ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ದೇವನಹಳ್ಳಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ನರಗುಂದ, ನವಲಗುಂದ ರೀತಿಯಲ್ಲಿ ಆಗಲು ರಾಜ್ಯ ಸರ್ಕಾರ ಆಸ್ಪದ ಕೊಡಬಾರದೆಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ಹೊರಟಿರುವ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ನಾಲ್ಕರಂದು ರೈತರು ನಡೆಸಿದ ಬೃಹತ್ ಚಳುವಳಿಯಲ್ಲಿ ಕಾನೂನು ತೊಡಕುಗಳಿವೆ. ಬಗೆಹರಿಸಿಕೊಳ್ಳಲು ಇನ್ನು ಹತ್ತು ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀವುಗಳು ಹೇಳಿದ್ದನ್ನೆಲ್ಲಾ ಮಾಡಬೇಕೆಂದೇನು ಇಲ್ಲವೆಂದು ಮಾತಿನ ವರಸೆ ಬದಲಾಯಿಸಿದ್ದಾರೆ.
ಮತ್ತೊಂದೆಡೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನಿಮ್ಮಿಂದ ವಶಪಡಿಸಿಕೊಳ್ಳುವ ಭೂಮಿಯನ್ನು ಹಿಂದಿರುಗಿಸಿದರೆ ಬಂಡವಾಳ ಹೂಡಲು ಯಾವ ಉದ್ಯಮಿಗಳು ಬರಲ್ಲ. ಆಗ ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗುತ್ತದೆಂಬ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಹಾಗೂ ಸಚಿವ ಎಂ.ಬಿ.ಪಾಟೀಲ್ ಇವರುಗಳು ಕೇಂದ್ರ ರಕ್ಷಣಾ ಮಂತ್ರಿ ಬಳಿ ಹೋಗಿ ಡಿಫೆನ್ಸ್ ಕಾರಿಡಾರ್ ಕೊಡಿ ಎಂದು ಕೇಳಿದ್ದಾರೆ. ರೈತ ನಾಯಕ ಅಹಿಂದ ಹೋರಾಟಗಾರ ಎಂದು ತನ್ನ ಭುಜವನ್ನು ತಾನೆ ತಟ್ಟಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ. ಕೈಗಾರಿಕೆಗೆ ಕೃಷಿ ಭೂಮಿಯೇ ಬೇಕೆಂಬ ಹಠ ಏಕೆ?
ಮೂವತ್ತು ವರ್ಷಗಳ ಹಿಂದೆ ಕೈಗಾರಿಕಾ ಅಭಿವೃದ್ದಿ ಮಂಡಳಿಯಿಂದ ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಚನ್ನರಾಯಪಟ್ಟಣದಲ್ಲಿರುವ ೬೦೦ ಕುಟುಂಬಗಳಲ್ಲಿ ದಲಿತರ ನಾಲ್ಕು ನೂರು ಕುಟುಂಬಗಳಿವೆ. ಎಲ್ಲರೂ ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸತ್ತಿದ್ದಾರೆ.
ಅದನ್ನೇ ಕಿತ್ತುಕೊಂಡರೆ ಅವರ ಗತಿಯೇನು. ಇದು ಮುಖ್ಯಮಂತ್ರಿಗೆ ಶೋಭೆಯಲ್ಲ. ಸರ್ಕಾರ ರಿಯಲ್ ಎಸ್ಟೇಟ್ ಬ್ರೋಕರ್‌ಗಳಂತೆ ವರ್ತಿಸುತ್ತಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಆಗ್ರಹಿಸಿದರು.
ಉತ್ತರ ಕರ್ನಾಟಕದಲ್ಲಿ ಸಾವಿರಾರು ಎಕರೆ ಭೂಮಿಯಿದೆ. ಅಲ್ಲಿ ಹೋಗಿ ವಶಪಡಿಸಿಕೊಳ್ಳಲಿ. ಚನ್ನರಾಯಪಟ್ಟಣದ ನಾಲ್ಕು ಹೋಬಳಿಗಳ ಜಮೀನುಗಳನ್ನು ಕಬ್ಜ ಮಾಡಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಟಿ.ಶಫಿವುಲ್ಲಾ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನೀಡಿದ ವಾಗ್ದಾನ ಯಾವುದೂ ಈಡೇರಿಲ್ಲ. ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ದೇವನಹಳ್ಳಿಯಲ್ಲಿ ನೂರಾರು ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಬಡವರ ಭೂಮಿಗೆ ಏಕೆ ಬಾಯಿ ತೆರೆದುಕೊಂಡಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಧನಂಜಯ ಹಂಪಯ್ಯನಮಾಳಿಗೆ, ಎಂ.ಬಿ.ತಿಪ್ಪೇಸ್ವಾಮಿ ಮಲ್ಲಾಪುರ, ನಿವೃತ್ತ ಪ್ರಾಚಾರ್ಯರಾದ ಶಿವಕುಮಾರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.