ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಠಿಯಾಗಿದ್ದು ಇದರ ಬಗ್ಗೆ ಕಾಳಜಿ ವಹಿಸಿದ್ದೇನೆ. ಸಂಬಂಧಿತ ಅಧಿಕಾರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಗಾ ವಹಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಾಧನಾ ಸಮಾವೇಶಕ್ಕಾಗಿ ಹೊಸಪೇಟೆಗೆ ತೆರಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಡಿಸಿಎಂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಸಂಭವಿಸಿರುವ ಅವಾಂತರದ ಬಗ್ಗೆ ಸಂಬಂಧಿತ ಅಧಿಕಾರಗಳ ಜೊತೆ ಸಂಪರ್ಕದಲ್ಲಿದ್ದೇನೆ. ನಿಕಟ ನಿಗಾ ವಹಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಸಮಸ್ಯೆ ಪರಿಹರಿಸಲು ನಿರಂತರ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ವಾರ್ ರೂಂ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯ್ಯಕ್ತಿಕವಾಗಿ ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಕಾಡುತ್ತಿರುವ ಮಳೆ ಅವಾಂತರ ಹೊಸದೇನಲ್ಲ. ಈ ಸಮಸ್ಯೆಗಳು ಬಹಳ ವರ್ಷಗಳಿಂದ ಎದುರಾಗುತ್ತಿದೆ. ಎಲ್ಲಾ ಸರ್ಕಾರಗಳು, ಆಡಳಿತದ ಅವಧಿಯಲ್ಲೂ ಮಳೆ ಅವಾಂತರ ಸಂಭವಿಸಿವೆ. ನಾವು ಪರಿಹರಿಸುವತ್ತ ಕೆಲಸ ಮಾಡುತ್ತಿದ್ದೇವೆ ಎಂಬುದು ಈಗಿನ ವ್ಯತ್ಯಾಸವಾಗಿದೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರನ್ನು ಕಾಡುತ್ತಿರುವ ಮಳೆ ಅವಾಂತರಕ್ಕೆ ತಾತ್ಕಾಲಿಕ ಪರಿಹಾರವಲ್ಲ, ಬದಲಿಗೆ ದೀರ್ಘ ಕಾಲೀನ ಪರಿಹಾರದತ್ತ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಡಿಸಿಎಂ ಅವರು ಹೇಳಿದ್ದಾರೆ.
ನಮ್ಮ ಬೆಂಗಳೂರಿಗರಿಗೆ ಹೇಳುವುದೇನೆಂದರೆ, ನಾನೂ ನಿಮ್ಮಲ್ಲಿ ಒಬ್ಬ. ನಾನು ನಿಮ್ಮ ಚಿಂತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಹತಾಶೆಯಲ್ಲಿ ನಾನು ಭಾಗೀದಾರನಾಗಿದ್ದೇನೆ. ನಾನು ನಿಮ್ಮ ಜೊತೆಗಿದ್ದೇನೆ. ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದೇನೆ ಎಂಬ ಭರವಸೆ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದ್ದಾರೆ.