ಹಿರಿಯ ಹಾಸ್ಯನಟ ಉಮೇಶ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡದ ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್(80) ಅವರು ಭಾನುವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರವೀಂದ್ರ ಕಲಾ ಕ್ಷೇತ್ರದ ಆವರಣಕ್ಕೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಕನ್ನಡದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು. ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

- Advertisement - 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಸ್ಯ ನಟ ಉಮೇಶ್ ಅವರ ಸಾವಿಗೆ ಕಂಬನಿ ಮಿಡಿದು ಎಕ್ಸ್​​​ ಪೋಸ್ಟ್​​ನಲ್ಲಿ ಎಂ.ಎಸ್.ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದರು. 

- Advertisement - 

ನಾಗರ ಹೊಳೆ, ಗುರು ಶಿಷ್ಯರು, ಅನುಪಮಾ, ಕಾಮನಬಿಲ್ಲು, ಅಪೂರ್ವ ಸಂಗಮ, ಶ್ರುತಿ ಸೇರಿದಾಗ, ಹಾಲು ಸಕ್ಕರೆ, ಗೋಲ್​ಮಾಲ್ ರಾಧಾಕೃಷ್ಣ ಅವರ ಪ್ರಮುಖ ಸಿನಿಮಾಗಳಾಗಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ತಿಳಿಸಿದ್ದಾರೆ.

ಪ್ರಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು.

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಹಾಸ್ಯನಟ ಉಮೇಶ್ ಅವರ ಸಾವಿಗೆ ಸಂತಾಪ ಸೂಚಿಸಿ ತಮ್ಮ ಎಕ್ಸ್ ಖಾತೆ ಪೋಸ್ಟ್ ಮಾಡಿ ಗುರು ಶಿಷ್ಯರು‘, ‘ಹಾಲು ಜೇನು‘, ‘ಅಪೂರ್ವ ಸಂಗಮಸೇರಿ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಉಮೇಶ್ ಅವರ ಅಗಲಿಕೆ ಕನ್ನಡ ಕಲಾಜಗತ್ತಿಗೆ ಬಹುದೊಡ್ಡ ನಷ್ಟ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ದೇವರಲ್ಲಿ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಹಿರಿಯ ನಟ ಎಂ.ಎಸ್.ಉಮೇಶ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉಮೇಶ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ಬಾಲ ಕಲಾವಿದರಾಗಿ ಮಕ್ಕಳ ರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ ಎಂದು ಸ್ಮರಿಸಿದ್ದಾರೆ.

ಡಾ.ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದು. ಗುರು ಶಿಷ್ಯರು, ಗೋಲ್ಮಾಲ್ ರಾಧಾಕೃಷ್ಣ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದ್ದು. ಮನೋಜ್ಞ ಅಭಿನಯದ ಅದ್ಭುತ ಕಲಾವಿದ ಕ್ಯಾನ್ಸರ್ ರೋಗದಿಂದ ನರಳಿ ಪ್ರಾಣ ಬಿಡುವಂತಾಗಿದ್ದು ದುರ್ದೈವ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ತಂಗಡಗಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಉಮೇಶ್ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಂಬನಿ ಮಿಡಿದ್ದಾರೆ.

ಸರಿಸುಮಾರು 6 ದಶಕಗಳ ಕಾಲ ಕನ್ನಡ ಸಿನಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಶ್ರೀ ಉಮೇಶ್ ಅವರು ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ದಿಗ್ಗಜ ನಟರೊಂದಿಗೂ ಬೆಳ್ಳಿ ಪರದೆಯನ್ನು ಹಂಚಿಕೊಂಡು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ತಮ್ಮ ಹಾಸ್ಯಭರಿತ ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ಉಮೇಶ್ ಅವರ ಕಾಯ ಅಳಿದರೂ ಅವರ ಚಲನಚಿತ್ರಗಳ ಮೂಲಕ ಕನ್ನಡಿಗರ ಜನಮಾನಸದಲ್ಲಿ ಅವರು ಸದಾ ಜೀವಂತ. ಶೋಕತಪ್ತ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಸಂತಾಪಗಳನ್ನು ಅವರು ತಿಳಿಸಿದ್ದಾರೆ.

 

 

Share This Article
error: Content is protected !!
";