ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವ್ಯಕ್ತಿಯೊಬ್ಬ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೌರ ಸೇವಾ ನೌಕರನ ಮೇಲೆ ತಲೆಯಿಂದ ಗುದ್ದಿರುವ ಘಟನೆಯೊಂದು ಜನವರಿ 15 ರಂದು ಸಂಜೆ ನಾಲ್ಕು ಘಂಟೆ ವೇಳೆಗೆ ನಡೆದಿದೆ. ಘಟನೆಯಿಂದ ಬೇಸತ್ತ ಪೌರಕಾರ್ಮಿಕರು ಇಂದು ತಮ್ಮ ಕೆಲಸವನ್ನು ನಿಲ್ಲಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ.
ಕೆಲಸದ ಮೇಲಿದ್ದ ನಗರಸಭೆಯ ವಿಷಯ ನಿರ್ವಾಹಕ ರೇವಣ್ಣ ಅವರ ಮೇಲೆ ಕಚೇರಿ ಪಾಳ್ಯದ ನಿಂಬೆಹಣ್ಣು ಕೃಷ್ಣಪ್ಪ ಎಂಬುವವರು ಡಿಚ್ಚಿ ಹೊಡೆದರು ಎಂಬ ಆರೋಪ ಕೇಳಿಬಂದಿದ್ದು, ಘಟನೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿನ್ನೆ ಸಂಜೆ ನಗರ ಸಭೆಯ ಪೌರಾಯುಕ್ತರು, ಅಧಿಕಾರಿಗಳೊಂದಿಗೆ ನಗರದ ಡಿ ಕ್ರಾಸ್ ರಸ್ತೆಯಲ್ಲಿನ ಕಾಂಡಿಮೆಂಟ್ಸ್ ಬಳಿ ಅಂಗಡಿ ಪರವಾನಗಿ ವಿಚಾರದ ಬಗ್ಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಪೌರ ಕಾರ್ಮಿಕರ ಮೇಲೆ ಡಿಚ್ಚಿ ಹೊಡೆದಿರುವ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಕಾರ್ಮಿಕರ ಕೆಲಸದ ಮೇಲೆ ಅಸಮಾಧಾನ ಇದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಬೇಕು, ಅದನ್ನು ಬಿಟ್ಟು ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವುದು ತೀರಾ ಖಂಡನೀಯ, ಒಬ್ಬ ವ್ಯಕ್ತಿಯ ಮೇಲೆ ಡಿಚ್ಚಿ ಹೊಡೆಯುವ ಅಧಿಕಾರ ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಾತನಾಡಿದ ನಗರ ಸಭೆಯ ವಿಷಯ ನಿರ್ವಾಹಕ ರೇವಣ್ಣ ಅವರು, ನಿನ್ನೆ ಸಂಜೆ ನಗರದ ಗೀತಾ ಮಂದಿರ ಪಕ್ಕದ ಕಾಂಡಿಮೆಂಟ್ಸ್ ಬಳಿ ಪೌರಾಯುಕ್ತರು, ಆರ್.ಒ ಮತ್ತು ನಾನು ಅಂಗಡಿ ಪರವಾನಗಿ ಬಗ್ಗೆ ವಿಚಾರಣೆ ಮಾಡುತ್ತಿದ್ದೆವು, ಈ ವೇಳೆ ಅಲ್ಲಿಗೆ ಬಂದ ಕೃಷ್ಣಪ್ಪ ಅವರು ಏಕಾಏಕಿ ಅವಾಚ್ಯ ಶಬ್ದಗಳಿಂದ ಊರೆಲ್ಲಾ ನಿಮ್ಮದೆ ಹಾವಳಿ ಎಂದು ಕೂಗಾಡುತ್ತಿದ್ದರು, ಕಾರಣ ಕೇಳಿದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ನನ್ನ ಹಣೆಗೆ ಡಿಚ್ಚಿ ಹೊಡೆದರು, ನಂತರ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದರು. ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತನಿಂದ ನನ್ನನ್ನು ಬಿಡಿಸಿದರು. ಘಟನೆ ಸಂಬಂಧ ಈಗ ಪೊಲೀಸ್ ದೂರು ನೀಡುತ್ತಿದ್ಧೇವೆ ಎಂದು ತಿಳಿಸಿದರು.
ಕೆಲಸ ನಿಲ್ಲಿಸಿದ ಪೌರ ಕಾರ್ಮಿಕರು: ಇಂದು ಬೆಳಿಗ್ಗೆ ಐದು ಗಂಟೆಗೆ ನಗರಸಭೆ ಬಳಿ ಸೇರಿದ ಪೌರಕಾರ್ಮಿಕರು ತಮ್ಮ ದೈನಂದಿನ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಹತ್ತು ಗಂಟೆಗೆ ಪ್ರತಿಭಟನೆ ಮೂಲಕ ಪೌರಾಯುಕ್ತರಿಗೂ ಹಾಗು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್. ಐ.ಆರ್ ದಾಖಲು ಮಾಡಲಾಗಿದೆ.