ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಾದ್ಯಂತ ಏಕಕಾಲಕ್ಕೆ ಗುರುವಾರ ಶಾಲೆಗಳು ಆರಂಭವಾಗಿದ್ದು, ಮೊದಲ ದಿನವೇ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಹೊಸ ಹುರುಪಿನೊಂದಿಗೆ ತರಗತಿಗೆ ಹಾಜರಾದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳಲ್ಲಿ ತಳಿರು ತೋರಣ ಕಟ್ಟುವ ಮೂಲಕ ಶಿಕ್ಷಕರು ಮಕ್ಕಳನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಎತ್ತಿನಗಾಡಿಯಲ್ಲಿ ಮೆರವಣಿಗೆ, ಗುಲಾಬಿ ಹೂ, ಸಮವಸ್ತ್ರ ವಿತರಣೆ, ಪುಠ್ಯಪುಸ್ತಕ ವಿತರಣೆ ಸೇರಿದಂತೆ ಹೀಗೆ ವಿವಿಧ ಬಗೆಯಲ್ಲಿ ಮಕ್ಕಳನ್ನು ಸ್ವಾಗತಿಸಲಾಯಿತು.
ಶಿಕ್ಷಣದ ಶಕ್ತಿಯಿಂದ ಜ್ಞಾನದ ಬೆಳಕು ಹೆಚ್ಚಾಗಲಿ: ಶಿಕ್ಷಣವೇ ಶಕ್ತಿ, ಶಿಕ್ಷಣ ಕಲಿತ ವ್ಯಕ್ತಿ ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವರು. ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ “ಶಾಲಾ ಪ್ರಾರಂಭೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಸ್ಕಾಲರ್‍ಶಿಫ್, ಶೂಸಾಕ್ಸ್, ಬಿಸಿಯೂಟವನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಶಾಲಾ ಮಕ್ಕಳ ಮೆರವಣಿಗೆ ನಡೆಸಿ, ಶಾಲೆಯ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಶಿಕ್ಷಕರು ಪುಷ್ಪಾರ್ಚನೆ ಮಾಡಿ, ಹೂವು, ಬಲೂನ್ ನೀಡಿ, ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು. 1ನೇ ತರಗತಿಗೆ 12 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದರ ಮೂಲಕ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಯಿತು.
ಮೇದೆಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕಾವ್ಯ ವಿಜಯಕುಮಾರ್ ಮಾತನಾಡಿ, ಶಿಕ್ಷಣ ಕಲಿತ ವ್ಯಕ್ತಿ ಮುಂದಿನ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು. ಗ್ರಾಮದ ಎಲ್ಲಾ ಅರ್ಹ ಮಕ್ಕಳು ಶಾಲೆಗೆ ದಾಖಲಾಗಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ಅಗತ್ಯವಾದ ಸೌಲಭ್ಯಗಳನ್ನು ಗ್ರಾಮಪಂಚಾಯಿತಿ ವತಿಯಿಂದ ನೀಡುವುದಾಗಿ ತಿಳಿಸಿದರು.
ಮೆದೇಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ ಶಿವಮೂರ್ತಿ ಮಾತನಾಡಿ, ಮಕ್ಕಳು ಶಿಕ್ಷಣವನ್ನು ಕಲಿತು ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾತಣ್ಣ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ತಿಳಿಸಿದ ಪ್ರಮುಖ ಅಂಶಗಳನ್ನು ಶೇ. 100 ರಷ್ಟು ಈಡೇರಿಸುವುದಾಗಿ ತಿಳಿಸಿದರು.
ಗ್ರಾಮದ ವಿಜಯಕುಮಾರ್ ಮಾತನಾಡಿ, ಶಾಲಾ ಮಕ್ಕಳಿಗೆ ಅಗತ್ಯವಾದ ಬಿಸಿಯೂಟ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮೆದೇಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ 8ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ “ಸೋಲಾರ್ ಲ್ಯಾಂಪ್”ನ್ನು ವಿತರಿಸಲಾಯಿತು.
2024-25ನೇ ಸಾಲಿನಲ್ಲಿ 8ನೇ ತರಗತಿ ಮಕ್ಕಳಿಗೆ ಜರುಗಿದ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಶಾಲೆಯ 06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜಿಲ್ಲೆಯಲ್ಲೆ ಅತಿಹೆಚ್ಚು ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿ ಅನಿತಾರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸಿದ್ದಪ್ಪ, ಚಿತ್ರದುರ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್ ಕುಮಾರ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ವೇತಾ ಹಾಗೂ ಸದಸ್ಯರಾದ ದುಗ್ಗಣ್ಣ, ಶಿವಮೂರ್ತಪ್ಪ, ನಿಂಗಣ್ಣ, ಧನ್ಯಕುಮಾರ್, ಪ್ರಿಯ ದರ್ಶಿನಿ, ಬಸವರಾಜು, ಲಕ್ಷ್ಮಿದೇವಿ ಶ್ರೀನಿವಾಸ್, ಸುಶೀಲಮ್ಮ, ಶಶಿಕಲಾ, ಸುಲೋಚನ, ಎಂ.ಸಿ.ಶಂಕರ್, ಸಿಆರ್‍ಪಿಗಳಾದ ಎಂ.ಎಲ್.ತಿಮ್ಮರಾಜು, ಅಜಯ್ ಕೋಟೆ, ಶಾಲೆಯ ಮುಖ್ಯ ಶಿಕ್ಷಕ ಜಿ.ಎನ್.ಅಜ್ಜಪ್ಪ ಸೇರಿದಂತೆ ಮತ್ತಿತರರು ಇದ್ದರು.