ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠಕ್ಕೆ ಬಾಲಿವುಡ್ನ ಖ್ಯಾತ ತಾರೆ ಶಿಲ್ಪಾ ಶೆಟ್ಟಿ ದಂಪತಿ ರೋಬೋಟಿಕ್ ಆನೆಯನ್ನ ಉಡುಗೊರೆಯಾಗಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿಗೆ ಆಗಮಿಸಿ ದಂಪತಿಗಳು ರೋಬೋಟಿಕ್ ಆನೆ ಕೊಡುಗೆ ನೀಡಿದ್ದಾರೆ. ನೋಡುವುದಕ್ಕೆ ರೋಬೋಟಿಕ್ ಆನೆ ಯಥಾವತ್ತಾಗಿ ನೈಜ ಆನೆಯಂತೆಯೇ ಕಾಣಿಸುತ್ತದೆ. ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲುಗಾಡಿಸುತ್ತಿರುತ್ತದೆ.
ನೋಡಲು ದೈತ್ಯ ಗಾತ್ರದಾಗಿದ್ದು, ಸದಾ ಆಕ್ಟೀವ್ ಆಗಿರುವ ಈ ಆನೆಯನ್ನು ನೋಡಿದವರಿಗೆ ಜೀವಂತ ಆನೆಯೇ ಇಲ್ಲಿ ನಿಂತುಕೊಂಡಿದೆ ಎಂಬಂತೆ ಭಾಸವಾಗುತ್ತದೆ. ಪಂಚಪೀಠಗಳಲ್ಲೇ ರಂಭಾಪುರಿ ಮಠವು ಮೊದಲ ಪೀಠವಾಗಿದೆ. ಈ ಮಠದ ಭಕ್ತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಿಂದಾಗ್ಗೆ ಮಠಕ್ಕೆ ಭೇಟಿ ನೀಡುತ್ತಿರುತ್ತಾರೆ. ದಂಪತಿಗಳು ಸಂಕಲ್ಪ ಮಾಡಿಕೊಂಡು ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ನೈಸರ್ಗಿಕ ಆನೆ ನೀಡುವುದಕ್ಕೆ ಹಲವು ನಿಯಮಗಳು ಅಡ್ಡಿ ಬರುವ ಹಿನ್ನೆಲೆ ರೋಬೋಟಿಕ್ ಆನೆ ದಾನ ನೀಡುವವರ ಸಂಖ್ಯೆ ಹೆಚ್ಚಾಗಿದೆ.