡಲಾಗುತ್ತದೆ. ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಜೊತೆಯಲ್ಲಿ ಲಕ್ಷಾಂತರ ಉದ್ಯೋಗ ಅವಕಾಶ ದೊರೆಯಲಿವೆ.

ಕೆಐಎಡಿಬಿ ಎಚ್ಚರಿಕೆ-

ಭೂ ಸ್ವಾಧೀನ ಮಾಡಲಾಗುತ್ತಿರುವ ಮೇಟಿಕುರ್ಕೆ ಮತ್ತು ಕರಿಯೋಬೇನಹಳ್ಳಿಗಳ ಸದರಿ ಸರ್ವೆ ನಂಬರ್ ಗಳಲ್ಲಿ ಯಾವುದೇ ಕಾರಣಕ್ಕೂ ಮಣ್ಣು ತೆಗೆಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮಣ್ಣು ತೆಗೆದಿದ್ದೆ ಆದರೆ ಪರಿಹಾರ ಕೊಡುವ ಹಣದಲ್ಲಿ ಭೂಮಿ ಸಮತಟ್ಟು ಮಾಡುವಷ್ಟು ಪರಿಹಾರವನ್ನು ಕಡಿತ ಮಾಡಿ ಕೊಡಲಾಗುತ್ತದೆ ಎಂದು ಕೆಐಎಡಿಬಿ ಎಚ್ಚರಿಸಿದೆ.

ಭೂ ಸ್ವಾಧೀನ- ಕೆಐಎಡಿಬಿ ಶೀಘ್ರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಸುಮಾರು 1150 ಎಕರೆ ಪ್ರದೇಶದ ಭೂಮಿಯನ್ನು ಕೆಐಎಡಿಬಿ ಅಭಿವೃದ್ಧಿ ಪಡಿಸುವ ಕಾಮಗಾರಿ ಭೂ ಸ್ವಾಧೀನ ಕಾರ್ಯದ ನಂತರ ಶುರುವಾಗಲಿದೆ.

ಆರ್ಥಿಕ-ಸಾಮಾಜಿಕ ಕ್ರಾಂತಿ-

ಕೋಟೆನಾಡಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಕೈಗಾರಿಕೆಗಳು ಬಂದರೆ ಪ್ರತಿಯೊಬ್ಬರ ಆರ್ಥಿಕ ಸ್ಥಿತಿ-ಗತಿಯನ್ನೇ ಬದಲಿಸಲಿದೆ. ಇದರ ಜೊತೆಯಲ್ಲಿ ಆರ್ಥಿಕ, ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳು ಬರುವುದರಿಂದ ಇಲ್ಲಿನ ಆರ್ಥಿಕ, ಸಾಮಾಜಿಕ ಬದಲಾವಣೆಯಾಗಲಿದೆ. ಸರ್ಕಾರಕ್ಕೆ ಹೆಚ್ಚು ವರಮಾನ ಬರುವುದರೊಂದಿಗೆ ಈ ಪ್ರದೇಶದವರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಲಭಿಸುತ್ತದೆ.

ಸ್ಥಳೀಯರಿಗೆ ಉದ್ಯೋಗ-

ಬೃಹತ್ ಕೈಗಾರಿಕೆಗಳು ಸೇರಿದಂತೆ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಲಕ್ಷಾಂತರ ಉದ್ಯೋಗ ಅವಕಾಶ ದೊರೆಯಲಿವೆ. ಸ್ಥಳೀಯವಾಗಿಯೇ ಉದ್ಯೋಗಗಳು ದೊರೆತರೆ ಗುಳೆ ಹೋಗುವುದು ತಪ್ಪುವುದಲ್ಲದೆ ಆರ್ಥಿಕ ಶಕ್ತಿ ವೃದ್ಧಿಸಲಿದೆ.

ಭೂ ಪರಿಹಾರ-

ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ, ನೂರಾರು ಕೈಗಾರಿಕೆಗಳನ್ನು ಆರಂಭಿಸಲು ರೈತರು ಉದಾರವಾಗಿ ಜಮೀನು ಬಿಟ್ಟು ಕೊಡಲಿದ್ದು ಭೂಮಿ ಕಳೆದುಕೊಳ್ಳುವಂತ ರೈತರಿಗೆ ಮಾರುಕಟ್ಟೆ ದರಕ್ಕೆ ಮೂರು ಪಟ್ಟು ಪರಿಹಾರ ನೀಡಬೇಕು. ಅಲ್ಲದೆ ಭೂಮಿ ಕಳೆದುಕೊಂಡು ನಿರಾಶ್ರಿತರಾಗುವಂತ ರೈತ ಕುಟುಂಬಗಳಿಗೆ ಒಂದೊಂದು ಕೈಗಾರಿಕೆ ಆರಂಭಿಸಲು ಅವಕಾಶ ಕಲ್ಪಿಸಿಕೊಡಬೇಕು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಕಾಲಹರಣ ಮಾಡದೆ ರೈತರಿಂದ ಭೂ ಸ್ವಾಧೀನ ಪಡಿಸಿಕೊಂಡು ಭೂ ಮಾಲೀಕರುಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು. ಭೂ ಮಾಲೀಕರುಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗದಂತೆ ಎಚ್ಚರವಹಿಸಬೇಕು. ಒಂದು ಕಾಲಮಿತಿಯೊಳಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಹಾಗೂ ಪರಿಹಾರ ನೀಡುವಂತಹ ವ್ಯವಸ್ಥೆಯ ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸುವ ಅಗತ್ಯ ಇದೆ.

ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಯಾ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳ ಆಸಕ್ತಿಗೆ ತಕ್ಕಂತೆ ಅಗತ್ಯ ಮಾಹಿತಿ ನೀಡುವುದಲ್ಲದೆ, ಮೂಲ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಬೇಕು.

What’s your Reaction?
+1
0
+1
2
+1
0
+1
5
+1
1
+1
1
+1
3