ಕನ್ನಡ ಸಾಹಿತಿಗಳ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ: ಡಾ. ಜಿ. ಪರಮೇಶ್ವರ್

News Desk

ಕನ್ನಡ ಸಾಹಿತಿಗಳ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ: ಡಾ. ಜಿ. ಪರಮೇಶ್ವರ್
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಹೆಸರಾಂತ ಸಾಹಿತಿಗಳ ವಸ್ತು ಸಂಗ್ರಹಾಲಯ ಹಾಗೂ ಕಲಾಮಂದಿರದ ನಿರ್ಮಾಣ ಮಾಡುವ ಚಿಂತನೆಯಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗಳು, ವಿಚಾರವಾದಿಗಳು, ಚಿಂತಕರು, ವಿಮರ್ಶಕರು, ವಿಶ್ಲೇಷಕರು ಒಂದೆಡೆ ಸೇರಿ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಸಾಹಿತ್ಯ ಕ್ಷೇತ್ರ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚಿಂತನೆ, ಚರ್ಚೆ, ವಿಮರ್ಶೆ, ಟೀಕೆ-ಟಿಪ್ಪಣಿಗಳು ನಡೆಯಬೇಕು.

ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆಗಳಾಗಬೇಕು ಎಂದು ತಿಳಿಸಿದರಲ್ಲದೆ ನಮ್ಮ ಕಾಲದಲ್ಲಿ ಶಾಲಾ-ಕಾಲೇಜು,

ವಿಶ್ವವಿದ್ಯಾನಿಲಯಗಳಿಂದ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಗಂಭೀರ ವಿಷಯಗಳ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿಯೂ ಚರ್ಚೆಗಳು ನಡೆಯದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಪಾಶ್ಚಿಮಾತ್ಯ ದೇಶದ ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ವಾರಾಂತ್ಯದಲ್ಲಿ ಯಾವುದಾದರೊಂದು ಒಂದು ವಿಷಯದ ಮೇಲೆ ವಿಷಯ ತಜ್ಞರಿಂದ ಚರ್ಚೆಗಳಾಗುತ್ತವೆ. ಚರ್ಚೆಯಲ್ಲಿ ಅವರು ವಿಚಾರಧಾರೆಗಳನ್ನು ಮಂಡಿಸುತ್ತಾರೆ. ಇಂತಹ ಚರ್ಚೆಗಳು ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮುಂದುವರೆಯಬೇಕೆಂದು ತಿಳಿಸಿದರು.
ಇತ್ತೀಚೆಗಷ್ಟೇ ದಸರಾ ಸಂದರ್ಭದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಹಲವಾರು ವಿಷಯ, ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ.

ಬರಗೂರು ರಾಮಚಂದ್ರಪ್ಪ ಅವರೂ ಸಹ ಈ ಕವಿಗೋಷ್ಠಿಯಲ್ಲಿ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ವಿಷಯಗಳನ್ನು ಮಂಡಿಸಿರುವುದು ಸ್ತುತ್ಯಾರ್ಹ. ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ-ನುಡಿ, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ವಿಚಾರ ಗೋಷ್ಠಿಗಳನ್ನು ಏರ್ಪಡಿಸಿರುವುದು ನಿಜವಾಗಿಯೂ ಅರ್ಥಪೂರ್ಣವಾಗಿದೆ ಎಂದರು.

ಕನ್ನಡಿಗರು ಶಾಂತಿ ಪ್ರಿಯರು, ಸಮಾಧಾನ ಚಿತ್ತರು. ಉತ್ತರ ಭಾರತದಲ್ಲಿ ಇಂತಹ ಗುಣಗಳು ಅಪರೂಪ. ರಾಜ್ಯದ ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಶೇ.೪೦ ಇಳಿದರೂ ತಾಳ್ಮೆಯಿಂದ ಇರುವ ನಮ್ಮ ಕನ್ನಡಿಗರೂ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಮ್ಮ ನೆಲಮೂಲ ಸಂಸ್ಕೃತಿ, ಇತಿಹಾಸ, ಭಾಷೆಯನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದರು.

ಕಾನೂನಿನ ಕೊರತೆ, ನಿಯಮಗಳ ಅನುಷ್ಠಾನದ ಕೊರತೆಯಿಂದ ಖಾಸಗಿ ಕಂಪನಿಗಳಲ್ಲಿ ನೌಕರಿ ಪಡೆಯುವಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳು ನೇಮಕ ಮಾಡಿಕೊಳ್ಳುವ ಸಾವಿರ ನೌಕರರಲ್ಲಿ ನೂರು ಹುದ್ದೆಗಳಿಗೆ ಕನ್ನಡಿಗರಿಗೆ ಅವಕಾಶ ನೀಡುವುದು ಬೇಸರದ ಸಂಗತಿ. ಜಿಲ್ಲೆಯ ವಸಂತ ನರಸಾಪುರದಲ್ಲಿರುವ ೧೫೦ ಕೈಗಾರಿಕೆಗಳಲ್ಲಿ ಸ್ಥಳೀಯರಿಗೂ ನೌಕರಿ ನೀಡಿಲ್ಲ.

ಕನ್ನಡೇತರರನನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಂತಹ ಸಮಸ್ಯೆಗಳ ಬಗ್ಗೆ ವಿಚಾರವಾದಿಗಳು ಚರ್ಚಿಸಿದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾಗೆಗಳಲ್ಲಿರುವ ಒಗ್ಗಟ್ಟು ಮನುಷ್ಯರಲ್ಲಿ ಕಾಣದಾಗಿದೆ. ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಚಿಂತಕರು, ವಿಮರ್ಶಕರು, ವಿಶ್ಲೇಷಕರಿಂದ ಚರ್ಚೆ, ಚಿಂತನೆಗಳು ನಡೆಯಬೇಕು. ಉತ್ತಮ ಸಾಮಾಜಿಕ ಸಂದೇಶಗಳನ್ನೊಳಗೊಂಡ ಪುಸ್ತಕಗಳು ಪ್ರಕಟವಾಗಬೇಕು ಎಂದು ತಿಳಿಸಿದರಲ್ಲದೆ ಕನ್ನಡ ಭಾಷೆಗೆ ೨೦೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಜ್ಯದಲ್ಲಿ ಕನ್ನಡವನ್ನು ಮಾತನಾಡಬೇಕೆಂಬ ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅಂಗಡಿ, ಹೋಟೆಲ್‌ಗಳಿಗೆ ಹೋದರೆ ಕನ್ನಡಿಗರು ಕಾಣಸಿಗುವುದೇ ಇಲ್ಲ. ಕನ್ನಡಿಗರಿಗೆ ಭಾಷೆಯ ಮೇಲೆ, ನಾಡಿನ ಮೇಲೆ ಪ್ರೀತಿ ಇರಬೇಕು.

ದಿನನಿತ್ಯದ ಸಮಾಜದಲ್ಲಿ ಭಾಷೆಯನ್ನು ಬೆಳೆಸದೇ ಹೋದರೆ ಮುಂದಿನ ದಿನಗಳಲ್ಲಿ ಕನ್ನಡಿಗರು ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರೆ ತಪ್ಪಾಗಲಾರದು. ಸಾಹಿತಿಗಳು, ಚಿಂತಕರು ರಾಜ್ಯ ಎದುರಿಸುತ್ತಿರುವ ನೀರಿನ ಸಮಸ್ಯೆ, ಕಾವೇರಿ ವಿವಾದಗಳಂತಹ ಹಲವಾರು ಜ್ವಲಂತ ಸಮಸ್ಯೆಗಳನ್ನು ಚರ್ಚೆಗಳ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಚಿಂತಕ ಹಾಗೂ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಹಿಂದಿ ಭಾಷೆಗೆ ದೊರೆಯುತ್ತಿರುವ ವಿಶೇಷ ಪ್ರಾಶಸ್ತ್ಯ ಇತರೆ ಭಾಷೆಗಳಿಗೆ ಸಿಗದಿರುವುದು ವಿಪರ್ಯಾಸ. ಹಿಂದಿ ಭಾಷೆ ರಾಷ್ಟ್ರ ಭಾಷೆಯಲ್ಲ. ಹಿಂದಿಯಂತೆ ಕನ್ನಡಕ್ಕೂ ಪ್ರಾಶಸ್ತ್ಯ ದೊರೆಯಬೇಕು. ಕನ್ನಡಕಷ್ಟೆ ಅಲ್ಲದೆ, ದೇಶದ ಇತರೆ ರಾಜ್ಯಗಳ ಭಾಷೆಗಳಿಗೂ ಪ್ರಾಶಸ್ತ್ಯ ದೊರೆಯಬೇಕೆಂದು ನಮ್ಮ ಆಗ್ರಹವಿದೆ. ರಾಷ್ಟ್ರದ ಎಲ್ಲಾ ರಾಜ್ಯಗಳ ಭಾಷೆಗಳು ಸಮಾನವೆನ್ನಲು ರಾಷ್ಟ್ರೀಯ ಭಾಷಾ ನೀತಿ ರಚನೆಯಾಗಬೇಕೆಂಬ ಹೋರಾಟ ನಮ್ಮದು ಎಂದು ತಿಳಿಸಿದರು.

ಅದೇ ರೀತಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಇದಕ್ಕಾಗಿ ರಾಷ್ಟ್ರೀಯ ಉದ್ಯೋಗ ನೀತಿ ರಚನೆಯಾಗಬೇಕೆಂಬ ಹಕ್ಕೊತ್ತಾಯ ನಮ್ಮದು. ಇಲ್ಲದೆ ಹೋದರೆ ಎಲ್ಲ ರಾಜ್ಯ ಭಾಷೆಗಳು ೨ನೇ ಹಾಗೂ ೩ನೇ ದರ್ಜೆಯಲ್ಲಿಯೇ ಉಳಿಯಬೇಕಾದ ದುಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಕ್ಕೆ ೨೦೦೮ರ ನವೆಂಬರ್ ೧ರಂದು ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೂ ಸಹ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಕರ್ನಾಟಕಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ತಮಿಳು ನಾಡಿನಲ್ಲಿ ಇಂತಹದೊಂದು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯಿಂದ ಅನುಮತಿ ಪಡೆದು ಕನ್ನಡದ ಪ್ರತ್ಯೇಕ ಶಾಸ್ತ್ರೀಯ ಭಾಷಾ ಸಂಸ್ಥೆ ಸ್ಥಾಪನೆಗೆ ಮುಂದಾಗಬೇಕೆಂದು ಗೃಹ ಸಚಿವರಲ್ಲಿ ಅವರು ಮನವಿ ಮಾಡಿದರಲ್ಲದೆ ಪ್ರತ್ಯೇಕ ಶಾಸ್ತ್ರೀಯ ಭಾಷಾ ಸಂಸ್ಥೆ ಸ್ಥಾಪನೆಯಿಂದ ರಾಜ್ಯ ಭಾಷೆಗಳು ಮತ್ತಷ್ಟು ಬಲಗೊಳ್ಳಲು ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿಬ್ಬೂರು ಎಲ್.ಮಂಜಣ್ಣ ಮತ್ತು ತಂಡದಿಂದ ಕನ್ನಡಪರ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.

ನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಕರ್ನಾಟಕದ ಏಕೀಕರಣ ಹೋರಾಟದ ಹಾದಿ ಕುರಿತು ತುಮಕೂರಿನ ಸಂಶೋಧಕ ಡಾ: ಡಿ.ಎನ್. ಯೋಗೀಶ್ವರಪ್ಪ, ವರ್ತಮಾನದ ಸವಾಲುಗಳು ಕುರಿತು ಲೇಖಕ ಹಾಗೂ ಚಿಂತಕ ಕೆ.ಪಿ.ನಟರಾಜು, ಸಿನಿಮಾ ಕ್ಷೇತ್ರಕ್ಕೆ ತುಮಕೂರು ಜಿಲ್ಲೆಯ ಕೊಡುಗೆ ಕುರಿತು ಸುಧಾ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಲೇಖಕ ಚ.ಹ.ರಘುನಾಥ್, ಸಾಹಿತ್ಯ ಕ್ಷೇತ್ರಕ್ಕೆ ತುಮಕೂರು ಜಿಲ್ಲೆಯ ಕೊಡುಗೆ ಕುರಿತು ಸಾಹಿತಿ ಬಾ.ಹ.ರಮಾಕುಮಾರಿ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಕುರಿತು ಡಾ. ರಾಜಪ್ಪ ದಳವಾಯಿ ಅವರು ವಿಚಾರ ಮಂಡನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ತಹಶೀಲ್ದಾರ್ ರಾಜೇಶ್ವರಿ, ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಡಾ: ಬಾಲಗುರುಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಪ್ರಸಿದ್ಧ ಸಾಹಿತಿ ಡಾ: ಕರೀಗೌಡ ಬೀಚನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";