ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಅವರ ವಿರುದ್ಧ ನಗರಸಭಾ ಅಧ್ಯಕ್ಷ ಅಜ್ಜಪ್ಪ ಅವರು ಅಪಪ್ರಚಾರದ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಕಾಡುಗೊಲ್ಲ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.
ಸಮಾಜದ ಮುಖಂಡರು ಸಭೆ ಸೇರಿ ಅಜ್ಜಪ್ಪನ ಹೇಳಿಕೆಯನ್ನು ಖಂಡಿಸಿ ಎಚ್ಚರಿಸಿದರು.
ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿ.ಆರ್.ದಾಸ್ ಮಾತನಾಡಿ ಸಚಿವ ಸುಧಾಕರ್ ಅವರು ಯಾವುದೇ ಸಮಾಜವನ್ನು ಕಡೆಗಣಿಸಿಲ್ಲ. ಆಗಾಗಿ ಬೇರೆ ಸಮಾಜದವರಿಗೂ ಅವಕಾಶ ಕೊಡಿಸುವ ದೃಷ್ಟಿಯಿಂದ ಸಚಿವರು ರಾಜೀನಾಮೆ ಕೊಡಲು ಹೇಳಿದ್ದಾರೆ.
ಅಧಿಕಾರದ ದುರಾಸೆ ಇರುವ ಅಜ್ಜಪ್ಪನವರು ರಾಜೀನಾಮೆ ಕೊಡುವ ಬದಲು ಸಚಿವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಗೊಲ್ಲ ಸಮಾಜದ ಮುಖಂಡ ಎಸ್.ಆರ್ ತಿಪ್ಪೇಸ್ವಾಮಿ ಮಾತನಾಡಿ ಕಳೆದ 15 ವರ್ಷದಿಂದ ಸುಧಾಕರ್ ಅವರಿಗೆ ಗೊಲ್ಲರು ಮತ ನೀಡಲ್ಲ, ಅವರನ್ನು ಹತ್ತಿರ ಸೇರಿಸಬೇಡಿ ಎಂದು ಸುಳ್ಳು ಹೇಳಿತ್ತಿದ್ದರಲ್ಲದೆ ಸಚಿವರ ಮನಸ್ಸಿನಲ್ಲಿ ಗೊಲ್ಲ ಸೇರಿದಂತೆ ಇತರೆ ಜನಾಂಗದ ವಿರುದ್ಧ ದ್ವೇಷ ತುಂಬುತ್ತ ಬಂದಂತ ವ್ಯಕ್ತಿ ಅಜ್ಜಪ್ಪ ಎಂದು ಆರೋಪಿಸಿದರು.
ಈಗ ಅಜ್ಜಪ್ಪನ ರಾಜಕೀಯ ತೆವಲಿಗೆ ಯಾರನ್ನು ಬೇಕಾದರೂ ದ್ವೇಷ ಮಾಡುವುದು ಎಷ್ಟು ಸರಿ ಎಂದು ಹೇಳಿದರು.
ಜೆ.ಜಿ.ಹಳ್ಳಿ ಕೇಶವ್ ಮಾತನಾಡಿ ಮತ್ತೊಮ್ಮೆ ಸಚಿವರ ವಿರುದ್ಧ ಅವಹೇಳನಕಾರಿ ಮಾತು ಕೇಳಿಬಂದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾತ್ರಿಕೇನಹಳ್ಳಿ ಪಾಲಾಕ್ಷ ಯಾದವ್ ಮಾತನಾಡಿ ಅಧ್ಯಕ್ಷ ಆಯ್ಕೆ ವಿಚಾರ ಬಂದಾಗ ಅಜ್ಜಪ್ಪನ ಬಿಟ್ಟು ಬೇರೆ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿ ಎಂದು ಸಚಿವರು, ಬ್ಲಾಕ್ ಅಧ್ಯಕ್ಷರಿಗೆ ಹೇಳಿದ್ದೆ ಎಂದರು.
ಸದೃಢ ಮನಸಿನ ಸುಧಾಕರ್ ಅವರು ಅಜ್ಜಪ್ಪ ಸೇರಿದಂತೆ ಯಾರ ಬಗ್ಗೆ ಅನುಮಾನ ಪಡದೆ ಅಜ್ಜಪ್ಪನನ್ನು ಅಧ್ಯಕ್ಷರನ್ನಾಗಿ ಮಾಡಿದರು. ಅಜ್ಜಪ್ಪ ಅಧ್ಯಕ್ಷ ಆಗುವ ಮೊದಲು ಶೆಡ್ ಸೇರಿದ್ದ, ಸುಧಾಕರ್ ಕೈ ಹಿಡಿದು ಅಧ್ಯಕ್ಷರನ್ನಾಗಿ ಮಾಡಿದರೂ ಕೃತಜ್ಞತೆ ಇಲ್ಲದ ಅಜ್ಜಪ್ಪ ಸಚಿವರ ಬಗ್ಗೆ ದೂರುತ್ತಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರಾದ ಷಡಕ್ಷರಿ, ನಗರಸಭೆ ಸದಸ್ಯ ಚಿತ್ರಜಿತ್ ಯಾದವ್, ದಿಂಡಾವರ ಮಹೇಶ್, ಕಿಟ್ಟಿ ಯಾದವ್, ವಿದ್ಯಾದರ ಶ್ರಾವಣಗೆರೆ ಇನ್ನು ಮುಂತಾದವರು ಇದ್ದರು.