ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ ಮತ್ತು ಅಖಂಡ ಕರ್ನಾಟಕ ರೈತ ಸಂಘ ಇವರ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕೃಷಿ ಅಧಿಕಾರಿ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದು ಕೊಟ್ಟಿರುವ ಮಕ್ಕಳು ತಮ್ಮ ತಂದೆ ತಾಯಿಯವರ ಪರಿಶ್ರಮ ಗುರುತಿಸಿದ್ದಾರೆ. ಶ್ರದ್ಧೆ ಮತ್ತು ಏಕಾಗ್ರತೆ ಇದ್ದರೆ ಇಂಥಹ ಸಾಧನೆ ಮಾಡಲು ಸಾಧ್ಯ. ಈ ಸಾಧನೆಗೆ ಸಾಕಷ್ಟು ಸ್ಥಾನುಮಾನಗಳು ದೊರೆಯುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ತೋಟಗಾರಿಕೆ ಅಧಿಕಾರಿ ಕುಮಾರ್ ನಾಯಕ ಮಾತನಾಡಿ ಗಡಿಭಾಗದಲ್ಲಿ ಅದರಲ್ಲೂ ಬರದ ನಾಡಾಗಿರುವ ಚಳ್ಳಕೆರೆಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಬಂದಿರುವುದು ಕಾಲೇಜಿಗ ದೊಡ್ಡ ಹೆಸರು ಬಂದಂತಾಗಿದೆ ಎಂದು ತಿಳಿಸಿದರು.
ಕಿಸಾನ್ ಜಿಲ್ಲಾಧ್ಯಕ್ಷ ನಾಗರಾಜ ಎ ಪರಶುರಾಂಪುರ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೂರು ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳು ಬಂಗಾರದ ಪದಕ ಗಳಿಸಿ ಪ್ರಥಮ ಸ್ಥಾನ ಗಳಿಸಿರುವುದು ತಾಲೂಕಿಗಿಂತ ಚಿತ್ರದುರ್ಗ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ರಾಜ್ಯದಲ್ಲಿರುವ ಟಾಪ್ 10 ಕಾಲೇಜಿಗೂ ಯಾವುದೇ ರೀತಿ ಸರ್ಕಾರಿ ಕಾಲೇಜು ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ಒಬ್ಬ ಮಗ್ಗ ನೇಯುವ, ಮತ್ತೊಬ್ಬರು ಅಡಿಗೆ ಕೆಲಸ ಮಾಡುವ, ಇನ್ನೊಬ್ಬರು ಕಾರ್ಮಿಕರಾಗಿರುವ ಮಕ್ಕಳೇ ಈ ಸಾಧನೆ ಮಾಡಿರುವುದು ಮರೆಯಲಾಗದ ಸಂಗತಿ.
ಈ ಸಾಧನೆಯ ಹಿಂದೆ ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಉಪನ್ಯಾಸಕರು ಮತ್ತು ಎಲ್ಲಾ ಗುರು ವೃಂದದವರ ಶ್ರಮ ಕೂಡ ಇದೇ ಎನ್ನುವುದು ಅಷ್ಟೇ ಪ್ರಸ್ತುತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ನಗರಸಭಾ ಅಧ್ಯಕ್ಷೆ ಶಿಲ್ಪ ಮುರಳಿ, ಅಧ್ಯಕ್ಷೆ ಕವಿತಾ ಬೋರಯ್ಯ ಮಾತನಾಡಿದರು.

