ಸಾಂಕ್ರಾಮಿಕ ರೋಗಗಳಾದ ಮಂಕಿಪಾಕ್ಸ್ ಮತ್ತು ಡೆಂಗಿ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಸಾಂಕ್ರಾಮಿಕ ರೋಗಗಳಾದ ಮಂಕಿಪಾಕ್ಸ್ ಮತ್ತು ಡೆಂಗಿ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಸಾಂಕ್ರಾಮಿಕ ರೋಗಗಳಾದ ಮಂಕಿಪಾಕ್ಸ್ ಮತ್ತು ಡೆಂಗಿ ಜ್ವರದ ಬಗ್ಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.  
ಮಂಕಿಪಾಕ್ಸ್: ಮಂಕಿಪಾಕ್ಸ್ ಪ್ರಾಣಿ ಜನ್ಯ ರೋಗವಾಗಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. 1958ರಲ್ಲಿ ಮೊದಲಬಾರಿಗೆ ಈ ರೋಗ ಕಂಡುಬಂದಿದ್ದು, 1970ರಲ್ಲಿ ಮಾನವರಲ್ಲಿ ಕಂಡುಬಂದಿರುತ್ತದೆ.
ಮಂಕಿಪಾಕ್ಸ್ ವೈರಸ್‍ನಿಂದ ಹರಡುತ್ತದೆ. ಇಲಿ, ಹೆಗ್ಗಣ, ಅಳಿಲು ಹಾಗೂ ಇತರೆ ಚಿಕ್ಕ ಪ್ರಾಣಿಗಳಲ್ಲಿ ಈ ವೈರಸ್ ಕಂಡುಬರುತ್ತದೆ. ಆಫ್ರೀಕಾದ ಇಲಿಗಳಲ್ಲಿ ಈ ವೈರಸ್ ಪ್ರಥಮ ಬಾರಿಗೆ ಪತ್ತೆಯಾಯಿತು. ಇತ್ತೀಚಿನ ದಿನಗಳಲ್ಲಿ ಅಮೇರಿಕಾ, ಯೂರೋಪ್ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ವೈರಸ್ ಹರಡಿದೆ. ಮಂಕಿಪಾಕ್ಸ್ ರೋಗದಲ್ಲಿ ಮಧ್ಯ ಆಫ್ರಿಕಾ ಹಾಗೂ ಪಶ್ಚಿಮ ಆಫ್ರಿಕಾ ಎಂಬ 2 ಪ್ರಭೇದಗಳಿವೆ. ಮಧ್ಯ ಆಫ್ರಿಕಾ ಪ್ರಭೇದ ಮಾರಕವಾಗಿದೆ.
ರೋಗ ಹರಡುವ ಬಗ್ಗೆ: ಈ ರೋಗದ ವೈರಸ್ ಇರುವ ಪ್ರಾಣಿಗಳು ಕಚ್ಚಿದಾಗ, ನೆಕ್ಕಿದಾಗ ವೈರಸ್ ಮಾನವನ ದೇಹದೊಳಗೆ ಹೋಗಿ ಪ್ರಭಾವ ಬೀರುತ್ತದೆ. ವೈರಸ್ ಹೊಂದಿದ ಪ್ರಾಣಿಗಳನ್ನು ಸೇವಿಸುವುದರಿಂದಲೂ ಈ ರೋಗ ಬರುತ್ತದೆ. ಮಾನವನಿಂದ ಮಾನವನಿಗೆ ಉಸಿರಾಟದ ಮೂಲಕ ಹರಡುತ್ತದೆ. ಕೆಮ್ಮು, ತಲೆನೋವು, ಮೈಕೈನೋವು, ಸುಸ್ತು, ದುಗ್ಧಗ್ರಂಥಿಗಳ ಊತ (ಗುಳ್ಳೆ) ಈ ರೋಗದ ಲಕ್ಷಣವಾಗಿದೆ. ಗುಳ್ಳೆಗಳು ಮುಖ್ಯವಾಗಿ ಮುಖ, ಕೈ, ಕಾಲುಗಳಲ್ಲಿ ಕಂಡುಬರುತ್ತದೆ. ಈ ಗುಳ್ಳೆಗಳು ನೋಡಲು ಸ್ಮಾಲ್ ಫಾಕ್ಸ್ ಗುಳ್ಳೆಗಳಂತೆ ಕಾಣುತ್ತವೆ. 5 ರಿಂದ 21 ದಿನದೊಳಗೆ ಈ ರೋಗವು ಹರಡುತ್ತದೆ.
ಚಿಕಿತ್ಸೆ:- ಈ ರೋಗಕ್ಕೆ ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯಿಂದ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಹೇಳಲಾಗಿಲ್ಲ. ಆದರೆ ರೋಗಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡುವುದು ಹಾಗೂ ಆಂಟಿವೈರಲ್ ಔಷಧಿ ನೀಡಲಾಗುವುದು.
ರೋಗ ಪತ್ತೆ ಹಚ್ಚುವುದು ಹೇಗೆ?: ಗಂಟಲು, ಮೂಗಿನ ದ್ರವ ಮಾದರಿ, ರಕ್ತದ ಮಾದರಿ,  ಮೂತ್ರದ ಮಾದರಿ, ಗುಳ್ಳೆಗಳ ದ್ರವದ ಮಾದರಿಗಳನ್ನು ಸಂಗ್ರಹಿಸಿ ಆರ್.ಟಿ.ಪಿ.ಸಿ.ಆರ್ ಪ್ರಯೋಗ ಶಾಲೆಯಲ್ಲಿ ಖಚಿತ ಪಡಿಸಲು ಮಾದರಿಗಳನ್ನು ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ನೀಡಲಾಗುವುದು.
ಮುಂಜಾಗ್ರತಾ ಕ್ರಮ: ಶಂಕಿತ ರೋಗ ಲಕ್ಷಣ ಕಂಡುಬಂದಲ್ಲಿ ರೋಗಿಯನ್ನು ಪ್ರತ್ಯೇಕವಾಗಿರುಸುವುದು. ಯಾರಾದರೂ ರೋಗ ಇರುವ ಪ್ರದೇಶದಿಂದ ಬಂದಲ್ಲಿ ಅವರನ್ನು ಗುರುತಿಸಿ ಪ್ರತ್ಯೇಕವಾಗಿರಲು ತಿಳಿಸುವುದು. ರೋಗಿಗಳನ್ನು ಚಿಕಿತ್ಸೆ ಮಾಡುವಾಗ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಉಪಯೋಗಿಸುವುದು.
ಡೆಂಗಿ ಜ್ವರ: ಡೆಂಗಿ ಜ್ವರ ಡೆಂಗಿ ವೈರಸ್ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುವಂತಹ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವುದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಡೆಂಗಿ ಜ್ವರದ ಲಕ್ಷಣಗಳು: ತೀವ್ರತರನಾದ ಜ್ವರ, ಕಣ್ಣಿನ ಹಿಂಭಾಗದಲ್ಲಿ ನೋವು, ಸುಸ್ತು, ತಲೆ ನೋವು, ಮೈಮೇಲೆ ಕೆಂಪು ಬಣ್ಣದ ದದ್ದೆಗಳು, ಗುಳ್ಳೆಗಳು, ಮಾಂಸ ಖಂಡಗಳ ನೋವು, ರಕ್ತದಲ್ಲಿ ಕಿರುತಟ್ಟೆಗಳ ಪ್ರಮಾಣ ಕಮ್ಮಿ ಆಗುವುದು, ಮಲದಲ್ಲಿ ರಕ್ತ ಸ್ರಾವ ಮತ್ತು ಪ್ರಜ್ಞಾಹೀನರಾಗುವುದು.
ಡಿ.ಪಿ.ಹೆಚ್.ಎಲ್ ಪ್ರಯೋಗಾಲಯದಲ್ಲಿ ಡೆಂಗಿ ರೋಗ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗಲಕ್ಷಣಗಳಿಗೆ ಆಧಾರವಾಗಿ ಚಿಕಿತ್ಸೆಯನ್ನು ನೀಡಲಾಗುವುದು.
ಮುಂಜಾಗ್ರಾತ ಕ್ರಮಗಳು: ಡೆಂಗಿ ಜ್ವರ ಸೋಂಕಿತ, ಈಡೀಸ್ ಈಜಿಪ್ಟೆ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಆದ್ದರಿಂದ ಸೊಳ್ಳೆಗಳು ಹುಟ್ಟುವ ನೀರಿನ ಲಾರ್ವ ಹಂತದಲ್ಲಿಯೇ ನಾಶ ಮಾಡುವುದು. ಮನೆಯ ಒಳಾಂಗಣ ಮತ್ತು ಹೊರಾಂಗಣ ತಾಣಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಸಂಪುಗಳು, ಒಡೆದ ಬಾಟಲಿಗಳು, ಮಡಿಕೆ, ಕುಡಿಕೆ, ಟೈರುಗಳು, ಹೂವಿನ ಕುಂಡಲಗಳು, ಘನತ್ಯಾಜ್ಯ ವಸ್ತುಗಳು ಮತ್ತು ಇತರೆ ಕೃತಕ ನೀರಿನ ತಾಣಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಎಲ್ಲಾ ನೀರಿನ ತಾಣಗಳನ್ನು ಮುಚ್ಚಿಡುವುದು ಮತ್ತು ವಾರಕ್ಕೆ ಎರಡು ಬಾರಿ ಖಾಲಿ ಮಾಡಿ ಸ್ವಚ್ಚ ಮಾಡಬೇಕು. ವಿಶ್ರಾಂತಿಯ ಎಲ್ಲಾ ಸಂದರ್ಭಗಳಲ್ಲಿ ಸೊಳ್ಳೆ ಪರದೆಗಳನ್ನು ಬಳಸಬೇಕು. ಮನೆಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಮನೆಯಲ್ಲಿ ಕಿಟಕಿ ಬಾಗಿಲು ಮುಚ್ಚುವುದು. ಸೊಳ್ಳೆ ನಿರೋಧಕಗಳನ್ನು ಬಳಸುವುದು. ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಕಚ್ಚುವಿಕೆಯಿಂದ ದೂರವಿರುವುದು. ಯಾವುದೇ ಜ್ವರವಿರಲಿ ತಕ್ಷಣ ಆಸ್ಪತ್ರೆಗೆ ಬರಬೇಕು. ಮಳೆ ಪ್ರಾರಂಭವಾಗಿರುವುದರಿಂದ ನೀರಿನ ತಾಣಗಳು ಹೆಚ್ಚಾಗಿದ್ದು, ಸೋಂಕಿತ ಈಡೀಸ್ ಈಜಿಪ್ಟ್ ಸೊಳ್ಳೆಗಳಿಂದ ಸೋಂಕು ಹೆಚ್ಚಾಗುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0