ಬಯಲುಸೀಮೆ ಮಲೆನಾಡಾಗಿ ಬದಲಾಗುವ ಸಮಯ ಸಮೀಪ
ತನುಶ್ರೀ ಹೆಚ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅತಿ ಕಡಿಮೆ ಮಳೆ ಹಾಗು ಕುಗ್ಗುತ್ತಿರುವ ಅಂತರ್ಜಲ ಮಟ್ಟದಿಂದ ಸತತವಾಗಿ ನಿರಂತರ ಬರವನ್ನು ಎದುರಿಸುತ್ತಿರುವ ಹಾಗೂ ನೀರಾವರಿಗೆ ಯಾವುದೇ ಶಾಶ್ವತ ನೀರಿನ ಮೂಲ ಇಲ್ಲದಿರುವ ಜಿಲ್ಲೆಗಳ ಬೇಡಿಕೆ ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಮೂಲಗಳಿಂದ ದೊರಕಬಹುದಾದ ಪರ್ಯಾಯ ನೀರಿನ ಲಭ್ಯತೆಗಳ ಬಗ್ಗೆ ಅಧ್ಯಯನ ನಡೆಸಿ, ಒಂದು ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ವರದಿ ಸಲ್ಲಿಸಲು ಸರ್ಕಾರವು ಒಂದು ತಜ್ಞರ ಸಮಿತಿ ರಚಿಸಿ ತಜ್ಞರ ಸಮಿತಿ ನೀಡಿದ ಶಿಫಾರಸ್ಸು ಆಧರಿಸಿ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ಸರ್ಕಾರ ಅನುಮೋದಿಸಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ ಅಡಿ ಚಿತ್ರದುರ್ಗ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 367 ಕೆರೆಗಳಿಗೆ ನೀರು ಭರ್ತಿ ಮಾಡುವುದು ಸೇರಿದಂತೆ ವಾಣಿ ವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ಹಂಚಿಕೆ ಮಾಡಿ ಭರ್ತಿ ಮಾಡಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯವಿದ್ದು, ಇದು ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ವಾಣಿ ವಿಲಾಸ ಸಾಗರ ಜಲಾಶಯವನ್ನು ಮೈಸೂರು ಸಂಸ್ಥಾನದ ಅರಸರಾದ “ನಾಲ್ವಡಿ ಕೃಷ್ಣರಾಜ ಒಡೆಯರ್” ರವರ ತಾಯಿ “ಕೆಂಪ ನಂಜಮ್ಮಣಿ ವಾಣಿ ವಿಲಾಸ” ಇವರ ಹೆಸರಿನಲ್ಲಿ 1898 ರಿಂದ 1907 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಸಂಪೂರ್ಣ ಬರದನಾಡು ಆಗಿದ್ದು, ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿ ಅನುಷ್ಠಾನಗೊಂಡಿದೆ.
ವಿ.ವಿ.ಸಾಗರ ಜಲಾಶಯದ ವಿವರ:
ವಾಣಿ ವಿಲಾಸ ಸಾಗರದ ನೀರಿನ ಸಂಗ್ರಹಣ ಸಾಮರ್ಥ್ಯ 30.422 ಟಿ.ಎಂ.ಸಿ ಆಗಿದೆ. ಇದರಲ್ಲಿ 1.87 ಟಿಎಂಸಿ ಬಳಕೆಗೆ ಬಾರದ (Dead Storage) ಪ್ರಮಾಣವಾಗಿದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 28.552 ಟಿ.ಎಂ.ಸಿ (Live Storage) ಮಾತ್ರ. ವಿ.ವಿ.ಸಾಗರ ಜಲಾಶಯದ ಉದ್ದ 405.50ಮೀ ಹಾಗೂ ಎತ್ತರ 43.28 ಮೀ. ಇರುತ್ತದೆ (Above the lowest river bed level). ಜಲಾಶಯವು ಮೂರು ಮುಖ್ಯ ಕಾಲುವೆಗಳನ್ನು ಹೊಂದಿದೆ.
ಕಾಲುವೆಗಳ ವಿವರ:
1) ಮೇಲ್ಮಟ್ಟದ ಕಾಲುವೆ- 9.70 ಕಿಮೀ 531 ಹೆಕ್ಟೇರ್( ವಿವಿ ಸಾಗರ ಡ್ಯಾಂ ನಿಂದ ಕಾತ್ರೀಕೇನಹಳ್ಳಿ ಸಮೀಪದ ವರೆಗೆ).
2) ಬಲದಂಡೆ ಕಾಲುವೆ- 46.60 ಕಿಮೀ 5766 ಹೆಕ್ಟೇರ್.
3) ಎಡದಂಡೆ ಕಾಲುವೆ- 48.00 ಕಿಮೀ 5838 ಹೆಕ್ಟೇರ್.
ಬಲದಂಡೆ ವ್ಯಾಪ್ತಿಯ ಉಪನಾಲೆಗೆ ಹೂವಿನಹೊಳೆ, ಸಮುದ್ರಹಳ್ಳಿ, ಕುಂದಲಗುರ ಮತ್ತು ಟಿ.ನಾಗೇನಹಳ್ಳಿ ಸೇರಿಲಿವೆ. ಎಡದಂಡೆ ಉಪನಾಲೆಗೆ ಬಿದರಕೆರೆ ಮತ್ತು ಜಡೆಗೊಂಡನಹಳ್ಳಿ ಸೇರಲಿವೆ.
ಕೃಷ್ಣಾ ಕಣಿವೆ:
ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಾಣಿ ವಿಲಾಸ ಸಾಗರ ಜಲಾಶಯವು ಕೃಷ್ಣಾ ಕಣಿವೆ(K-9 Series) ವ್ಯಾಪ್ತಿಯಡಿ ಬರುತ್ತಿದೆ. ಹಿರಿಯೂರು ತಾಲೂಕಿನ 42 ಗ್ರಾಮಗಳ ಒಟ್ಟು 12135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಇದರಲ್ಲಿ 5557.00 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆ ಆಗಿರುವ ನೀರು:
ಜಲಾಶಯದ ಸಂಗ್ರಹಣೆಯಲ್ಲಿ ಮೂಲ ಬದ್ಧತೆಯನುಸಾರ ಹಂಚಿಕೆಯಾಗಿ ಬಳಸಲಾಗುತ್ತಿರುವ ನೀರಿನ ಪ್ರಮಾಣದ ವಿವರಗಳ ಮಾಹಿತಿ ಇಂತಿವೆ.
ಮೂಲ ಅನುಮೋದಿತ ಮಾಸ್ಟರ್ಪ್ಲಾನ್(Master Plan) ನಂತೆ ವಾಣಿ ವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 5.25 ಟಿಎಂಸಿ ಆಗಿದೆ. ವಾಣಿ ವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರಿಗಾಗಿ 2.331 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿದೆ. ಮುಂದುವರೆದು, ಕೈಗಾರಿಕೆ ಉದ್ದೇಶಕ್ಕಾಗಿ ವಿಎಸ್ಎಲ್ ಸ್ಟೀಲ್ ಲಿಮಿಟೆಡ್‌ರವರಿಗೆ 0.03753 ಟಿಎಂಸಿ ನೀರನ್ನು ಬಳಸಲು ಅನುಮತಿಸಿ ಹಂಚಿಕೆ ಮಾಡಲಾಗಿದೆ.
ಜಲಾಶಯದ ಪ್ರಸ್ತುತ ಸ್ಥಿತಿ:
1907ರಲ್ಲಿ ವಿ.ವಿ ಸಾಗರ ಜಲಾಶಯ ನಿರ್ಮಿಸಿದ ನಂತರ 1933ರಲ್ಲಿ ಮೊದಲ ಬಾರಿಗೆ ಗರಿಷ್ಟ ಮಟ್ಟ 130 ಅಡಿ ತಲುಪಿ 30 ಟಿಎಂಸಿ ನೀರು ಸಂಗ್ರಹವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 22 ಟಿಎಂಸಿ ನೀರು 2000ನೇ ಸಾಲಿನಲ್ಲಿ ಸಂಗ್ರಹವಾಗಿರುವ ದಾಖಲೆಯಾಗಿದೆ. ಉಳಿದಂತೆ ಕಳೆದ 10 ವರ್ಷಗಳಲ್ಲಿ (2019-20ರ ಹಿಂದಿನ) ಮಳೆಯ ಕೊರತೆಯಿಂದ ಜಲಾಶಯಕ್ಕೆ ಗಣನೀಯವಾಗಿ ಒಳಹರಿವು ಕ್ಷೀಣಿಸಿತ್ತು.
ವಾಣಿವಿಲಾಸ ಸಾಗರ ಜಲಾಶಯದ 12135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ 5.25 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದು, ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ 2 ಟಿಎಂಸಿ ನೀರಿನ ಹಂಚಿಕೆಯಾಗಿದೆ. 2019-20ನೇ ಸಾಲಿನಲ್ಲಿ 3.44 ಟಿಎಂಸಿ, 2020-21ನೇ ಸಾಲಿನಲ್ಲಿ 6.61 ಟಿಎಂಸಿ ಹಾಗೂ 2021-22ನೇ ಸಾಲಿನಲ್ಲಿ 6.82 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲಾಗಿತ್ತು. ಹಾಗಾಗಿ 89 ವರ್ಷಗಳ ನಂತರ 2022ನೇ ಸಾಲಿನಲ್ಲಿ 2ನೇ ಬಾರಿಗೆ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾದ ಇತಿಹಾಸ ಹೊಂದಿದೆ. 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದರಿಂದ, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿ ದಿನಾಂಕ:02.09.2022 ರಂದು 89 ವರ್ಷಗಳ ನಂತರ ಜಲಾಶಯದ ಗರಿಷ್ಟ ಮಟ್ಟ 130 ಅಡಿ ತಲುಪಿ ಕೋಡಿಯ ಮುಖಾಂತರ ಹೆಚ್ಚುವರಿ ನೀರು ವೇದಾವತಿ ನದಿ ಪಾತ್ರಕ್ಕೆ ಹರಿದಿತ್ತು. ದಿನಾಂಕ:08.09.2022 ರಂದು ಈ ಸಾಲಿನ ಗರಿಷ್ಟ ಮಟ್ಟ 135 ಅಡಿ ತಲುಪಿರುತ್ತು. ಡ್ಯಾಂ ಭರ್ತಿಯಾಗಿ ಕೋಡಿ ಹರಿದ ದಿನಾಂಕ:02.09.2022 ರಿಂದ ಸತತ ನವೆಂಬರ್ ಅಂತ್ಯದವರೆ ಕೋಡಿಯ ಮುಖಾಂತರ ಹೆಚ್ಚುವರಿ ನೀರು ಹರಿದು ಸುಮಾರು 32.129 ಟಿಎಂಸಿ ಯಷ್ಟು ನೀರು ವೇದಾವತಿ ನದಿ ಪಾತ್ರ ಸೇರಿದ ದಾಖಲೆ ಇದೆ.
ಕಾಲುವೆಗಳ ನಿರ್ಮಾಣ:
ವಾಣಿ ವಿಲಾಸ ಸಾಗರ ಡ್ಯಾಂನ ಕಾಲುವೆಗಳನ್ನು ನಿರ್ಮಾಣ ಮಾಡಿ ಸುಮಾರು 118 ವರ್ಷಗಳು ಕಳೆದಿದ್ದು, ಸದರಿ ನಾಲೆಗಳು ಗೆರೆಯಿಲ್ಲ(unlined) ಕಾಲುವೆಗಳಾಗಿವೆ. ಅಂದಿನ ಅವಧಿಯಲ್ಲಿ ನಿರ್ಮಾಣ ಮಾಡಿರುವ ನಾಲೆಗಳು ಮತ್ತು ನಾಲೆಗಳಿಗೆ ಸಂಬoಧಿಸಿದ ರಚನೆ(Structures) ಗಳು ಶಿಥಿಲಗೊಂಡಿವೆ.
ವಾಣಿ ವಿಲಾಸ ಸಾಗರ ನಾಲೆಗಳು ಮತ್ತು ನಾಲೆಗಳಿಗೆ ಸಂಬoಧಿಸಿದ ರಚನೆಗಳ(Structures) ಆಧುನೀಕರಣ ಕಾಮಗಾರಿಗಳಿಗೆ ಒಟ್ಟು 261.70 ಕೋಟಿ ಹಾಗೂ ಅಚ್ಚುಕಟ್ಟು ಪ್ರದೇಶದ ಹನಿ ನೀರಾವರಿ ಅಳವಡಿಸುವ ಕಾಮಗಾರಿಗಳಿಗೆ 470.90 ಕೋಟಿ ಒಟ್ಟಾರೆ 732.60 ಕೋಟಿಗಳ ಪ್ರಸ್ತಾವನೆಯನ್ನು SIMP(Support for Irrigation Modernisation Program) ಯೋಜನೆಯಡಿಯಲ್ಲಿ ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆರ್ಥಿಕ ಇಲಾಖೆಯು Asian Development Bank ನ ನೆರವಿನೊಂದಿಗೆ ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ಆಧುನೀಕರಣಗೊಳಿಸಲು ಅನುಮತಿಸಿದ್ದು ಈಗ ಟೆಂಡರ್ ಹಂತದಲ್ಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದೆ.
1500 ಕೋಟಿ ಅಣೆಕಟ್ಟುಗಳ ಪುನಃಶ್ಚೇತನ:
ಸರ್ಕಾರದ ದಿನಾಂಕ: 06.07.2021 ರ ಆದೇಶದಲ್ಲಿ ವಿಶ್ವ ಬ್ಯಾಂಕ್ ನೆರವಿನ ಅಣೆಕಟ್ಟುಗಳ ಪುನಃಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ (ಡ್ರಿಪ್) ಹಂತ-2 ಮತ್ತು ಹಂತ-3 ರ ಅಡಿಯಲ್ಲಿ ಜಲಸಂಪನ್ಮೂಲ ಇಲಾಖೆಯ 58 ಅಣೆಕಟ್ಟುಗಳ ದೀರ್ಘಕಾಲೀನ ಸುರಕ್ಷತೆ ಖಚಿತಪಡಿಸಿಕೊಳ್ಳಲು 1500 ಕೋಟಿ ಅಂದಾಜು ಮೊತ್ತದಲ್ಲಿ ಅಂದರೆ ವಿಶ್ವ ಬ್ಯಾಂಕ್ ಸಾಲದ ನೆರವು 1050.00 ಕೋಟಿ (70%) ಮತ್ತು ರಾಜ್ಯದ ಪಾಲು 450 ಕೋಟಿ (30%) ಬಜೆಟ್ ಬೆಂಬಲದೊoದಿಗೆ ಯೋಜನೆ ಅನುಷ್ಠಾನ ಮಾಡಲು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಇದರಲ್ಲಿ ವಾಣಿವಿಲಾಸ ಸಾಗರ ಜಲಾಶಯಕ್ಕೆ 2 ಕೋಟಿ ಮೊತ್ತಕ್ಕೆ ಅನುಮೋದನೆ ದೊರೆತಿದೆ. ವಾಣಿ ವಿಲಾಸ ಸಾಗರ ಜಲಾಶಯದ 19 ಕೋಟಿ ಮೊತ್ತದ PST ಕುರಿತು ಕೆಲವು ಅಂಶಗಳಿಗೆ ಪಾಲನಾ ವರದಿ ಸಲ್ಲಿಸುವಂತೆ CPMU, CWC ಸೂಚಿಸಿದೆ. ಅದರನ್ವಯ ವಿವರಿಸಲಾದ ಅಂಶಗಳಿಗೆ ಪಾಲನಾ ವರದಿಯೊಂದಿಗೆ ಪರಿಷ್ಕೃತ PST ಯನ್ನು ತಯಾರಿಸಿ ಸಲ್ಲಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ:
ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿಎಂಸಿ ನೀರಿನ ಬಳಕೆಯೊಂದಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮತ್ತು ಇದೇ ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ. 50 ರಷ್ಟನ್ನು ತುಂಬಿಸಲು ಉದ್ದೇಶಿಸಲಾಗಿದೆ.
ಸದರಿ ಯೋಜನೆಗೆ 21473.67 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.
ಮೊದಲನೇ ಹಂತ:
ಮೊದಲನೇ ಹಂತದಲ್ಲಿ ಮೂರು ಭಾಗಗಳಾಗಿ ವಿಂಗಡಿಸಿ ಪ್ಯಾಕೇಜ್ ನೀಡಲಾಗಿದೆ.
ಪ್ಯಾಕೇಜ್-1:ತುಂಗಾ ನದಿಯಿಂದ17.40 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವ, ಕಾಮಗಾರಿ ಪ್ರಗತಿಯಲ್ಲಿದೆ.
ಪ್ಯಾಕೇಜ್-2: ಭದ್ರಾ ಜಲಾಶಯದಿಂದ 29.90 ಟಿಎಂಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ.
ಪ್ಯಾಕೇಜ್-3: ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ.
ಎರಡನೇ ಹಂತ:
ಎರಡನೇ ಹಂತದ ಕಾಮಗಾರಿಗಳಲ್ಲಿ ಏತ ನೀರಾವರಿ, ಚಿತ್ರದುರ್ಗ, ತುಮಕೂರು ಕಾಲುವೆಗಳ ನಿರ್ಮಾಣ ಸೇರಿ ಮತ್ತಿತರ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.
ತರೀಕೆರೆ ಏತ ನೀರಾವರಿ:
ತರೀಕೆರೆ ತಾಲ್ಲೂಕಿನ 20,150 ಹೇಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಮೂಲಕ ನೀರನ್ನು ಒದಗಿಸುವುದು ಹಾಗೂ 79 ಕೆರೆಗಳನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 02 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ಚಿತ್ರದುರ್ಗ ಶಾಖಾ ಕಾಲುವೆ:
134.597 ಕಿ.ಮೀ ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 1,07,265 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 157 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ತುಮಕೂರು ಶಾಖಾ ಕಾಲುವೆ:
159.684 ಕಿ.ಮೀ ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 84,900 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 131 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 09 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ.
ಹನಿ ನೀರಾವರಿ:
ಚಿತ್ರದುರ್ಗ ಶಾಖಾ ಕಾಲುವೆಯ 40749 ಹೆಕ್ಟೇರ್ ಪ್ರದೇಶಕ್ಕೆ, ತುಮಕೂರು ಶಾಖಾ ಕಾಲುವೆಯಡಿ 27590 ಹೆಕ್ಟೇರ್ ಪ್ರದೇಶಕ್ಕೆ ಮತ್ತು ಜಗಳೂರು ಶಾಖಾ ಕಾಲುವೆಯಡಿ 24123 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರವಾರಿ ಸೌಲಭ್ಯ ಕಲ್ಪಿಸುವ ಮತ್ತು ಕೆರೆ ತುಂಬಿಸುವ ಕಾಮಗಾರಿಗಳನ್ನು 07 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೆರೆ ತುಂಬಿಸುವ ಕಾಮಗಾರಿಗಳು:
ಚಿತ್ರದುರ್ಗ ಶಾಖಾ ಕಾಲುವೆಯಿಂದ ಕವಲೊಡೆಯುವ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ತುಮಕೂರು ಶಾಖಾ ಕಾಲುವೆಯಿಂದ ಕವಲೊಡೆಯುವ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಫಿಡರ್ ಕಾಮಗಾರಿಗಳನ್ನು 09 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ಕಡೂರು ಕೆರೆ ತುಂಬಿಸುವ ಹೆಬ್ಬೆಹಳ್ಳ ತಿರುವು ಯೋಜನೆ:
ಭದ್ರಾ ಮೇಲ್ದಂಡೆ ಯೋಜನೆ ಜೊತೆ ಜೊತೆಯಲ್ಲೇ ಚಿಕ್ಕಮಗಳೂರು ಜಿಲ್ಲೆ ಕಡೂರು ಕೆರೆ ತುಂಬಿಸುವ ಪ್ರತ್ಯೇಕ ಯೋಜನೆ ಕೂಡ ಅನುಷ್ಠಾನಗೊಳ್ಳುತ್ತಿದ್ದು ಈ ಭಾಗದ ಕೆರೆಗಳು ಭರ್ತಿಯಾದ ನಂತರ ವೇದಾವತಿ ನದಿ ಮೂಲಕ ಈ ನೀರು ಸಹ ವಾಣಿ ವಿಲಾಸ ಸಾಗರ ಜಲಾಶಯ ಸೇರುವುದರಿಂದ ಭವಿಷ್ಯದಲ್ಲಿ ವಿವಿ ಸಾಗರಕ್ಕೆ ನೀರಿನ ಕೊರತೆ ಕಾಡುವುದಿಲ್ಲ. ಸದಾ ತುಂಬಿ ತುಳುಕುವ ಡ್ಯಾಂ ನೋಡಬಹುದಾಗಿದೆ.
ಕೆರೆ ತುಂಬಿಸುವ ಯೋಜನೆ:
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳಲ್ಲಿನ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಟ್ಟು 197 ಕೆರೆಗಳಿಗೆ ಹೆಬ್ಬೆಹಳ್ಳ ತಿರುವು ಯೋಜನೆಗೆ ಹಂಚಿಕೆಯಾದ 1.45 ಟಿಎಂಸಿ ನೀರಿನ ಬಳಕೆಯೊಂದಿಗೆ ಭದ್ರಾ ಉಪ ಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ ನೀರನ್ನು ಎತ್ತಿ ತುಂಬಿಸುವ 1281.80 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ದಿನಾಂಕ:24.11.2020 ರಲ್ಲಿ ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಸದರಿ ಯೋಜನೆಯ ಕಾಮಗಾರಿಗಳನ್ನು 4 ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲನೇಯ ಹಂತದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಎರಡನೇಯ ಹಂತದ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಮೂರನೇಯ ಹಾಗೂ ನಾಲ್ಕನೇಯ ಹಂತದ ಕಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇಲಾಖೆಯ ಅನುಮತಿ ದೊರಕಿಸಿಕೊಡಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಗಾಯತ್ರಿ ಜಲಾಶಯ ಯೋಜನೆ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಗಾಯತ್ರಿ ಜಲಾಶಯವನ್ನು 1963ರಲ್ಲಿ ನಿರ್ಮಿಸಲಾಗಿದೆ. ಗಾಯತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 0.975 ಟಿಎಂಸಿ ಗಳಾಗಿದೆ. ಇದರಲ್ಲಿ 0.337 ಟಿ.ಎಂ.ಸಿ ಬಳಕೆಗೆ ಬಾರದ ಪ್ರಮಾಣವಾಗಿದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 0.638 ಟಿಎಂಸಿ ಇದೆ.
ಈ ಜಲಾಶಯದ ಸಂಗ್ರಹಣೆಯಲ್ಲಿ ಮೂಲ ಬದ್ಧತೆಯನುಸಾರ ಹಂಚಿಕೆ ಮಾಡಿ ಬಳಸಲಾಗುತ್ತಿರುವ ನೀರಿನ ಪ್ರಮಾಣದ ವಿವರಗಳು ಇಂತಿವೆ.
ಮೂಲ ಅನುಮೋದಿತ ಮಾಸ್ಟರ್ ಪ್ಲಾನ್(Master Plan) ನಂತೆ ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 0.45 ಟಿಎಂಸಿ ಆಗಿದೆ.
ಗಾಯತ್ರಿ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಮತ್ತು 37 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 0.028 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿದೆ.
ಒಟ್ಟಾರಿ ಭದ್ರಾ, ಎತ್ತಿನಹೊಳೆ ಯೋಜನೆಗಳು ಸೇರಿ ತರೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳಲ್ಲಿನ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಒಟ್ಟು 197 ಕೆರೆಗಳಿಗೆ ಹೆಬ್ಬೆಹಳ್ಳ ತಿರುವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಬರ ಪೀಡಿತ ಬಯಲು ಸೀಮೆ ಚಿತ್ರದುರ್ಗ, ತುಮಕೂರು, ಜಗಳೂರು, ಕಡೂರು, ಬಿರೂರು, ಅಜ್ಜಂಪುರ, ತರೀಕೆರೆ ಭಾಗಗಳು ಮಲೆನಾಡಿನ ರೂಪ ಪಡೆಯಲಿವೆ. ಇದಕ್ಕಾಗಿ ಇನ್ನೂ ಹತ್ತು ವರ್ಷ ಕಾಯಬೇಕಾಗಿದೆ.
“ಇಡೀ ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿನ ಕೆರೆಗಳನ್ನು ಭರ್ತಿ ಮಾಡುವ ಉದ್ದೇಶ ಹೊಂದಲಾಗಿದೆ”.
ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯೂರು.
“ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮೂಲಕ 740 ಕೋಟಿ ರೂ. ವೆಚ್ಚದಲ್ಲಿ ವಾಣಿವಿಲಾಸ ಸಾಗರ ಜಲಾಶಯ, ನಾಲೆಗಳ ಆಧುನೀಕರಣ ಮಾಡಿ, ಹನಿ ನೀರಾವರಿ ಪ್ರಸ್ತುತ 29 ಸಾವಿರ ಎಕರೆನಿಂದ 45 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಏರಿಕೆಯಾಗಲಿದೆ. ಇದಕ್ಕೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಶ್ರಮಿಸುತ್ತಿದ್ದಾರೆ”.
ಚಂದ್ರಪ್ಪ, ಕಾರ್ಯಪಾಲಕ ಅಭಿಯಂತರರು, ವಿವಿಎಸ್ ವಿಭಾಗ.
“ವಾಣಿ ವಿಲಾಸ ಸಾಗರ ಜಲಾಶಯ 3ನೇ ಬಾರಿಗೆ ಭರ್ತಿ ಆಗಿದೆ. ಭದ್ರಾದಿಂದ ವಿವಿ ಸಾಗರಕ್ಕೆ ನೀರು ಲಿಫ್ಟ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ಅಡ್ಡಿಗಳು ಎದುರಾದವು. ಸೇತುವೆ ಕುಸಿತ, ಬಾಕಿ ವಿದ್ಯುತ್ ಬಿಲ್ ಸಮಸ್ಯೆ, ಆ ಭಾಗದ ರೈತರ ಸಮಸ್ಯೆ ಹೋಗಲಾಡಿಸಿದ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಸತತ ಪರಿಶ್ರಮದಿಂದಾಗಿ ವಿವಿ ಸಾಗರ ಡ್ಯಾಂ ಇತಿಹಾಸದಲ್ಲೇ 3ನೇ ಬಾರಿಗೆ ಡ್ಯಾಂ ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಇದು ಕೇವಲ ಕ್ಷೇತ್ರದ ಜನರಿಗಷ್ಟೇ ಅಲ್ಲ ಇಡೀ ಜಿಲ್ಲೆಯ ಜನರಿಗೆ, ರೈತಾಪಿ ವರ್ಗಕ್ಕೆ ಸಂತಸ, ಸಂಭ್ರಮದ ಕ್ಷಣಗಳು”.
ಅಮೃತೇಶ್ವರಸ್ವಾಮಿ, ಕೆಪಿಸಿಸಿ ಸದಸ್ಯರು, ಹಿರಿಯೂರು.
“ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು” ಜನವರಿ-23 ರಂದು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಹೊಣೆಗಾರಿಕೆ ವಹಿಸಿ ಬದ್ಧತೆಯಿಂದ ಕೆಲಸ ಮಾಡಿದ್ದರಿಂದಾಗಿ ಬೇಸಿಗೆ ಸಂದರ್ಭದಲ್ಲೂ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ”.
ಖಾದಿ ರಮೇಶ್, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಹಿರಿಯೂರು.
“3ನೇ ಬಾರಿಗೆ ಡ್ಯಾಂ ಭರ್ತಿಯಾಗಿರುವುದರ ಹಿಂದೆ ಕ್ಷೇತ್ರದ ಶಾಸಕ ಡಿ.ಸುಧಾಕರ್ ಅವರ ಪರಿಶ್ರಮವಿದೆ. ರೈತರು ಮತ್ತು ಜಿಲ್ಲೆಯೇ ಜನರಿಗೆ ಐತಿಹಾಸಿಕ ಕ್ಷಣಗಳು. ಬಯಲು ಸೀಮೆ ರೈತರ ಜೀವನಾಡಿ ವಿವಿ ಸಾಗರ. ಈ ಭಾಗದ ರೈತರು, ಜಾನುವಾರುಗಳ ಸಂಕಷ್ಟ ಅರಿತು ಮೈಸೂರು ಮಹಾರಾಜರು ವಾಣಿ ವಿಲಾಸ ಸಾಗರ ಡ್ಯಾಂ ನಿರ್ಮಾಣ ಮಾಡಿ 118 ವರ್ಷಗಳು ಪೂರ್ಣಗೊಂಡಿದೆ. ಆದರೆ 1933ರಲ್ಲಿ ಒಮ್ಮೆ, 2022ರಲ್ಲಿ 2ನೇ ಬಾರಿಗೆ ಈಗ ಅಂದರೆ 2025ರ ಜನವರಿಯಲ್ಲಿ 3ನೇ ಬಾರಿಗೆ ಡ್ಯಾಂ ಭರ್ತಿಯಾಗಿ ಕೋಡಿ ಹರಿದಿದ್ದು ನೀರು ಪೋಲಾಗದಿರುವ ರೈತರು ಹೆಚ್ಚಿನ ಗಮನ ನೀಡಬೇಕಿದೆ”.
ಚಿಗಳಿಕಟ್ಟೆ ಕಾಂತರಾಜ್, ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ, ಹಿರಿಯೂರು.