ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಆರ್ಥಿಕ ಅಶಿಸ್ತು, ಗಂಭೀರ ಲೋಪಗಳನ್ನು ಎತ್ತಿ ತೋರಿಸಿರುವ ಭಾರತ ಸರ್ಕಾರದ ಮಹಾಲೇಖಪಾಲರ ವರದಿ (CAG) ಸರ್ಕಾರದ ಆರ್ಥಿಕ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ. ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ನಿಗದಿ ಮಾಡಿದ್ದ ಬಂಡವಾಳವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಆರ್ಥಿಕ ಗೊಂದಲಗಳನ್ನು ಸೃಷ್ಟಿ ಮಾಡಿಕೊಂಡಿದೆ. ಸರ್ಕಾರದ ಆರ್ಥಿಕ ಇಲಾಖೆಯ ಲೋಪದೋಷಗಳನ್ನು ಸಿಎಜಿ ಎತ್ತಿ ತೋರಿಸಿರುವುದು ರಾಜ್ಯದ ಘನತೆಗೆ ಕಪ್ಪು ಚುಕ್ಕೆ ಅಂಟಿಸಿದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ 2024-24 ನೇ ಸಾಲಿನಲ್ಲಿ ರಾಜ್ಯದ ಮೂಲ ಸೌಕರ್ಯಕ್ಕಾಗಿ ನಿಗದಿ ಮಾಡಲಾಗಿದ್ದ ಬಂಡವಾಳ ವೆಚ್ಚದಲ್ಲಿ ಸುಮಾರು ₹5,299 ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಕುರಿತು ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮತೋಲನವಿಲ್ಲದ ಹಾಗೂ ಲೆಕ್ಕ ಬಚ್ಚಿಡುವ ಆರ್ಥಿಕ ನಿರ್ವಹಣೆಯಿಂದಾಗಿ ಹಣಕಾಸಿನ ಕೊರತೆ ಹಾಗೂ ಸಾಲದ ಮಟ್ಟದ ಮೇಲೆ ಗಂಭೀರ ಪ್ರಭಾವ ಬೀರುವ ಎಚ್ಚರಿಕೆಯ ವರದಿಯನ್ನು ನೀಡಿದೆ.
ತನ್ನ ತಪ್ಪುಗಳು ಹಾಗೂ ದೋಷಗಳನ್ನು ಮುಚ್ಚಿಟ್ಟುಕೊಂಡು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರು ಯಾವಾಗಲೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಾರೆ. ಕೇಂದ್ರದ ಅನುದಾನದಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾರೆ ಕಾಂಗ್ರೆಸ್ ನ ಇಂಥ ಜಾರಿಕೊಳ್ಳುವ ನಡವಳಿಕೆ ಹಾಗೂ ಮೋದಿ ಜೀ ಅವರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನಗಳಿಗೆ ಸಿಎಜಿ ವರದಿ ಉತ್ತರ ನೀಡಿದೆ, ಆ ಮೂಲಕ ಸಿದ್ದರಾಮಯ್ಯನವರ ಸರ್ಕಾರದ ಆರ್ಥಿಕ ದೋಷಗಳನ್ನು ಬಯಲು ಮಾಡಿದೆ.
ಪಂಚ ಗ್ಯಾರಂಟಿ ಯೋಜನೆಗಳು 2023- 24ನೇ ಸಾಲಿನ ರಾಜಸ್ವ ವೆಚ್ಚದ ಶೇ. 15 ರಷ್ಟು ಪಾಲು ಹೊಂದಿವೆ, ರಾಜ್ಯದ ರಾಜಸ್ವ ಸ್ವೀಕೃತಿ ಕಳೆದ ವರ್ಷಕ್ಕಿಂತ ಶೇ.1.86 ಬೆಳೆದರೆ ಅದರ ಖರ್ಚು ಶೇ. 12.64 ರಷ್ಟು ಹೆಚ್ಚಾಗಿದೆ. ಇದು 9,271 ಕೋಟಿ ರಾಜಸ್ವ ಕೊರತೆಗೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ವಿತ್ತೀಯ ಕೊರತೆಯು 2022 -23ರಲ್ಲಿ 4,623 ಕೋಟಿ ರೂ ನಿಂದ 2023-24 ರಲ್ಲಿ 65,522 ಕೋಟಿ ರೂ.ಗೆ ಏರಿಕೆಯಾಗಿದೆ. ಸರ್ಕಾರ ಯೋಜನೆಗಳು ಮತ್ತು ಅದರಿಂದ ಉಂಟಾಗುವ ಕೊರತೆಗಳನ್ನು ನೀಗಿಸಲು 63,000 ಕೋಟಿ ರೂ ನಿವ್ವಳ ಮಾರುಕಟ್ಟೆ ಸಾಲ ಪಡೆದುಕೊಂಡಿತ್ತು, ಇದು ಹಿಂದಿನ ವರ್ಷದ ನಿವ್ವಳ ಸಾಲಕ್ಕಿಂತ 26,000 ಕೋಟಿ ರೂ ಹೆಚ್ಚಾಗಿದೆ,
ಮುಂದಿನ ದಿನಗಳಲ್ಲಿ ರಾಜ್ಯದ ಮೇಲೆ ಮರುಪಾವತಿಗೆ ಸಾಲದ ಹೊರೆಯನ್ನು ಹೆಚ್ಚಿಸಿ ರಾಜ್ಯದ ಬಡ್ಡಿಯ ಹೊರೆಯನ್ನು ಅಗಾಧವಾಗಿಸುವ ಮೂಲಕ ರಾಜ್ಯದ ಪ್ರತಿ ಪ್ರಜೆಯಮೇಲೂ ಪರೋಕ್ಷ ಸಾಲದ ಭಾರ ಹೆಚ್ಚಿಸುವ ಆತಂಕಕಾರಿ ಬೆಳವಣಿಗೆ ರಾಜ್ಯದ ಮೂಲ ಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ಸುಮಾರು 5,229 ಕೋಟಿ ರೂ ನಷ್ಟು ಕಡಿಮೆ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪೂರ್ಣ ಯೋಜನೆಗಳ ಹೆಚ್ಚಳದ ಮೇಲೆ ಶೇಕಡ 68% ರಷ್ಟು ಪರಿಣಾಮ ಬೀರುತ್ತದೆ, ಇದರಿಂದ ನಾಡಿನ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಸಿಎಜಿ ವರದಿ ಎಚ್ಚರಿಕೆ ಗಂಟೆ ಬಾರಿಸಿದೆ.
ಅಧಿಕಾರಕ್ಕೆ ಬರುವ ಏಕೈಕ ಅಜೆಂಡಾ ಇಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಮುಂದಾಲೋಚನೆಯಿಲ್ಲದೇ ನಿರ್ವಹಿಸುತ್ತಿರುವ ಹಣಕಾಸು ನಿರ್ವಹಣೆಯಿಂದಾಗಿ ರಾಜ್ಯದ ಭವಿಷ್ಯ ಹಳ್ಳ ಹಿಡಿಯುವ ಪರಿಸ್ಥಿತಿಗೆ ತಲುಪುತ್ತಿದೆ, ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.

