ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದಿನಿಂದಲೂ ತಮ್ಮ ಮೇಲಿನ ಆರೋಪಗಳು ಸಾಬೀತಾಗಬಹುದು ಎನ್ನುವ ಖಾತ್ರಿಯಿಂದ ತಮ್ಮ ವಿರುದ್ಧ ತನಿಖೆ ನಡೆಯಬಾರದು ಎಂದು ನಿರಂತರ ಪ್ರಯತ್ನಿಸುತ್ತಿರುವುದರ ಹಿನ್ನೆಲೆಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳು ಲೋಕಾಯುಕ್ತದ ಮೇಲೆ ಪ್ರಭಾವ ಬೀರಿರುವುದು ತನಿಖೆಯ ಹಾದಿಯನ್ನು ಗಮನಿಸಿದವರಿಗೆ ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯ ವಿಚಾರಣೆ ಅಂತಿಮ ಘಟ್ಟ ತಲುಪಿರುವುದರ ಹಿನ್ನೆಲೆಯಲ್ಲಿ ಸಂಪೂರ್ಣ ವಿಚಲಿತಲಾಗಿರುವ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ದೂರುದಾರ ಸ್ನೇಹಮಯಿ ಕೃಷ್ಣ ಅವರ ಬಾಯಿ ಮುಚ್ಚಿಸಲು ಅಧಿಕಾರಿಗಳ ಮೂಲಕ ಪೊಲೀಸ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಳ್ಳು ದೂರು ದಾಖಲಿಸಿಕೊಂಡು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸುವ ಪಿತೂರಿಗೆ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರು ಹೇಳಿಕೊಂಡಿರುವಂತೆ ತಮ್ಮ ಮೇಲೆ ಆಮಿಷ, ಒತ್ತಡ ಹೇರಲು ವಿಫಲರಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪೊಲೀಸ್ ದಂಡದಿಂದ ಬಾಯಿ ಮುಚ್ಚಿಸುವ ಅಡ್ಡದಾರಿ ಹಿಡಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೂಡಲೇ ಮುಖ್ಯಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೌರವಾನ್ವಿತ ರಾಜ್ಯಪಾಲರನ್ನು ಕರ್ನಾಟಕ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.