ತಾಲೂಕು ಕಸಾಪ ಅಧ್ಯಕ್ಷರ ಪದಗ್ರಹಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾಡುಗಾರಿಕೆಯಂತಹ ಉತ್ತಮ ಹವ್ಯಾಸಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರತಜ್ಞ ಬಿ.ಎ.ಸೀತಾರಾಂ ಹೇಳಿದ್ದಾರೆ.

ನಗರದ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿತ್ರದುರ್ಗ ತಾಲೂಕು ಅಧ್ಯಕ್ಷರ ಪದಗ್ರಹಣ ಮತ್ತು ಕನ್ನಡ ಹಾಡುಗಳ ಕರೋಕೆ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಓದುವ, ಹಾಡುವ ಅಭ್ಯಾಸ ಉತ್ತಮ ಹವ್ಯಾಸಗಳಲ್ಲಿ ಪ್ರಮುಖವಾಗಿದೆ. ನಾಡು, ನುಡಿಯ ಹೆಮ್ಮೆಯನ್ನು ಸಾರುವ ಹಾಡುಗಳು ಹೆಚ್ಚಿನ ಪ್ರಖ್ಯಾತಿ ಪಡದಿವೆ. ಹಾಡುಗಳನ್ನು ಹಾಡುವ ಹವ್ಯಾಸ ವೈಯುಕ್ತಿಕವಾಗಿ ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತದೆ. ಜಂಜಾಟದ ಬದುಕಿನಲ್ಲಿ ಹಾಡುಗಾರಿಕೆಯನ್ನು ಹೆಚ್ಚಿನ ಜನರು ರೂಢಿಸಿಕೊಂಡಿದ್ದಾರೆ.

ನಗರಗಳಲ್ಲಿ ಕರೋಕೆ ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ಸಾಹಿತ್ಯ ಪರಿಷತ್ತು ಇಂಥಹ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮನೆಯಲ್ಲಿ ಮೊಬೈಲ್‌ಗಳ ಮೂಲಕ ಹಾಡುವಿಕೆ ರೂಢಿಸಿಕೊಂಡಿರುವ ಗಾಯಕರಿಗೆ ಇದು ಉತ್ತಮ ಅವಕಾಶವಾಗಿದೆ.

ಹಾಡುಗಾರರು ಮೊದಲು ತಮಗೆ ಸೂಕ್ತವಾದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೇದಿಕೆಯ ಮೇಲೆ ಹಾಡುವಾಗ ಯಾವುದೇ ರೀತಿಯ ಭಯವನ್ನು ಹೊಂದದೆ ಧೈರ್ಯದಿಂದ ಸ್ವತಂತ್ರವಾಗಿ ನಿರರ್ಗಳವಾಗಿ ಹಾಡುವುದನ್ನು ಅಭ್ಯಾಸ ಮಾಡಬೇಕು. ನಿರಂತರ ಅಭ್ಯಾಸದಿಂದ ಉತ್ತಮ ಹಾಡುಗಾರರಾಗುವುದು ಸಾಧ್ಯ ಎಂದು ಹೇಳಿದರು.

        ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಕನ್ನಡದ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲು ಯುವಕರಾದ ವಿ.ಎಲ್.ಪ್ರಶಾಂತ್‌ರವರಿಗೆ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರು ನಿರಂತರವಾಗಿ ನಾಡು,ನುಡಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಂಡ್ಯದಲ್ಲಿ ಜರುಗುವ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಸಾಗುತ್ತಿರುವ ರಥ ಮಂಗಳವಾರ ಜಿಲ್ಲೆಯನ್ನು ಪ್ರವೇಶಿಸಲಿದೆ. ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಲಿದೆ ಎಂದರು.

        ನೂತನ ತಾಲ್ಲೂಕು ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾಡನಾಡಿ, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಮಕ್ಕಳು ಮತ್ತು ಯುವಕರಿಗೆ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ತಾಲ್ಲೂಕಿನ ಹಿರಿಯರ ಮತ್ತು ಕಿರಿಯರ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದರು.

ತೀರ್ಪುಗಾರರಾರರಾಗಿ ಡಾ.ಬಿ.ಎ.ಸೇತಾರಾಂ ಮತ್ತು ನಿವೃತ್ತ ಶಿಕ್ಷಕ ಸಿದ್ದಪ್ಪ ನಿಲುವಂಜಿ ಭಾಗವಹಿಸಿದ್ದರು. ಸೀನಿಯರ್ ವಿಭಾಗದಲ್ಲಿ  ಪ್ರಥಮ ಸ್ಥಾನವನ್ನು ಡಿ.ಎ.ಆರ್.ಪೇದೆ ಮನು, ದ್ವಿತೀಯ ಸ್ಥಾನವನ್ನು ರಾಘವೇಂದ್ರ ರಾವ್ ಮತ್ತು ಧನಂಜಯ್, ತೃತೀಯ ಸ್ಥಾನವನ್ನು ಡಾ.ನರಹತಿ ಮತ್ತು ರಮ್ಯ ಪಡೆದರು.

ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶಾಲೂಮ್, ದ್ವಿತೀಯ ಸ್ಥಾನವನ್ನು ಇಂಪನಾ ಮತ್ತು ತೃತೀಯ ಸ್ಥಾನವನ್ನು ನಂದೀಶ್ ಪಡೆದರು. ೪೩ ಸ್ಪರ್ಧೇಗಳು ಕನ್ನಡ ಕರೋಕೆ ಗಾಯನದಲ್ಲಿ ಭಾಗವಹಿಸಿದ್ದರು.

ಕಸಾಪ ಪದಾಧಿಕಾರಿಗಳಾದ ಸಿ.ಚೌಳೂರು ಲೋಕೇಶ, ವಿ.ಶ್ರೀನಿವಾಸ ಮಳಲಿ, ಕೆ.ಜಿ.ಅಜಯ್, ವಿಶ್ವನಾಥ್ ಮತ್ತಿತರರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";