ಎಂ.ಎಲ್.ಗಿರಿಧರ, ಹಿರಿಯೂರು.
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸುಧಾಕರ್ ಪರಿಹಾರ ಮಾಡಿಕೊಡುವವರೇ ಕಾದುನೋಡಬೇಕಾಗಿದೆ.
ತಾಲೂಕಿನ ದಿಂಡಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ಮುಗಿಯುವಂತೆ ಕಾಣುತ್ತಿಲ್ಲ. ಮಳೆಗಾಲ ಆರಂಭವಾಗಿದ್ದರೂ ಸಹ ಮಳೆ ಬರದೇ ಇರುವುದರಿಂದ ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್ ಗಳೆಲ್ಲ ನೆಲ ಕಚ್ಚುತ್ತಿವೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಎಲ್ಲಿ ಕೊರೆಸಿದರು ಎಷ್ಟೇ ಆಳಕ್ಕೆ ಕೊರೆಸಿದರು ಸಹ ಬರೀ ಧೂಳಿನ ದರ್ಶನವಾಗುತ್ತಿದೆಯೇ ಹೊರತು ಹನಿ ನೀರು ಹೊರ ಬರುತ್ತಿಲ್ಲ.
ಗ್ರಾಮ ಪಂಚಾಯ್ತಿ ಕಚೇರಿ ಇರುವ ದಿಂಡಾವರ ಗ್ರಾಮದಲ್ಲೇ ಜನರು ಕೊಡ ಹಿಡಿದು ಜಮೀನುಗಳಿಗೆ ಅಲೆಯುವಂತೆ ಆಗಿದೆ. ಮಳೆ ಮುಗಿಲು ಸೇರಿದ್ದು ಬೋರ್ ವೆಲ್ ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು ರೈತರು ಬರುವ ನೀರಲ್ಲೇ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದೀಗ ಜನರಿಗೆ ಕುಡಿಯುವ ನೀರಿಗೂ ಬರ ಬಂದಿದ್ದು ಸಂಬಂಧಪಟ್ಟವರಿಗೆ ಮನವಿ ಮಾಡಿ ಮಾಡಿ ಜನರೇ ಬೇಸತ್ತು ಹೋಗಿದ್ದಾರೆ. ದಿಂಡಾವರ ಗ್ರಾಮದಲ್ಲಿ ಸೋಮವಾರ ಹಬ್ಬವಿದ್ದು ಗ್ರಾಮದ ಜನರು ನೀರಿಗೆ ಪರದಾಡುವ ಸನ್ನಿವೇಶಗಳು ಎಲ್ಲೆಡೆಯೂ ಕಾಣುತ್ತಿದ್ದವು.
ಅವರಿವರ ಜಮೀನುಗಳಿಗೆ ಹೋಗಿ ನೀರು ತಂದು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು ಕಳೆದ ಕೆಲವು ದಿನಗಳ ಹಿಂದೆ ದಿಂಡಾವರ ಗ್ರಾಮವೂ ಸೇರಿದಂತೆ ಉಳಿದ ಕಡೆ ಕೊರೆಸಿದ ಬೋರ್ ಗಳಲ್ಲಿ ನೀರು ಬಂದಿಲ್ಲ. ಒಂದೇ ಒಂದು ಬೋರ್ ನಲ್ಲಿ ಒಂದಿಷ್ಟು ನೀರು ಕಂಡು ಇದೀಗ ಅದು ಸಹ ಜೀವ ಚೆಲ್ಲಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಅದಕ್ಕೆ ಸಾಗಿಸಲು ಸಹ ನೀರು ಬರುತ್ತಿಲ್ಲ.
ಹಬ್ಬಗಳಿಗೆ ಪಂಚಾಯ್ತಿಯಿಂದ ಟ್ಯಾoಕರ್ ಗಳ ಮೂಲಕ ನೀರು ಸಾಗಿಸುತ್ತಾ ಇದ್ದು ಹಬ್ಬ ಮುಗಿದ ಮೇಲೆ ಯಥಾ ಪ್ರಕಾರ ಆ ಭಾಗದ ಜನರ ನೀರಿನ ಸಂಕಟ ಹಾಗೆಯೇ ಇರಲಿದೆ.ಕಳೆದ 2022 ರಿಂದಲೂ ಈ ಭಾಗದಲ್ಲಿ ಕೆರೆ ಕಟ್ಟೆ ತುಂಬುವಂತಹ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ ಎನ್ನಲಾಗಿದ್ದು ಪ್ರತಿ ವರ್ಷವೂ ಈ ಪಂಚಾಯ್ತಿ ವ್ಯಾಪ್ತಿಯ ಜನರ ನೀರಿನ ಹಾಹಾಕಾರ ಕೇಳುತ್ತಲೇ ಇರುತ್ತದೆ. ಇದೀಗ ಗ್ರಾಮದಲ್ಲಿ ಹಬ್ಬವಿರುವುದರಿಂದ ಆ ಗ್ರಾಮದ ಜನರು ಹಬ್ಬಕ್ಕೆ ಜನರನ್ನು ಕರೆಯುವಾಗ ಊಟ ನಮ್ದು, ನೀರು ನಿಮ್ಮದು ಎಂಬ ಸ್ಲೋಗನ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ವೈರಲ್ ಮಾಡುತ್ತಿದ್ದಾರೆ.
ಅಷ್ಟರಮಟ್ಟಿಗೆ ನೀರಿನ ತೊಂದರೆ ಆ ಭಾಗದಲ್ಲಿದೆ. ಗ್ರಾಮ ಪಂಚಾಯ್ತಿಯವರು ಕುಡಿಯುವ ನೀರಿನ ತೊಂದರೆ ಬಗ್ಗೆ ತಾಲೂಕು ಪಂಚಾಯ್ತಿಗೆ ಪತ್ರ ಬರೆಯುವುದು, ಮನವಿ ಮಾಡುವುದು ನಡೆದೇ ಇದೆ. ಜನರ ಬೇಡಿಕೆ ಈಡೇರಿಕೆಗೆ ಅವರು ಬಂದು ಬೋರ್ ಕೊರೆಸಿದರು ಸಹ ನೀರು ಬರುತ್ತಿಲ್ಲ. ಮುನಿದ ಪ್ರಕೃತಿ ಮುಂದೆ ಜನರ ನೀರಿನ ಹಾಹಾಕಾರಕ್ಕೆ ನ್ಯಾಯವೇ ಸಿಗುತ್ತಿಲ್ಲ.ಈ ಬಗ್ಗೆ ಗ್ರಾಮದ ರೈತ ಮುಖಂಡ ಚಂದ್ರಗಿರಿ ಮಾತನಾಡಿ ಈಗಾಗಲೇ ಟ್ಯಾoಕರ್ ಮೂಲಕ ಕುಡಿಯುವ ನೀರು ಒದಗಿಸುತ್ತಿದ್ದಾರೆ.
ಹಬ್ಬವಿರುವುದರಿಂದ ಜನರು ಜಮೀನುಗಳಲ್ಲಿನ ಬೋರ್ ವೆಲ್ ಗಳಿಗೆ ಹೋಗಿ ನೀರು ತರುತ್ತಿದ್ದಾರೆ. ಮನೆ ಮನೆ ಗಂಗೆ ಯೋಜನೆಯ ಕೆಲಸಗಳು ನಡೆಯುತ್ತಿವೆ. ಈಗಾಗಲೇ ನಲ್ಲಿಗಳನ್ನು ಹಾಕಲಾಗಿದ್ದು ವಿವಿ ಸಾಗರದಿಂದ ನೀರು ಬರುವ ಮುಖ್ಯವಾದ ಪೈಪ್ ಲೈನ್ ನ ಕೆಲಸವೇ ಆಗಿಲ್ಲ. ನಮಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಬೋರ್ ವೆಲ್ ಗಳನ್ನು ಕೊರೆಸಿರುವ ಲೆಕ್ಕ ಕೊಡುತ್ತಾರೆ. ಆದರೆ ಅವುಗಳಲ್ಲಿ ನೀರಿನ ಪ್ರಮಾಣವೇ ಇಲ್ಲದಂತಾಗಿ ಒಂದೊಂದೇ ಬೋರ್ ವೆಲ್ ಗಳು ಕಣ್ಣು ಮುಚ್ಚುತ್ತಿವೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಹಸೇನ್ ಬಾಷ ಪ್ರತಿಕ್ರಿಯೆ ನೀಡಿ ಈಗಾಗಲೇ ಆ ಭಾಗದಲ್ಲಿ ಸುಮಾರು 25 ಕ್ಕೂ ಹೆಚ್ಚು ಬೋರ್ ವೆಲ್ ಗಳನ್ನು ಕೊರೆಸಲಾಗಿದೆ. ನೀರಿನ ಲಭ್ಯತೆ ಇಲ್ಲದೇ ಇರುವುದರಿಂದ ಬಹಳಷ್ಟು ಬೋರ್ ಗಳು ಫೇಲ್ ಆಗುತ್ತಿವೆ. ದಿಂಡಾವರ ಗ್ರಾಮದಲ್ಲಿ ಹಬ್ಬವಿದ್ದು ಅವರಿಗೆ ಎರಡು ಟ್ಯಾoಕರ್ ಮೂಲಕ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿಗೆ ಕೊರೆಸಿದ 5 ಬೋರ್ ವೆಲ್ ಗಳಲ್ಲೂ ನಿರೀಕ್ಷಿತ ಪ್ರಮಾಣದ ನೀರು ದೊರೆಯಲಿಲ್ಲ. ವಿವಿ ಸಾಗರದಿಂದ ಸಾಗಿಸುವ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ. ಮುಖ್ಯ ಪೈಪ್ ಲೈನ್ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಫಾರೆಸ್ಟ್ ಕ್ಲಿಯರೆನ್ಸ್ ಮುಂತಾದ ಕೆಲಸಗಳು ಚಾಲ್ತಿಯಲ್ಲಿದ್ದು ಇನ್ನೊಂದು ವರ್ಷದಲ್ಲಿ ಆ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ದಿಂಡಾವರ ಗ್ರಾಮದಲ್ಲಿ ಇದೇ ಜುಲೈ –14 ರಂದು ನಡೆಯುವ ಭೂತಪ್ಪನ ಜಾತ್ರೆ ಪ್ರಯುಕ್ತ ಗ್ರಾಮಸ್ಥರು “ಊಟ ನಮ್ದು!ನೀರು ನಿಮ್ಮದು!” ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವುದು ಜಗತ್ ಜಾಹಿರವಾಗಿದೆ.
ನೀರಿನ ತೀವ್ರ ಅಭಾವದ ನಡುವೆ ದಿಂಡಾವರ ಪಂಚಾಯತ್ ಪಿಡಿ ಓ ರವರ ಫೋನ್ ಸ್ವಿಚ್ ಆಫ್ ಆಗಿದೆ. ಸೆಕ್ರೆಟರಿ ಅವರನ್ನು ಕೇಳಿದರೂ ಸಹ ಅವರು ನಮಗೆ ನೀರು ಬಿಡಲು ಸ್ಪಂದಿಸುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಚಂದ್ರಗಿರಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಕೇಳಿದರು ಸಹ ಅವರು ತಾಲೂಕ್ ಪಂಚಾಯಿತಿಗೆ ಪತ್ರ ಬರೆದಿದ್ದೇವೆ ಎಂದು ಹೇಳುತ್ತಾರೆ.
ಹೊಸದಾಗಿ ಬಂದಿರುವ ತಾಲೂಕು ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಸಹ ಫೋನನ್ನು ತೆಗೆಯುತ್ತಿಲ್ಲ. ಹಿರಿಯೂರು ತಾಲೂಕಿನಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾವು ಯಾರನ್ನ ಕೇಳುವುದು,ನೀರು ಎನ್ನುವುದು ದಿಂಡಾವರ ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬ ಪ್ರಜೆಯ ಧ್ವನಿಯಾಗಿದೆ.
ನಮಗೆ ಕುಡಿಯಲು ನೀರು ಕೊಡಿ! ಊರ ಜಾತ್ರೆಗೆ ಬಂದ ನೆಂಟರಿಷ್ಟರ ಎದುರಿಗೆ ನಮ್ಮ ಮಾನವನ್ನ ಉಳಿಸಿ! ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಇದೇ ಪರಿಸ್ಥಿತಿ ಮುಂದುವರೆದರೆ ದಿಂಡಾವರದ ಯುವಕರಿಗೆ ಯಾರು ಹೆಣ್ಣುಕೊಟ್ಟಾರು?ಎನ್ನುವುದು ಮದುವೆಯಾಗದೆ ಉಳಿದ ಗಂಡು ಮಕ್ಕಳ ಕೊರಗಾಗಿದೆ ಎಂದು ಚಂದ್ರಗಿರಿ ಆತಂಕ ವ್ಯಕ್ತಪಡಿಸಿದ್ದಾರೆ.