ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ, ಅಗತ್ಯ ಚಿಕಿತ್ಸೆ ಮತ್ತು ಸೂಕ್ತ ಆರೈಕೆಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ‘ಆಯುಷ್ಮಾನ್ ವಯೋ ವಂದನಾ‘ ಯೋಜನೆಗೆ ತಾಂತ್ರಿಕ ಕಾರಣದ ನೆಪ ನೀಡಿ, ತಡೆ ಒಡ್ಡಿರುವ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಧೋರಣೆ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇಶಾದ್ಯಂತ ಈಗಾಗಲೇ 96 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಕಾರ್ಡ್ ಪಡೆದಿದ್ದರೆ, ಕರ್ನಾಟಕದಲ್ಲಿ ಮಾತ್ರ ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದ ಲಕ್ಷಾಂತರ ವಯೋವೃದ್ಧರು 5 ಲಕ್ಷ ರೂ.ಗಳ ಉಚಿತ ಚಿಕಿತ್ಸಾ ನೆರವಿನಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರದ ಯೋಜನೆಗಳಿಗೆ ‘ಬ್ರೇಕ್‘ ಹಾಕುವ ಭರದಲ್ಲಿ, ಸಂಪುಟದಲ್ಲಿ ಅನುಮೋದನೆ ಪಡೆದರೂ ಜಾರಿಗೆ ಹಿಂದೇಟು ಹಾಕುತ್ತಾ, ತಂದೆ-ತಾಯಿ ಸಮಾನರಾದ ಹಿರಿಯರಿಗೆ ತೊಂದರೆ ಕೊಡುತ್ತಿರುವುದನ್ನು ಅತ್ಯಂತ ಕುಟುವಾಗಿ ಅವರು ಖಂಡಿಸಿದರು.
ದಾಖಲೆಗಳ ನೆಪವೊಡ್ಡಿ ಕೇಂದ್ರದ ಜನಪರ ಯೋಜನೆಗಳನ್ನು ತಡೆಯುವುದನ್ನು ನಿಲ್ಲಿಸಿ, ಕೂಡಲೇ ಈ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಹಿರಿಯ ನಾಗರಿಕರ ಆರೋಗ್ಯದ ಹಕ್ಕು ರಾಜಕೀಯ ಮೀರಿದ್ದು. ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಬದ್ಧತೆಯ ಈ ಯೋಜನೆಯ ನೆರವನ್ನು ನಮ್ಮ ರಾಜ್ಯದ ಹಿರಿಯ ನಾಗರಿಕರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿ. ಹಿರಿಯ ನಾಗರಿಕರ ಬದುಕಿನ ಹಕ್ಕನ್ನು ಕಸಿದುಕೊಳ್ಳುತ್ತಿರುವ ನಿಮ್ಮ ಸರ್ಕಾರದ ಧೋರಣೆ ಅನಾಗರಿಕ ಮಾತ್ರವಲ್ಲ, ಜನವಿರೋಧಿ ನಡವಳಿಕೆಯಾಗಿದೆ. ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು, ರಾಜ್ಯದಲ್ಲಿ ‘ಆಯುಷ್ಮಾನ್ ವಯೋ ವಂದನಾ‘ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

