ಸತ್ತ ಅಮ್ಮನ ಹೆಣಕ್ಕೂ ಕಾಸಿಲ್ಲ, ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ..!!

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ನವದೆಹಲಿ ಬೆಂಗಳೂರು ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಸತ್ತ ಅಮ್ಮನ ಹೆಣಕ್ಕೂ ಕಾಸಿಲ್ಲ, ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ..!!

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಶ್ರೀ ಸಾಮಾನ್ಯನ ಸ್ಥಿತಿ ಗತಿ……..

ಭಾರತ ಪಾಕಿಸ್ತಾನ ಬಾಂಗ್ಲಾದೇಶ‌ ಸೇರಿ…….

ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ, ಸತ್ತ ಅಮ್ಮನ ಹೆಣವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣವಿಲ್ಲದೆ ದೈನೇಸಿಯಾಗಿ ಪರದಾಡುತ್ತಿರುವ ಸಾಮಾನ್ಯನಿಗೆ,

ಬಾಂಗ್ಲಾದೇಶವೂ ಸ್ವರ್ಗವೇ, ಭಾರತವೂ ಸ್ವರ್ಗವೇ,
ತಿಂದು ಕೊಬ್ಬಿದ ಗೂಳಿಯಂತ ಸಮಾಜ ಘಾತಕರಿಗೆ,

ಇಸ್ರೇಲೂ ನರಕವೇ, ಪ್ಯಾಲಿಸ್ಟೇನೂ ನರಕವೇ, ಚೀನಾನೂ ನರಕವೇ ದಿನವೂ ಜೀವ ಕೈಲಿಡಿದು ಓಡಾಡುವ ಸಾಮಾನ್ಯರಿಗೆ,

ಇರಾಕೂ ಸ್ವರ್ಗವೇ, ಸಿರಿಯಾನೂ ಸ್ವರ್ಗವೇ, ಆಫ್ಘನಿಸ್ಥಾನವೂ ಸ್ವರ್ಗವೇ ಕ್ರೂರ, ಕಟುಕ, ಮೂಲಭೂತವಾದಿ ISIS ಗಳೆಂಬ ನರರಾಕ್ಷಸರಿಗೆ,

ಹಾಗೇ, ಶ್ರೀಮಂತರಿಗೆ, ಯಶಸ್ವಿ ಸಿನಿಮಾ ನಟರಿಗೆ, ರಾಜಕಾರಣಿಗಳಿಗೆ ಎಲ್ಲ ದೇಶಗಳು ಸ್ವರ್ಗವೇ,

ಮಕ್ಕಳ ಊಟಕ್ಕಾಗಿ ರಾತ್ರಿ 5 ಜನ ಕುಡುಕ ವಿಟಪುರುಷರಿಗೆ ದೇಹ ಮಾರಿದ ಯಾವ ದೇಶದ ಹೆಣ್ಣು ಅದು ಹೇಗೆ ದೇಶಕ್ಕೆ ಜೈ ಅನ್ನುತ್ತಾಳೆ,

ಭಯೋತ್ಪಾದಕರ ಗುಂಡಿಗೆ ತನ್ನ ಇಬ್ಬರು ಮಕ್ಕಳು ಕಣ್ಣಮುಂದೆ ಬಲಿಯಾದದ್ದನ್ನು ಕಂಡು ಯಾವ ಉಕ್ರೇನ್ ಪ್ರಜೆ “ಉಕ್ರೇನ್ ಜಿಂದ್ ಬಾದ್ ” ಎನ್ನುತ್ತಾನೆ.

ಶಾಲೆಯಲ್ಲಿ ತಲೆತಿರುಕನ ಗುಂಡಿಗೆ ಒಬ್ಬಳೇ ಮಗಳನ್ನು ಕಳೆದುಕೊಂಡ ಅಮೆರಿಕ ದೇಶದ ತಾಯಿ ತಾನೇ ಆ ದೇಶವನ್ನು ಶಪಿಸದಿರುತ್ತಾಳೆ.

ಕೋಟಿ ಕೋಟಿ ಹಣ ಲೂಟಿ ಹೊಡೆದು ಐಷಾರಾಮಿ ಜೀವನ ನಡೆಸುವ ಕಿರಾತಕರಿಗೆ ಆಯಾ ದೇಶಗಳು ಸ್ವರ್ಗಗಳೇ.

ತುತ್ತು ಅನ್ನಕ್ಕೂ ಗತಿಯಿಲ್ಲದ, ಸತ್ತರೆ ಹೂಳಲು ಲಂಚ ಕೇಳುವ ದೇಶದಲ್ಲಿ ಜನ ಅದು ಹೇಗೆ ತಮ್ಮ ನೆಲವನ್ನು ಪ್ರೀತಿಸುತ್ತಾರೆ.

ಎಸಿ ರೂಮಿನಲ್ಲಿ ಕುಳಿತು ಮಾತನಾಡುವ ಟಿವಿ ನಿರೂಪಕರಿಗೆ, ಆಧ್ಯಾತ್ಮಿಕ ಚಿಂತಕರಿಗೆ ಅವರವರ ದೇಶ ಸ್ವರ್ಗವೇ,

ಬಿಸಿಲಿನಲ್ಲಿ ಬೆಂದು, ಚಳಿಯಲ್ಲಿ ನಡುಗುವ ಅಸಹಾಯಕರಿಗೆ ಎಲ್ಲಾ ದೇಶಗಳು ನರಕವೇ.

ಅಸಮಾನತೆ, ಅಮಾನವೀಯತೆ ಇರುವ ಸಮಾಜದಲ್ಲಿ ದೇಶದ್ರೋಹ ಮತ್ತು ದೇಶಪ್ರೇಮ ದುರುಳರಿಗೆ ವ್ಯಾಪಾರ,

ರಾಜಕಾರಣಿಗಳಿಗೆ ತಮ್ಮ ಸ್ವಾರ್ಥ ಸಾಧನೆಯ ಪ್ರಬಲ ಅಸ್ತ್ರ, ಕೆಲವರಿಗೆ ಹೊಟ್ಟೆ ಪಾಡಿನ ಸರಕು.

ಆದರೆ ಸಾಮಾನ್ಯರಿಗೆ ಅವರ ದೇಹದ ಪ್ರತಿ ಕಣಕಣವೂ, ಅವರ ಕ್ಷಣಕ್ಷಣದ ಉಸಿರೂ ದೇಶಭಕ್ತಿಯೇ‌‌ ಅದು ಸಹಜ ಮತ್ತು ಸ್ವಾಭಾವಿಕ ತನಗರಿವಿಲ್ಲದೇ.

ಅವರಿಗೆ ದೇಶದ್ರೋಹವೆಂದರೆ ಗೊತ್ತೇ ಇಲ್ಲ.
ಇನ್ನು ಅದರ ಬಗ್ಗೆ ಯೋಚಿಸುವುದೆಲ್ಲಿ. ಅಷ್ಟು ಶಕ್ತಿಯೂ ಅವರಿಗಿಲ್ಲ.

ಹಸು ತಿನ್ನುವ ಆಸೆಗೆ ಚರ್ಮ ಸುಲಿಸಿಕೊಳ್ಳುವ ಭಾರತೀಯನಿಗೆ ಇದು ನರಕವೇ,

ಪ್ರೀತಿಸಿದ್ದಕ್ಕಾಗಿ ಕಲ್ಲಿನಿಂದ ಹೊಡೆಸಿಕೊಳ್ಳುವ ಪಾಕಿಸ್ತಾನಿಗೆ ಅದು ನರಕವೇ.

ಅಲ್ಲಿಯವರು ಹೇಳುತ್ತಾರೆ ಭಾರತಕ್ಕೆ ದಿಕ್ಕಾರ,
ಇಲ್ಲಿಯವರು ಹೇಳುತ್ತಾರೆ ಪಾಕಿಸ್ತಾನಕ್ಕೆ ದಿಕ್ಕಾರ,

ಆದರೆ ಸತ್ಯ ಮಾತ್ರ ಎಲ್ಲ ಕಡೆಯ ಜನಸಾಮಾನ್ಯರ ಅಂತರಾಳದಲ್ಲಿ ಬಚ್ಚಿಟ್ಟುಕೊಂಡು ಮೌನವಾಗಿ ರೋದಿಸುತ್ತಿದೆ.

ವಿಶಾಲ ಮನೋಭಾವದ ಮನುಷ್ಯರಿಗೆ ಮಾತ್ರ ಇದು ಅರ್ಥವಾಗುತ್ತದೆ.

ದ್ವೇಷ ಅಸೂಯೆ ಕಪಟ ಮುಖವಾಡದವರಿಗೆ, ಇದು ಅರಿವಾಗುವುದೇ ಇಲ್ಲ.

ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಯಾವುದೇ ದೇಶದ ಅಭಿವೃದ್ಧಿ ಕೇವಲ ಶ್ರೀಮಂತರ ಶ್ರೀಮಂತಿಕೆಯ ಅಳತೆಗೋಲಲ್ಲ. ಅದು ಬಡವರ ಶೋಷಿತರ ಜೀವನಮಟ್ಟದ ಆಧಾರದ ಮೇಲೆ ನಿರ್ಧಾರವಾಗಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ ಹೆಚ್.ಕೆ.
9844013068…...

What’s your Reaction?
+1
0
+1
0
+1
0
+1
0
+1
0
+1
0
+1
0