ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಭರ್ತಿ-ಸಚಿವ ಸುಧಾಕರ್
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಯಲುಸೀಮೆ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯವು ಬೇಸಿಗೆ ಸಂದರ್ಭದಲ್ಲಿ ಮಳೆ ಇಲ್ಲದಿದ್ದರೂ ಜನವರಿ ತಿಂಗಳಲ್ಲಿ ಭರ್ತಿಯಾಗಿ ಕೋಡಿ ಹರಿಯುವ ಮೂಲಕ 3 ಬಾರಿಗೆ ಭರ್ತಿಯಾದ ಇತಿಹಾಸ ಸೃಷ್ಠಿಸಿದೆ.
ವಿವಿ ಸಾಗರದ ಜಲ ಮೂಲವಾದ ಚಿಕ್ಕಮಗಳೂರು, ಅಜ್ಜಂಪುರ, ತರೀಕೆರೆ, ಕಡೂರು, ಬಿರೂರು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅಷ್ಟೇನು ಮಳೆ ಆಗಲಿಲ್ಲ, ಆದರೂ ಬೇಸಿಗೆ ಸಂದರ್ಭದಲ್ಲಿ ಹೇಗೆ ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿಯಿತು ಎನ್ನುವ ಯಕ್ಷ ಪ್ರಶ್ನೆ ಉತ್ತರ ಹುಡುಕುವುದು ಸುಲಭ.
ರಾಜಕೀಯ ಇಚ್ಛಾಸಕ್ತಿ, ಪ್ರಮಾಣಿಕವಾಗಿ ವಿವಿ ಸಾಗರಕ್ಕೆ ನೀರು ಹರಿಸಬೇಕೆಂದು ಬದ್ಧತೆ ತೋರಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಪರಿಶ್ರಮದಿಂದಾಗಿಯೇ ಇಂದು ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿದು ಇತಿಹಾಸ ಸೃಷ್ಠಿಸಿದೆ.
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಲಿಫ್ಟ್ ಮಾಡಲು ಪ್ರತಿ ವರ್ಷ ಜೂನ್-15 ರಿಂದ ಅಕ್ಟೋಬರ್ 15ರವರೆ ಮೂರು ತಿಂಗಳು ಮಾತ್ರ ಅವಕಾಶವಿದೆ. ಆದರೆ ಅಕ್ಟೋಬರ್-15 ರಿಂದ ಜನವರಿ ಅಂತ್ಯದವರೆಗೆ ನೀರು ಲಿಫ್ಟ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಭದ್ರಾ ಅಚ್ಚುಕಟ್ಟುದಾರರ ತೀವ್ರ ವಿರೋಧ ಒಂದು ಕಡೆಯಾದರೆ ಸೇತುವೆ ಕುಸಿದಿದ್ದು, ವಿದ್ಯುತ್ ಕಡಿತ ಮಾಡಿದ್ದು, ಅಜ್ಜಂಪುರ, ತರೀಕೆರೆ ಭಾಗದ ರೈತರ ಮನವೊಲಿಕೆ ಮಾಡಿ ಎಲ್ಲ ಅಡ್ಡಿ ಆತಂಕಗಳನ್ನು ದೂರ ಮಾಡಿ ಬಯಲು ಸೀಮೆಗೆ ನೀರು ಹರಿಸುವ ಕಾರ್ಯ ಮಾಡಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಪರಿಶ್ರಮ ಕೂಡ ಇದೆ.
ಮಳೆ ಇಲ್ಲದಿದ್ದರೂ ಬೇಸಿಗೆ ಸಂದರ್ಭದಲ್ಲಿ ರಾಜಕೀಯ ಇಚ್ಛಾಸಕ್ತಿ, ಬದ್ಧತೆಯಿಂದಾಗಿ ಭದ್ರಾದಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯದ ಕೋಡಿ ಹರಿಸುವ ಮೂಲಕ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಬಯಲು ಸೀಮೆಯ ಜಲ ಭಗೀರಥ ಎನಿಸಿಕೊಂಡಿದ್ದಾರೆ.
ಜನವರಿ-23 ರಂದು ಸಿಎಂ, ಡಿಸಿಎಂ ಇಬ್ಬರು ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಚಂದ್ರವಳ್ಳಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಸಚಿವರೊಂದಿಗೆ ನಡೆಸಿದ ಸಂದರ್ಶನ ಆಯ್ದ ಭಾಗಗಳು, ಸಚಿವ ಸುಧಾಕರ್ ಅವರ ಅಂತರಾಳದ ಮಾತುಗಳು ಓದುಗರಿಗಾಗಿ…
1 ಮಳೆ ಇಲ್ಲದಿದ್ದರೂ ವಾಣಿ ವಿಲಾಸ ಸಾಗರ 3ನೇ ಬಾರಿಗೆ ಭರ್ತಿ ಆಗಿದೆ. ನಿಮ್ಮ ಶ್ರಮ ಇದೆಯಾ?.
120 ವರ್ಷಗಳ ಇತಿಹಾಸ ಹೊಂದಿರುವ ಮಾರಿ ಕಣಿವೆ ಡ್ಯಾಂಗೆ ತನ್ನದೇ ಆದ ಇತಿಹಾಸ ಇದೆ. ಇಲ್ಲಿ ನಾವು ನೆಪ ಮಾತ್ರ. ಈ ಡ್ಯಾಂನ ಬಹುದೊಡ್ಡ ಶಕ್ತಿ ಕಣಿವೆ ಮಾರಕ್ಕ. ಆ ತಾಯಿ ಕೃಪಾಶೀರ್ವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಬದ್ಧತೆಯಿಂದಾಗಿ ಮಳೆ ಇಲ್ಲದಿದ್ದರೂ ವಿವಿ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಹರಿದಿದೆ.
3ನೇ ಬಾರಿಗೆ ಕೋಡಿ ಹರಿಯುತ್ತಿರುವುದು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ ಅತೀವ ಸಂತೋಷ ಆಗಿದೆ.
2 ಅದ್ಧೂರಿ ಬಾಗಿನ ಕಾರ್ಯಕ್ರಮದ ಉದ್ದೇಶ ಏಕೆ?.
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸಿಎಂ, ಡಿಸಿಎಂ ಅವರಿಗೆ ಆಹ್ವಾನ ನೀಡಬೇಕಿತ್ತು. ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿಕೆ ಶಿವಕುಮಾರ್ ಅವರು ವಿವಿ ಸಾಗರ ಡ್ಯಾಂಗೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ. ಸಿಎಂ, ಡಿಸಿಎಂ ಬಂದು ಹೋಗುತ್ತಿರುವುದರಿಂದ ಚಿತ್ರದುರ್ಗ ಜಿಲ್ಲೆ ಮತ್ತು ಹಿರಿಯೂರು ತಾಲೂಕಿಗೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ತುರ್ತು ಕಾರ್ಯಗಳು, ಯುಜಿಡಿಗೆ ಅನುದಾನ ಸೇರಿದಂತೆ ಎಲ್ಲ ಕೆರೆ ಕಟ್ಟೆಗಳಿಗೆ ವಿವಿ ಸಾಗರದಿಂದ ನೀರು ಭರ್ತಿ ಮಾಡುವ ಯೋಜನೆ ಕಾರ್ಯ ರೂಪಕ್ಕೆ ತರಬೇಕಿದೆ. ಹಾಗಾಗಿ ಸಿಎಂ, ಡಿಸಿಎಂ ಅವರಿಗಾಗಿ ಒಂದು ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
3 ಹಿರಿಯೂರು ಕ್ಷೇತ್ರಕ್ಕೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರೇ ಎಂದು ನಿಮ್ಮ ಪಕ್ಷದ ಹಿರಿಯ ಶಾಸಕ ಗೋವಿಂದಪ್ಪ ಆರೋಪ ಮಾಡಿದ್ದರಲ್ಲ?.
ಸಹೋದ್ಯೋಗಿ ಶಾಸಕರ ಆರೋಪದಲ್ಲಿ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿ. ಇಡೀ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವು ನನಗಿದೆ. ಹಿರಿಯೂರು ಕ್ಷೇತ್ರಕ್ಕೆ ಸಚಿವರು ಎನ್ನುವ ಆರೋಪ ಹುರುಳಿಲ್ಲದ್ದು. ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತದೆ. ಇಡೀ ಜಿಲ್ಲೆಗೆ ಆಗಬೇಕಿರುವ ಕೆಲಸ ಕಾರ್ಯಗಳು ಮತ್ತು ದೊಡ್ಡ ದೊಡ್ಡ ಸಮಸ್ಯೆಗಳನ್ನು ರಾಜ್ಯದ ದಣಿ ಸಿಎಂ, ಡಿಸಿಎಂ ಅವರ ಗಮನಕ್ಕೆ ತರಬೇಕಿದೆ. ಜ.18ರಂದು ಸಿಎಂ, ಡಿಸಿಎಂ ಇಬ್ಬರು ಬರುತ್ತಿರುವುದರಿಂದ ಅವರ ಗಮನಕ್ಕೂ ಗೋವಿಂದಪ್ಪನವರ ಬೇಡಿಕೆ ಕುರಿತು ಗಮನ ಸೆಳೆಯುತ್ತೇನೆ. ನನಗೆ ಆರು ವಿಧಾನಸಭಾ ಕ್ಷೇತ್ರಗಳು ಒಂದೇ. ಇದರಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸಲ್ಲ.
4 ಜಿಲ್ಲೆಯ ಎಲ್ಲ ಕೆರೆ ಕಟ್ಟೆಗಳನ್ನು ಭರ್ತಿ ಮಾಡುವ ಉದ್ದೇಶ ಇದೆಯಾ?.
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಜಿಲ್ಲೆಯ ಆರು ತಾಲೂಕುಗಳಲ್ಲಿನ ಎಲ್ಲ ಕೆರೆ ಕಟ್ಟೆಗಳಿಗೆ ನೀರು ಭರ್ತಿ ಮಾಡಲಾಗುತ್ತದೆ. ಇದು ಇಡೀ ಜಿಲ್ಲೆಗೆ ಆಗಬೇಕಿರುವ ಆದ್ಯತಾ ವಲಯ ಕಾರ್ಯ. ಈ ಕಾರ್ಯಾನುಷ್ಠಾನಕ್ಕಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಿಎಂ, ಡಿಸಿಎಂ ಅವರ ಗಮನಕ್ಕೆ ತಂದು ತ್ವರಿತವಾಗಿ ಕೆರೆಗಳಿಗೆ ನೀರು ಭರ್ತಿ ಮಾಡುವ ಕೆಲಸ ಮಾಡಲಾಗುತ್ತದೆ.
5 ವಿವಿ ಸಾಗರಕ್ಕೆ ಬೇಸಿಗೆಯಲ್ಲಿ ಭದ್ರಾದಿಂದ ನೀರು ಹರಿಸಲು ಹೇಗೆ ಸಾಧ್ಯ?.
ಜೂನ್-15 ರಿಂದ ಅಕ್ಟೋಬರ್-15ರವರೆಗೆ ಮಾತ್ರ ಭದ್ರಾದಿಂದ ನೀರು ಹರಿಸಲು ಅವಕಾಶವಿದೆ. ಆದರೆ ಜನವರಿ ಅಂತ್ಯದವರೆಗೆ ನೀರು ಹರಿಸಲು ಸಾಧ್ಯವಾಗಿದ್ದು ಜಲಸಂಪನ್ಮೂಲ ಇಲಾಖೆ ಸಚಿವರು ಆಗಿರುವ ಡಿ.ಕೆ ಶಿವಕುಮಾರ್ ಅವರ ಕಾರ್ಯಾದೇಶ. ಇದರ ಜೊತೆಗೆ ಮಲೆನಾಡಿನಾದ್ಯಂತ ನವೆಂಬರ್ ಅಂತ್ಯದವರೆಗೆ ಭದ್ರಾ ಡ್ಯಾಂಗೆ ನೀರು ಹರಿದು ಬಂದಿತ್ತು. ಭದ್ರಾ ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹ ಇತ್ತು. ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ ಡಿಕೆ ಶಿವಕುಮಾರ್ ಅವರು ಜನವರಿ ಅಂತ್ಯದ ವರೆಗೆ ನೀರು ಹರಿಸಲು ಆದೇಶಿಸಿದ್ದಾರೆ. ಈ ಕಾರ್ಯಕ್ಕಾಗಿ ಸಿಎಂ, ಡಿಸಿಎಂ ಇಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
6 ಜೆಜಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಭರ್ತಿ ಮಾಡದಿದ್ದಲ್ಲ ಸಿಎಂ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಬೆದರಿಕೆ ಇದೆಯಲ್ಲ?.
ಕೆಲವರಿಗೆ ಮಾಹಿತಿ ಕೊರತೆ ಇರುವುದರಿಂದ ಈ ರೀತಿ ಆಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯ ಹಿಂದಿನ ಡಿಪಿಆರ್ ಪರಿಷ್ಕರಿಸಿ ಕಲ್ಲವಳ್ಳಿ(ಜೆಜಿಹಳ್ಳಿ) ಭಾಗಕ್ಕೆ ಮಾರೀಕಣಿವೆ ನೀರನ್ನು ಹರಿಸಬೇಕು ಎನ್ನುವ ಉದ್ದೇಶದಿಂದ ಆ ಭಾಗದ 17 ಕೆರೆಗಳನ್ನ ತುಂಬಿಸಬೇಕು ಎನ್ನುವ ಆದೇಶ ಆಗಿದೆ. ಅಲ್ಲದೆ ನೀರು ಸಹ ಹಂಚಿಕೆ ಆಗಿದೆ. ಜೆಜಿ ಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೂರಷ್ಟು ನೀರು ಭರ್ತಿ ಮಾಡಲಾಗುತ್ತದೆ. ಇದಲ್ಲದೆ ಸುಮಾರು 225 ಕೋಟಿ ರೂ.ಗಳಲ್ಲಿ ತುಮಕೂರು ಬ್ರಾಂಚ್ ಕಾಲುವೆ ಮೂಲಕ ಆ ಭಾಗದ ಎಲ್ಲ ಕೆರೆಗಳನ್ನು ಭರ್ತಿ ಮಾಡಲು ಡಿಪಿಆರ್ ಮಾಡಲಾಗಿದೆ. ಈ ಕಾರ್ಯ ವಿಳಂಬ ಆಗುವ ಸಾಧ್ಯತೆ ಇರುವುದರಿಂದ ಕೂನಿಕೆರೆ ಸಮೀಪ ದೊಡ್ಡ ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿಂದ ಕಲ್ಲುವಳ್ಳಿ ಭಾಗದ 15 ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಬಜೆಟ್ ನಲ್ಲಿ ಹೊಸ ಡಿಪಿಆರ್ ಗೆ ಅನುದಾನ ಮೀಸಲಿಡಲಾಗುತ್ತದೆ. ಈಗಾಗಲೇ ಸಣ್ಣ ನೀರಾವರಿ ಸಚಿವರು, ಸಿಎಂ ಅವರು ಭರವಸೆ ನೀಡಿದ್ದು ರೈತರಲ್ಲಿ ಅನುಮಾನ, ಆತಂಕ ಬೇಡ.
7 ಧರ್ಮಪುರ ಹೋಬಳಿ 15 ಕೆರೆಗಳಿಗೆ ನೀರು ಭರ್ತಿ ಮಾಡುತ್ತೀರಾ?.
ಧರ್ಮಪುರ ಹೋಬಳಿಯ 15 ಕೆರೆಗಳು ಸೇರಿ ಒಟ್ಟು 32 ಕೆರೆಗಳು ಹಿರಿಯೂರು ತಾಲೂಕಿನಲ್ಲಿ ಭರ್ತಿ ಆಗಲಿವೆ. ಧರ್ಮಪುರ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ಭರ್ತಿ ಆಗಲಿದೆ. ಧರ್ಮಪುರ ಹೋಬಳಿಯಲ್ಲಿ ಉಳಿದಿರುವ ಎಲ್ಲ ಕೆರೆಗಳನ್ನು ಭರ್ತಿ ಮಾಡಲು 28 ಕೋಟಿ ರೂ.ಗಳಲ್ಲಿ ಡಿಪಿಆರ್ ರೆಡಿಯಾಗಿದ್ದು ಈ ಯೋಜನೆಗೂ ಬಜೆಟ್ ನಲ್ಲಿ ಹಣ ಮೀಸಲಿಡಲಿದ್ದಾರೆ ಯಾರಲ್ಲೂ ಆತಂಕ ಬೇಡ.
8 ತರೀಕೆರೆ, ಅಜ್ಜಂಪುರ ರೈತರು ಅಡ್ಡಿ ನಿವಾರಣೆ ಮಾಡಿದ್ದು ಹೇಗೆ?.
ಅಜ್ಜಂಪುರ, ತರೀಕೆರೆ ಭಾಗದ ಕೆಲ ರೈತರು ಸಮಸ್ಯೆ ಎದುರಿಸುತ್ತಿದ್ದರು. ಈ ವಿಷಯ ಜಲ ಸಂಪನ್ಮೂಲ ಸಚಿವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಗಮನಕ್ಕೆ ಬಂದಾಗ ಕೂಡಲೇ ಅವರು ಕಳೆದ ಮೂರು ತಿಂಗಳಿಂದೆ ರೈತರು, ಅಲ್ಲಿನ ಜನಪ್ರತಿನಿಧಿಗಳ ಸಭೆ ಮಾಡಿ ಮನವೊಲಿಸಿ ಅಡ್ಡಿ ಆತಂಕಗಳನ್ನು ದೂರ ಮಾಡಿದ ಮೇಲೆಯೇ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ನಿಂದ ನೀರು ಲಿಫ್ಟ್ ಮಾಡಲು ಸಾಧ್ಯವಾಯಿತು.
8 ಅಜ್ಜಂಪುರ ಸಮೀಪ ಸೇತುವೆ ಕುಸಿದಾಗ ನೀರು ಲಿಫ್ಟ್ ಸ್ಥಗಿತಗೊಂಡಾಗ ಏನು ಮಾಡಲಾಯಿತು?.
ಜನವರಿ ಅಂತ್ಯದವರೆಗೆ ವಿವಿ ಸಾಗರಕ್ಕೆ ನೀರು ಹರಿಸಲು ಆದೇಶ ಆದ ಮೇಲೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಬಹಳ ಸಂತೋಷ ಆಗಿತ್ತು. ಆದರೆ ಒಂದೆರಡು ದಿನಗಳಲ್ಲಿ ನೀರು ಹರಿಯುವ ಮಾರ್ಗದಲ್ಲಿ ಸೇತುವೆ ಕುಸಿಯಿತು. ಕೂಡಲೇ ಭದ್ರಾ ಅಧಿಕಾರಿಗಳ ಸಭೆ ಮಾಡಿ 35 ಲಕ್ಷ ರೂ.ಗಳಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿ ಮತ್ತೆ ಭದ್ರಾದಿಂದ ನೀರು ಲಿಫ್ಟ್ ಮಾಡಿಲಾಯಿತು. ಆಗ ನಾವು ಪಟ್ಟ ಶ್ರಮ ಆ ದೇವರಿಗೆ ಗೊತ್ತು. ಭದ್ರಾ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರು.
9 ಲಿಫ್ಟ್ ಮಾಡುವ ಪಂಪ್ ಹೌಸ್ ನ ವಿದ್ಯುತ್ ಕಡಿತ ಹೇಗಾಯಿತು?.
ಅಕ್ಟೋಬರ್-15ರ ನಂತರ ಭದ್ರಾ ಡ್ಯಾಂನಿಂದ ನೀರು ಲಿಫ್ಟ್ ಮಾಡಲು 108 ಅಡೆ ತಡೆ, ಅಡ್ಡಿ ಆತಂಕಗಳು ಎದುರಾದವು. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಕಾರ, ಬದ್ಧತೆಯಿಂದಾಗಿ ಎಲ್ಲವೂ ನಿವಾರಣೆ ಆಗಿ ನೀರು ಲಿಫ್ಟ್ ಆಗುತ್ತಿದೆ.
ಹೊರಗಿನ ಅಡ್ಡಿ ಆತಂಕಗಳ ಜೊತೆಗೆ ಸುಮಾರು 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇತ್ತು. ವಿದ್ಯುತ್ ಸಂಪರ್ಕ ಕಡಿತ ಮಾಡಿದರು. ಕೂಡಲೇ ಡಿಸಿಎಂ ಅವರು ಇಂಧನ ಸಚಿವರು ಮತ್ತು ಎಂಡಿ ಅವರ ಮನವೊಲಿಕೆ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಆಗ ವಿವಿ ಸಾಗರಕ್ಕೆ ನೀರು ಬರುತ್ತಲ್ಲ ಎಂದು ನಿಟ್ಟುಸಿರು ಬಿಡುವಂತಾಯಿತು.
10 ತುಮಕೂರು ಮತ್ತು ಚಿತ್ರದುರ್ಗ ಬ್ರಾಂಚ್ ಕಾಲುವೆಗಳ ಕಾಮಗಾರಿ ವಿಳಂಬ ಏಕೆ?.
ಚಿತ್ರದುರ್ಗ ಮತ್ತು ತುಮಕೂರು ಮುಖ್ಯ ಕಾಲುವೆಗಳ ಕಾಮಗಾರಿಯನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣ ಮಾಡಿ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ಚಿತ್ರದುರ್ಗ, ತುಮಕೂರು, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ನೀರುಣಿಸುವ ಕಾರ್ಯ ಮಾಡಲಾಗುತ್ತದೆ.
11 ಸಿಎಂ, ಡಿಸಿಎಂ ಅವರಿಗೇಕೆ ಭದ್ರಾ ನೀರು ಹರಿಸಲು ಇಷ್ಟೊಂದು ಬದ್ಧತೆ?.
ಚಿತ್ರದುರ್ಗ ಬರ ಪೀಡಿತ ಜಿಲ್ಲೆ. ಇಡೀ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಬುಡಕಟ್ಟು ಸಮುದಾಯಗಳು, ಹಿಂದುಳಿದ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಮಗ್ರ ನೀರಾವರಿ ಯೋಜನೆ ಕಾರ್ಯಗತವಾದರೆ ಇವರೆಲ್ಲರ ಬದುಕು ಹಸನಾಗಲಿದೆ ಎನ್ನುವ ಕಾಳಜಿಯಿಂದಾಗಿ ಸಿಎಂ, ಡಿಸಿಎಂ ಅವರು ಹೆಚ್ಚಿನ ಕೆಲಸ ಮಾಡಿದ್ದಾರೆ. ಅಲ್ಲದೆ ಅಜ್ಜಂಪುರ, ತರೀಕೆರೆ ಭಾಗದ ರೈತರು ಸಾಕಷ್ಟು ಸಹಕಾರ ನೀಡಿದ್ದಾರೆ. ಆ ಭಾಗದ ಕೆರೆಗಳನ್ನು ಭರ್ತಿ ಮಾಡಲಾಗಿದೆ.
12 ವೇದಾವತಿ ನದಿಯಲ್ಲಿರುವ ಸೀಲ್ಟ್(ಹೂಳು) ಎತ್ತಲು, ಎರಡು ಬದಿಯ ರೈತರ ಜಮೀನು ಕೊರೆಯದಂತೆ ಯೋಜನೆ ರೂಪಿಸಲಾಗಿದೆಯಾ?.
ಭದ್ರಾದಿಂದ ವಾಣಿ ವಿಲಾಸ ಸಾಗರಕ್ಕೆ ಬರುವ ವೇದಾವತಿ ಮಾರ್ಗದ ಯಾವ ಭಾಗದಲ್ಲಿ ಅಡಚಣೆಗಳಿವೆಯೋ ಅಲ್ಲಿ ರೈತರ ಜಮೀನು ಕೊರೆಯದಂತೆ ಎರಡು ಬದಿಯಲ್ಲಿ ಕಲ್ಲು ಕಟ್ಟಡ ನಿರ್ಮಾಣ, ನದಿಯ ಹೂಳೆತ್ತುವ ಕಾರ್ಯ ಮಾಡಲು 12 ಕೋಟಿ ರೂ.ಗಳ ಡಿಪಿಆರ್ ಸಿದ್ಧ ಮಾಡಲಾಗಿದೆ. ಜ.18 ರಂದು ಸಿಎಂ, ಡಿಸಿಎಂ ಬಂದಾಗ ಈ ಯೋಜನೆಗೂ ಮಂಜೂರಾತಿ ದೊರೆಯಲಿದೆ.
13 ಎತ್ತಿನಹೊಳೆ ನೀರು ಲಿಫ್ಟ್ ಸ್ಥಗಿತ ಆಗಿದ್ದು ಏಕೆ?.
ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಹರಸಾಹಸ ಮಾಡಿ ಎತ್ತಿನಹೊಳೆ ನೀರು ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ಹರಿಸಬೇಕೆಂದು ಪ್ರಯತ್ನಿಸಿದ್ದರ ಫಲವಾಗಿ ಆ ಭಾಗದ ಕೆರೆ, ಕಟ್ಟೆಗಳು ಭರ್ತಿಯಾಗಿ ವಿವಿ ಸಾಗರಕ್ಕೆ 1-2 ಟಿಎಂಸಿ ನೀರು ಬಂದಿದೆ. ಅಲ್ಲದೆ ಈ ಯೋಜನೆಯಲ್ಲೂ ಸಾಕಷ್ಟು ಅಡ್ಡಿ ಆತಂಕಗಳು ಬಂದವು. ಆದರೂ ಸ್ಪಲ್ಪ ದಿನ ನೀರು ಲಿಫ್ಟ್ ಮಾಡಲಾಯಿತು. ಇದೇ ವೇಳೆ ಆ ಭಾಗದಲ್ಲಿ ಮಳೆ ಸ್ಥಗಿತಗೊಂಡಿತು. ಮುಂದಿನ ಜೂನ್ ತಿಂಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯ ಆಗಲಿದೆ.
14 ಧರ್ಮಪುರ ಮತ್ತು ಪರಶುರಾಂಪುರ ತಾಲೂಕು ಕೇಂದ್ರ ಬೇಡಿಕೆ ಏನಾಯ್ತು?.
ಸರ್ಕಾರದ ಮುಂದೆ ಹೊಸ ತಾಲೂಕುಗಳ ರಚನೆ ಬಗ್ಗೆ ಚರ್ಚೆ ನಡೆದಿಲ್ಲ. ಸದ್ಯಕ್ಕೆ ಹೊಸ ತಾಲೂಕುಗಳ ರಚನೆ ಸಾಧ್ಯವಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ತಾಲೂಕುಗಳಿಗೆ ಟೇಬಲ್ ಕುರ್ಚಿಗಳಿಲ್ಲ. ಸುಮ್ಮನೆ ಆಫೀಸ್ ಇದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇವುಗಳಿಗೆ ಶಕ್ತಿ ತುಂಬಿದ ಮೇಲೆ ಮುಂದಿನ ದಿನಗಳಲ್ಲಿ ಹೊಸ ತಾಲೂಕುಗಳ ರಚನೆ ಕಾರ್ಯ ಆಗಲಿದೆ. ಆಗ ಧರ್ಮಪುರ, ಪರಶುರಾಂಪುರ ಎರಡು ಕೇಂದ್ರಗಳು ಒಂದೇ ಬಾರಿಗೆ ತಾಲೂಕು ಕೇಂದ್ರಗಳಾಗಿ ಘೋಷಣೆ ಆಗಲಿವೆ.
15 ಧರ್ಮಪುರ ಕೆರೆ ಸೇರಿ ಇತರೆ 7 ಕೆರೆಗಳಿಗೆ ನೀರು ಲಿಫ್ಟ್ ಮಾಡುವ ಹೊಸಹಳ್ಳಿ ಯೋಜನೆ ಕಾಮಗಾರಿ ಕಳಪೆ ಆಗಿದ್ದು ಹೇಗೆ?.
ಕಳಪೆ ಕಾಮಗಾರಿ ಆಗಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಎಲ್ಲೆಲ್ಲಿ ಕಳಪೆ ಪೈಪ್ ಗಳನ್ನ ಅಳವಡಿಸಲಾಗಿತ್ತೋ ಅಲ್ಲಲ್ಲಿ ಗುಣಮಟ್ಟದ ಪೈಪ್ ಅಳವಡಿಸುವ ಕಾರ್ಯವನ್ನು ಸಂಬಂಧ ಪಟ್ಟ ಗುತ್ತಿಗೆದಾರರು ಈಗಾಗಲೇ ಮಾಡುತ್ತಿದ್ದಾರೆ. ಅಜ್ಜಿಕಟ್ಟೆಗೆ ನೀರು ಹರಿಸಲು ವೈಜ್ಞಾನಿಕವಾದ ಡಿಪಿಆರ್ ಮಾಡಿಲ್ಲ. 60 ಮೀಟರ್ ಎತ್ತರದಲ್ಲಿದೆ. ಆದರೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಅಜ್ಜಿಕಟ್ಟೆಗೂ ನೀರು ಭರ್ತಿ ಮಾಡಲಾಗುತ್ತದೆ.