ಬಾಣಂತಿಯರ ಸಾವು ಲೋಕಾಯುಕ್ತಕ್ಕೆ ದೂರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಮುಂದುವರೆದಿದ್ದು ಬಿ ಜೆಪಿ ನಿಯೋಗ ಇಂದು ಲೋಕಾಯುಕ್ತಕ್ಕೆ ದೂರು ನೀಡಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಸಿಕೆ ರಾಮಮೂರ್ತಿ ಮತ್ತು ಎಂಎಲ್​​ಸಿ ರವಿಕುಮಾರ್​ ಒಳಗೊಂಡ ನಿಯೋಗ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇತ್ತೀಚೆಗೆ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ತಿಳಿಸಿತ್ತು. ಅದರಂತೆ ತಜ್ಞರ ಸಮಿತಿಯೂ ಬಾಣಂತಿಯರ ಸಾವಿಗೆ IV ಗ್ಲೂಕೋಸ್ ಕಾರಣ ಎಂಬ ವರದಿ ಬಹಿರಂಗಗೊಂಡಿತ್ತು.

ಇಷ್ಟಾದರೂ ಕೂಡ ಬಾಣಂತಿಯರ ಸಾವು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಈ ಪ್ರಕರಣವು ಕಾಂಗ್ರೆಸ್ ಸರ್ಕಾರದ, ವಿಶೇಷವಾಗಿ ಆರೋಗ್ಯ ಸಚಿವಾಲಯದ, ಆರೋಗ್ಯ ರಕ್ಷಣೆಯ ಮೂಲಭೂತ ಮಾನದಂಡಗಳನ್ನು ಖಾತ್ರಿಪಡಿಸುವಲ್ಲಿ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಘೋರ ನಿರ್ಲಕ್ಷ್ಯ, ಸತ್ಯವನ್ನು ಮರೆಮಾಚಲು ಮುಂದಾಗಿರುವುದು ಖಂಡನೀಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ನವೆಂಬರ್​ 24 ರಂದು ಕೂಡ್ಲಿಗಿಯ ಮಹಿಳೆ ಗರ್ಭಿಣಿ ಆಗಿದ್ದರು. ಹೀಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಾಗಿದ್ದಾರೆ. ದಾಖಲಾದ ಎರಡೇ ದಿನದಲ್ಲಿ ಅವರು ನಿಧನರಾದರು. ಈ ಹೃದಯ ವಿದ್ರಾವಕ ಘಟನೆಯು ಸಂಪೂರ್ಣ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ-ಗುಣಮಟ್ಟದ IV ದ್ರವಗಳ ಅಡ್ಯೂನಿಸ್ಟ್ರೇಶನ್ ರೋಗಿಗಳ ಸುರಕ್ಷತೆಯ ಸಂಪೂರ್ಣ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಮತ್ತು ಪ್ರಸ್ತುತ ಆರೋಗ್ಯ ಸಚಿವರ ನಾಯಕತ್ವದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಮತ್ತು ದುರುಪಯೋಗವನ್ನು ಬಹಿರಂಗಪಡಿಸುತ್ತದೆ.

ಬಾಣಂತಿಯರ ಸಾವಿಗೆ ಮೂಲ ಕಾರಣಗಳನ್ನು ತಿಳಿಸುವ ಬದಲು, ಆಸ್ಪತ್ರೆಯ ಆಡಳಿತಗಾರರು, ಅಧಿಕಾರಿಗಳು ಮತ್ತು ಕಾಂಗ್ರೆಸ್​ ನಾಯಕರು ಸತ್ಯವನ್ನು ಹತ್ತಿಕ್ಕಲು ಒಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣವನ್ನು ರತ್ನಗಂಬಳಿಯ ಕೆಳಗೆ ತಳ್ಳುವ ಈ ಪಿತೂರಿಯು ಕರ್ನಾಟಕದ ಜನರಿಗೆ ಅಪಮಾನ ಮತ್ತು ಅಧಿಕಾರದ ಅಸ್ಪಷ್ಟ ದುರುಪಯೋಗವಾಗಿದೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

 

- Advertisement -  - Advertisement - 
Share This Article
error: Content is protected !!
";