ಮುಡಾ ತನಿಖೆಗೆ ಅನರ್ಹರ ಆಯೋಗ ರಚನೆ-ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಅಕ್ರಮ ತನಿಖೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿರುವ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಮೂರು ವರ್ಷಗಳ ಕಾಲ ಯಾವುದೇ ಶಾಸನಬದ್ಧ ಸಮಿತಿ
, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗೆ ನೇಮಕ ಮಾಡದಂತೆ ನವೆಂಬರ್ 7 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಮುಡಾ ಅಕ್ರಮ ತನಿಖೆ ಮಾಡಲು ಅನರ್ಹರು ಎಂಬ ವಿಷಯ ಬೆಳಕಿಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಜನತೆಗೆ ಉತ್ತರಿಸಬೇಕಾದ ಪ್ರಶ್ನೆಗಳು ಎಂದು ಪಟ್ಟಿ ಮಾಡಿ ಅಶೋಕ್ ಉತ್ತರ ನೀಡುವಂತೆ ಆಗ್ರಹ ಮಾಡಿದ್ದಾರೆ.

1.) ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು ತನಿಖಾ ಆಯೋಗದಲ್ಲಿ ಮುಂದುವರೆಯಲು ಅನರ್ಹರು ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು ಯಾವಾಗ?

2.) ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುವರೆಗೂ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿರಲಿಲ್ಲವೆ? ಅಥವಾ ಗಮನಕ್ಕೆ ಬಂದಿದ್ದರೂ ಕಾನೂನು ಬಾಹಿರವಾಗಿ ಮುಂದುವರೆಸಲಾಯಿತೆ?

3.) ಅವರ ಅನರ್ಹತೆ ಬಗ್ಗೆ ನ್ಯಾಯಮೂರ್ತಿಗಳು ಸ್ವತಃ ತಾವೇ ಸರ್ಕಾರದ ಗಮನಕ್ಕೆ ತಂದು, ತನಿಖಾ ಆಯೋಗದಿಂದ ಹಿಂದೆ ಸರಿಯಬೇಕಾಗಿತ್ತು. ಆದರೆ ಅನರ್ಹತೆ ಆದೇಶ ಬಂದ 5 ದಿನಗಳ ನಂತರ, ಅಂದರೆ ನವೆಂಬರ್ 12ರಂದು ಅವರು ಮುಡಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಇದು ತಪ್ಪಲ್ಲವೇ?

4.) ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳು ಸುರಕ್ಷಿತವಾಗಿದೆಯೇ?

5.) ಸ್ವತಃ ನಾಡಿನ ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಗಳಾಗಿರುವ, ಸುಮಾರು 4,000 ಕೋಟಿ ರೂಪಾಯಿ ಮೊತ್ತದ ಬೃಹತ್ ಭ್ರಷ್ಟಚಾರ ನಡೆದಿದ ಎನ್ನಲಾದ ಮುಡಾ ಹಗರಣದ ತನಿಖೆಯಲ್ಲಿ ಸರ್ಕಾರ ಎಷ್ಟು ಗಂಭೀರವಾಗಿದೆ ಎನ್ನುವುದಕ್ಕೆ ಈ ಎಡವಟ್ಟು ನಿದರ್ಶನವಲ್ಲವೇ?

ಸರ್ಕಾರ ಈ ಕೊಡಲೇ ತನಿಖಾ ಆಯೋಗಕ್ಕೆ ನೀಡಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ವಶ ಪಡಿಸಿಕೊಳ್ಳಬೇಕು. ತನಿಖಾ ಆಯೋಗದ ಮುಖ್ಯಸ್ಥರಿಗೆ ನವೆಂಬರ್ 7 ರ ನಂತರ ನೀಡಲಾಗಿರುವ ಎಲ್ಲ ಸಂಬಳ, ಸೌಲಭ್ಯಗಳನ್ನು ಹಿಂಪಡೆಯಬೇಕು. ಅನರ್ಹರಾಗಿದ್ದೂ ಸಹ ತನಿಖಾ ಆಯೋಗದಲ್ಲಿ ಮುಂದುವರೆದ ನಿವೃತ್ತ ನ್ಯಾಯಮೂರ್ತಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಮಾನ್ಯ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಅಶೋಕ್ ಅವರು ಒತ್ತಾಯಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";