ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ಸಾಧನೆ ಹಿರಿಯೂರು

ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಗಾಯಿತ್ರಿ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ. ಜಿಲ್ಲೆಯ ರೈತರ ಜೀವನಾಡಿ ಗಾಯಿತ್ರಿ ಜಲಾಶಯ ಬುಧವಾರ ಭರ್ತಿಯಾಗಿದೆ. ಕಳೆದ ವರ್ಷ ಹಿಂಗಾರು ಹಂಗಾಮಿನ ನವೆಂಬರ್-20ರ ಶನಿವಾರ ಗಾಯಿತ್ರಿ ಜಲಾಶಯ ಭರ್ತಿಯಾಗಿತ್ತು. ಆದರೆ ಪ್ರಸಕ್ತ ಸಾಲಿನ 2022ರ ಆಗಸ್ಟ್-3ರಂದೇ ಜಲಾಶಯ ಭರ್ತಿಯಾಗಿರುವುದು ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ. ಅದೇ ರೀತಿ ಗಾಯಿತ್ರಿ ಜಲಾನಯನ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಸುವರ್ಣಮುಖಿ ನದಿ ಉಕ್ಕಿ ಹರಿಯುತ್ತಿದ್ದು ಜಲಸಂಪನ್ಮೂಲ ಇಲಾಖೆ ಸಾರ್ವಜನಿಕ ಪ್ರಕಟಣೆ ನೀಡಿ ನದಿ ಪಾತ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.

ಹಿರಿಯೂರು ತಾಲೂಕಿನ ವ್ಯಾಪ್ತಿಯ ಗಾಯಿತ್ರಿ ಜಲಾಶಯವು ಪೂರ್ಣ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹೆಚ್ಚುವರಿ ಮಳೆ ನೀರು ಕೋಡಿ ಮೂಲಕ ಸ್ವಾಭಾವಿಕವಾಗಿ ಸುವರ್ಣಮುಖಿ ನದಿ ಪಾತ್ರದಲ್ಲಿ ಹರಿಯುತ್ತಿದ್ದು, ಈ ಸಂಬಂಧ ಹವಾಮಾನ ಇಲಾಖೆಯಿಂದ ಇನ್ನು ಮೂರು ಮೂರು ದಿನ ಮಳೆಯಾಗುವ ಸಂಬಂವವಿರುವುದರಿಂದ ಕೋಡಿ ಮೂಲಕ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಆದುದರಿಂದ ಹಿರಿಯೂರು ಮತ್ತು ಶಿರಾ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಸುವರ್ಣಮುಖಿ ನದಿ ಪಾತ್ರದ ಎರಡು ಇಕ್ಕೆಲಗಳಲ್ಲಿ ಬರುವ ಗ್ರಾಮಸ್ಥರು ಮತ್ತು ಸಾರ್ವಜನಿಕರು ನದಿ ಪಾತ್ರದಲ್ಲಿ ಇಳಿಯಬಾರದು, ತಮ್ಮ ಜಾನುವಾರುಗಳನ್ನು ನದಿ ಪಾತ್ರಕ್ಕೆ ಕರೆದೊಯ್ಯಬಾರದು ಎಂದು ಮುಂಜಾಗ್ರತಾ ಕ್ರಮವಹಿಸಲು ತಿಳಿಸಿದ್ದಾರೆ.
ಹಿರಿಯೂರು ಮತ್ತು ಶಿರಾ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಸುವರ್ಣಮುಖಿ ನದಿ ಪಾತ್ರದ ಎರಡು ಇಕ್ಕೆಲಗಳಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರಿಗೆ ಮತ್ತು ಆಯಾಯ ಪ್ರದೇಶದಲ್ಲಿ ಜಲಸಂಪನ್ಮೂಲ ಇಲಾಖೆ ಮುನ್ನೆಚ್ಚರಿಕಾ ಕ್ರಮವಹಿಸಿದೆ.
ಸುವರ್ಣಮುಖಿ ನದಿ ಪಾತ್ರದ ಕರಿಯಾಲ, ಜವನಗೊಂಡನಹಳ್ಳಿ, ಗಾಯತ್ರಿಪುರ, ಬೆಣ್ಣೆಈರಪ್ಪನಹಟ್ಟಿ , ಜೂಲಯ್ಯನಹಟ್ಟಿ. ಮೂಡಲಹಟ್ಟಿ, ಮೂರುಮನೆ ಹಟ್ಟಿ, ವಿನಾಯಕನಗರ, ಹುಣಿಸೆಹಳ್ಳಿ, ಮಳೇಕೋಟೆ, ದಂಡೀಕೆರೆ, ಪೆನ್ನನಹೊಳೆ , ಹೆರೂರು, ನಾರಾಯಣಪುರ, ಯರವರಹಳ್ಳಿ, ಕುಂದಲಗುರ, ಮ್ಯದನಹೊಳೆ, ಕೂಡಲಹಳ್ಳಿ, ಉಜ್ಜನಕುಂಟೆ ಹಾಗೂ ಸುವರ್ಣಮುಖಿ ನಗರ ಹಾಗೂ ಸುವರ್ಣಮುಖಿ ನದಿ ಪಾತ್ರದ ಇತರೆ ಗ್ರಾಮಗಳ ಜನ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಜಲಸಂಪನ್ಮೂಲ ಇಲಾಖೆಯ ಹಿರಿಯೂರು ಉಪ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗಾಯಿತ್ರಿ ಜಲಾಶಯ- ಗಾಯಿತ್ರಿ ಜಲಾಶಯ ದಿನಾಂಕ-8-10-2010ರಲ್ಲಿ ತುಂಬಿ ಹರಿದಿತ್ತು. ೨೦೧೦ರ ವರ್ಷ ಭರ್ತಿಯಾಗಿದ್ದು ಬಿಟ್ಟರೆ ಅದರಿಂದಿನ 11 ವರ್ಷಗಳ ಬಳಿಕ ಅಂದರೆ 2021ರ ನವೆಂಬರ್ ತಿಂಗಳಲ್ಲಿ ಗಾಯಿತ್ರಿ ಡ್ಯಾಂ ಭರ್ತಿಯಾಗಿತ್ತು. ಮತ್ತೆ ಪ್ರಸಕ್ತ 2022ರ ಆಗಸ್ಟ್-3ರ ಬುಧವಾರ ಮುಂಗಾರು ಹಂಗಾಮಿನಲ್ಲೇ ಭರ್ತಿಯಾಗಿದೆ. 
ಎಲ್ಲಿದೆಃ ಹಿರಿಯೂರು ತಾಲೂಕಿನ ಜವನಗೊಂಡನ ಹೋಬಳಿಯ ಗಾಯಿತ್ರಿಪುರ ಸಮೀಪ ಗಾಯಿತ್ರಿ ಡ್ಯಾಂ ಇದೆ. ಬೆಂಗಳೂರು-ಹಿರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಜವನಗೊಂಡನಹಳ್ಳಿಯಿಂದ ಕೇವಲ 6 ಕಿಲೋ ಮೀಟರ್ ದೂರದಲ್ಲಿ ಗಾಯಿತ್ರಿ ಜಲಾಶಯ ಇದೆ. ಈಗ ಈ ಜಲಾಶಯ ತುಂಬಿ ಕೋಡಿ ಹರಿದಿದೆ. ಸತತ ನೀರಿನ ಅಭಾವದಿಂದ ನೈಜತೆ ಕಳೆದುಕೊಂಡಿದ್ದ ಗಾಯಿತ್ರಿ ಡ್ಯಾಂ ಇಂದು ಮೈತುಂಬಿ ಹರಿಯುತ್ತಿದೆ. ಈವರೆಗೆ 17 ಬಾರಿ ಕೋಡಿ ಹರಿದಿದೆ ಎನ್ನಲಾಗುತ್ತಿದೆ. ಇದರಿಂದ ಹಿರಿಯೂರು ತಾಲೂಕಿನ ಜೆಜಿಹಳ್ಳಿ ಹೋಬಳಿ, ಶಿರಾ ತಾಲೂಕಿನ ಕೆಲ ಹಳ್ಳಿಗಳ ರೈತರ ಬದುಕಲ್ಲಿ ಹರ್ಷ ತುಂಬಿದೆ.
ಡ್ಯಾಂ ಕಟ್ಟದ ಎತ್ತರ 154 ಅಡಿ ಇದ್ದರೂ ನೀರಿನ ಶೇಖರಣಾ ಮಟ್ಟ 145 ಅಡಿ. ತೂಬಿನ ಮಟ್ಟ 130 ಅಡಿ. ರೈತ ಬಳಕೆಗೆ ಕೇವಲ ಪ್ರತಿವರ್ಷ ಲಭ್ಯ ನೀರು ಕೇವಲ 15 ಅಡಿಗಳು ಮಾತ್ರ. ಕಳೆದ 2000ನೇ ಸಾಲು ಮತ್ತು 2010ನೇ ಸಾಲಿನಲ್ಲಿ ಸತತ ಒಂದು ತಿಂಗಳು ಕೋಡಿ ನೀರಿದಿದ್ದನ್ನು ಹೊರೆತು ಪಡಿಸಿದರೆ ಈ ವರ್ಷ ಮುಂದಿನ ಮೂರು ತಿಂಗಳು ನಿರಂತರವಾಗಿ ಸುವರ್ಣಮುಖಿ ನದಿ ಹರಿಯುವ ಸಾಧ್ಯತೆ ಇದೆ.
ನಿರ್ಮಾಣಃ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ರಿ ಗಾಯಿತ್ರಿದೇವಿ ಅವರ ಹೆಸರಿನಲ್ಲಿ 1958 ರಲ್ಲಿ ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿ 1963ರಲ್ಲಿ ಪೂರ್ಣಗೊಂಡಿದೆ. ನೀರಿನ ಶೇಖರಣಾ ಸಾಮರ್ಥ್ಯ ಕೇವಲ 0.97 ಟಿಎಂಸಿ. ಇದರಲ್ಲಿ ಡೆಡ್ ವಾಟರ್ ಸ್ಟೋರೇಜ್ 0.33 ಟಿಎಂಸಿ ಈ ನೀರನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಲು ಬರುವುದಿಲ್ಲ. ಉಳಿದ 0.64 ಟಿಎಂಸಿ ನೀರಿನಲ್ಲಿ 0.20 ಟಿಎಂಸಿ ನೀರನ್ನು 37 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮಂಜೂರಾತಿ ದೊರೆತಿದೆ. ಉಳಿದ 0.44ಟಿಎಂಸಿ ನೀರಿನಲ್ಲಿ 0.14 ಟಿಎಂಸಿ ನೀರು ಕಣ್ಣಿಗೆ ಕಂಡಂತೆ ಆವಿ ಮತ್ತು ಸೋರಿಕೆಯಾಗುತ್ತಿದೆ. ಉಳಿದ 0.30 ಟಿಎಂಸಿ ನೀರು ಕೃಷಿ ಮತ್ತು ತೋಟದ ಬೆಳೆಗಳಿಗೆ ಬಳಕೆ ಆಗಲಿದೆ.

ನೀರಿನ ಮೂಲ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಡ್ಯಾಂ ಭರ್ತಿಯಾದರೆ ಮಾತ್ರ ಗಾಯಿತ್ರಿ ಜಲಾಶಯಕ್ಕೆ ನೀರು ಬರಲಿದೆ. ಪ್ರಮುಖ ಜಲಮೂಲ ಸುವರ್ಣಮುಖಿ ಹಳ್ಳ. ತಿಪಟೂರು, ಅರಸೀಕೆರೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಚೆನ್ನಾಗಿ ಬಿದ್ದರೆ ಆ ಮಳೆ ನೀರು ಹಳ್ಳದಲ್ಲಿ ಹರಿದು ಬೋರನಕಣಿವೆ ಡ್ಯಾಂ ಸೇರುತ್ತದೆ. ಇದು ಭರ್ತಿಯಾದ ನಂತರ ಗಾಯಿತ್ರಿ ಡ್ಯಾಂಗೆ ಹರಿದು ಬರಲಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0