ಚಂದ್ರವಳ್ಳಿ ನ್ಯೂಸ್, ಶೃಂಗೇರಿ:
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರೈತರಿಗೆ ಒಂದು ಚೀಲ ರಸಗೊಬ್ಬರ ನೀಡಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರಂದೂರಿನ ಎಂ.ಎಸ್. ದ್ಯಾವೇಗೌಡ ಮೆಮೋರಿಯಲ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಡಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತ ಬಂಧುಗಳ ಪ್ರೀತಿಗೆ ಸದಾ ಚಿರಋಣಿ ಎಂದು ನಿಖಿಲ್ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷವನ್ನು ಶೃಂಗೇರಿ ಮತಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ 9964002028 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಲು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಗ್ಯಾರಂಟಿ ಸರ್ಕಾರಕ್ಕೆ ರಾಜ್ಯದ ರೈತರಿಗೆ ಒಂದು ಚೀಲ ಗೊಬ್ಬರವನ್ನು ಕೊಡಲು ಆಗುತ್ತಿಲ್ಲ. ರಾಜ್ಯದ ಕೃಷಿ ಮಂತ್ರಿ ಕುಂಭಕರ್ಣನ ನಿದ್ರೆಗೆ ಜಾರಿದ್ದಾರೆ, ಅರಣ್ಯ ಸಚಿವರ ಬೇಜವಾಬ್ದಾರಿ ಹೇಳಿಕೆ , ಸರ್ಕಾರದ ವೈಫಲ್ಯ, ಶೃಂಗೇರಿಯ ಭಾಗದಲ್ಲಿ ಕಾಡಾನೆ ದಾಳಿ,
ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಕಾರ್ಯಕರ್ತ ಬಂಧುಗಳಿಗೆ ತಿಳಿಸಿ, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸನ್ನದ್ಧರಾಗೋಣ. ಈ ಮೂಲಕ 2028 ರ ಚುನಾವಣೆಗೆ ಮುನ್ನುಡಿ ಬರೆಯೋಣ ಎಂದು ನಿಖಿಲ್ ತಿಳಿಸಿದರು.
ಇದೇ ಸಂದರ್ಭರದಲ್ಲಿ ನಿಖಿಲ್ ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಜನರೊಂದಿಗೆಜನತಾದಳ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ವೇಳೆ ಪಕ್ಷದ ಮುಖಂಡರುಗಳ ಮನೆಗಳಿಗೆ ಭೇಟಿ
ಹಾಗೂ ಕಾಡಾನೆ ದಾಳಿಗೆ ಸಂಬಂಧಿಸಿದಂತೆ ರೈತ ಸಂಘಟನೆ ಹಾಗೂ ಸ್ಥಳೀಯರ ಪ್ರತಿಭಟನೆಯಲ್ಲಿ ಭಾಗವಹಿಸಿ ಆತ್ಮಸ್ಥೈರ್ಯ ತುಂಬಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ನೋವಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ ಎಂದು ಅವರು ಭಾವುಕರಾದರು.
ಈ ಸಂದರ್ಭದಲ್ಲಿ ಸಕಲೇಶಪುರದ ಮಾಜಿ ಶಾಸಕ ಹೆಚ್.ಕೆ ಕುಮಾರಸ್ವಾಮಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಸುಧಾಕರ್ ಶೆಟ್ಟಿ, ಕೋರ್ ಕಮಿಟಿ ಸದಸ್ಯರಾದ ಹೆಚ್.ವಿ. ವೆಂಕಟೇಶ್, ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್, ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ,

ಪ್ರಧಾನ ಕಾರ್ಯದರ್ಶಿ ಕನ್ಯಾಕುಮಾರಿ, ವಕ್ತಾರೆ ಪೂರ್ಣಿಮಾ, ಮುಖಂಡರಾದ ದಿವಾಕರ್ ಭಟ್, ರಾಮಸ್ವಾಮಿ ಖಗ್ಗ, ಮಂಜುನಾಥ್, ಕುಸಮಾ, ವಾಸಪ್ಪ, ಉದಯ್, ಅನಿಲ್ ನಾರ್ವೆ, ಸುರೇಶ್, ದೀಪಕ್ ಮರಿಗೌಡ, ಜಾಯಣ್ಣ, ಭರತ್, ಪುಷ್ಪಲತಾ, ಕಳಸಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

