ಜೈವಿಕ ಇಂಧನ ಕಾರ್ಯ ಯೋಜನೆಗಳ ಪ್ರಾತ್ಯಕ್ಷಿಕ ಮಳಿಗೆ ಉದ್ಘಾಟನೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಸಮಾವೇಶ ೨೦೨೫ ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಜೈವಿಕ ಇಂಧನ ಕ್ಷೇತ್ರದಲ್ಲಿ ಮಂಡಳಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯ ಯೋಜನೆಗಳು ಹಾಗೂ ಮಂಡಳಿಯು ಮುಂದಿನ ದಿನಗಳಲ್ಲಿ ರೂಪಿಸಲಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಪ್ರಾತ್ಯಕ್ಷಿಕ ಮಳಿಗೆಯನ್ನು ಉಪ ಮುಖ್ಯ ಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಎಸ್ ಈ ಸುಧೀಂದ್ರ ಅವರು ಮಂಡಳಿಯ ಜೈವಿಕ ಇಂಧನ ಕಾರ್ಯ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ಮಂಡಳಿಯು ಕೈಗೊಳ್ಳಲಿರುವ ಉನ್ನತೀಕರಣ ಹಾಗೂ ವಾಣಿಜ್ಯೀಕರಣ ಕಾರ್ಯಯೋಜನೆಗಳ ಕುರಿತು ಉಪಮುಖ್ಯಮಂತ್ರಿಗಳಿಗೆ ಹಾಗೂ ಕೈಗಾರಿಕಾ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶಗಳಿರುವ ಸಾಧ್ಯತೆಗಳ ಕುರಿತು ವಿವರಿಸಿ ಈ ದಿಸೆಯಲ್ಲಿ ಮಂಡಳಿ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣವನ್ನು ಸೃಜನೆ ಮಾಡಲು, ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ರೂಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದನ್ನು ವಿವರಿಸಿದರು.
ಸಚಿವರುಗಳು ಮಂಡಳಿ ಸಾಧಿಸಿರುವ ಪ್ರಾತ್ಯಕ್ಷಿಕೆಗಳು ಅತ್ಯುತ್ತಮವಾಗಿದ್ದು ಜೈವಿಕ ಇಂಧನ ಕ್ಷೇತ್ರದಲ್ಲಿನ ಬಯೋ ಡೀಸೆಲ್, ಬಯೋ ಬ್ರೇಕೇಟ್, ಪ್ಯಲೆಟ್, ಕಂಪ್ರೆಸ್ಟ್ ಬಯೋ ಗ್ಯಾಸ್ ಮುಂತಾದ ಕೈಗೊಂಡಿರುವ ಜೈವಿಕ ಇಂಧನ ಕಾರ್ಯ ಪ್ರಯೋಜನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷರು ೨೦೨೫ – ೨೬ ನೇ ಸಾಲಿನಲ್ಲಿ ಮಂಡಳಿಗೆ ಹೆಚ್ಚಿನ ಅನುದಾನವನ್ನು ಆಯವ್ಯಯದಲ್ಲಿ ಘೋಷಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.