ಅಡಿಕೆಯಲ್ಲಿ ಅಂತರ ಬೆಳೆ ಮಣ್ಣಿನ ಫಲವತ್ತತೆಗೆ ಸಹಕಾರಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಜಿಲ್ಲೆಯಲ್ಲಿ ರೈತರು ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಅಡಿಕೆಯಲ್ಲಿ ಅಂತರ ಬೆಳೆಯಾಗಿ ಹಣ್ಣು ಮತ್ತು ಸಾಂಬರು ಪದಾರ್ಧಗಳನ್ನು ಬೆಳೆಯುವುದರಿಂದ ಅಲ್ಲಿನ ಸೂಕ್ಷ್ಮ ಪರಿಸರದ ವಾತವಾರಣದಲ್ಲಿ ಬದಲಾವಣೆಯಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕರಿಯಾಗುತ್ತದೆ ಎಂದು ಭರಮಸಾಗರದ ಪ್ರಗತಿಪರ ರೈತ ಲೋಕೇಶ್ ಹೇಳಿದರು.

- Advertisement - 

ಹಿರಿಯೂರು ತಾಲ್ಲೂಕು ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕಳೆದ ಗುರುವಾರ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕಗಳ ಬಳಕೆ ಹಾಗೂ ಅಡಿಕೆ ಸಿಪ್ಪೆಯಿಂದ ಕಾಂಪೋಷ್ಟ್ ತಯಾರಿಕಾ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ರೈತರು ಕಡಿಮೆ ನೀರು ಬೇಡುವ ಮರ ಆಧಾರಿತ ಕೃಷಿ, ಮಿಶ್ರ ಬೆಳೆ ಪದ್ದತಿ ಹಾಗೂ ಸಮಗ್ರ ಕೃಷಿ ಪದ್ದತಿಗಳಿಗೆ ಆದ್ಯತೆ ನೀಡಿದರೆ ಮಾತ್ರ ಸುಸ್ಥಿರ ಆದಾಯ ಪಡೆಯಲು ಸಾಧ್ಯವಿದೆ. ರೈತರು ಉತ್ತಮ ಆದಾಯ ಪಡೆಯಲು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಲು ನಿರಂತರವಾಗಿ ಏಕ ಬೆಳೆಯನ್ನು ಬೆಳೆಯುವ ಬದಲು ಬೆಳೆ ಪದ್ದತಿಯಲ್ಲಿ ಬದಲಾವಣೆ, ಮಿಶ್ರ ಅಥಾವ ಅಂತರ ಬೆಳೆಯಾಗಿ ದ್ವಿದಳಧಾನ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಮರ್ಪಕ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಅವಶ್ಯಕವೆಂದು ಲೋಕೇಶ್ ಹೇಳಿದರು.

ಅಡಿಕೆ ಸಿಪ್ಪೆ ಕಾಂಪೋಷ್ಟ್ ತಯಾರಿಕೆ ವಿಧಾನ:
ತರಬೇತಿಯಲ್ಲಿ ರೈತ ಲೋಕೇಶ್ ಅಡಿಕೆ ಸಿಪ್ಪೆ ಕಾಂಪೋಸ್ಟ್ ತಯಾರಿಕೆ ಕುರಿತು ಪ್ರಾತ್ಯಕ್ಷತೆ ನೀಡಿದರು. ಅಡಿಕೆ ಸಿಪ್ಪೆ ಕಾಂಪೋಷ್ಟ್ ತಯಾರಿಸಲು ಫೇನೆರೋಕೀಟ ಶೀಲೀಂಧ್ರ, ಪ್ಲೂರೋಟಸ್ ಅಣಬೆ, ಅಸ್ಪರ್ಜಿಲಸ್ ಅವಮೊರಿ ಮತ್ತು ಟ್ರಕೋಡರ್ಮಾ ಸೂಕ್ಷ್ಮ ಜೀವಾಣುಗಳ ಮಿಶ್ರಣ 2 ಕೆಜಿ ತೆಗೆದುಕೊಂಡು 200 ಲೀಟರ್ ನೀರು, 4 ಕೆ.ಜಿ. ಬೆಲ್ಲ ಮತ್ತು 1 ಕೆಜಿ ದ್ವಿದಳ ಧಾನ್ಯದ ಹಿಟ್ಟನ್ನು ಹಾಕಿ 5 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಸಾರಿ ಕೋಲಿನಿಂದ ಗೂರಾಡಿಬೇಕು. ವಾರದ ನಂತರ ಸದರಿ ದ್ರಾವಣ ಬಳಕೆಗೆ ಬರುತ್ತದೆ. ಈ ಮಿಶ್ರಣವು 2 ಟನ್ ಅಡಿಕೆ ಸಿಪ್ಪೆ ಗೊಬ್ಬರ ತಯಾರಿಸಲು ಸಾಕಾಗಿದ್ದು, ಇದರೊಂದಿಗೆ 200-400 ಕೆಜಿ ಕೃಷಿ ತ್ಯಾಜ್ಯ,100-200 ಕೆಜಿ ಸಗಣಿ ಬೇಕಾಗುತ್ತದೆ. ಅಡಿಕೆ ಸಿಪ್ಪೆ ಮತ್ತು ಕೃಷಿ ತ್ಯಾಜ್ಯವನ್ನು ಒಂದು ಪದರು ಅದರ ಮೇಲೊಂದು ಪದರು ಸಗಣಿ ರಾಡಿ ಹೀಗೆ ಪುನಾರವರ್ತನೆ ಮಾಡಿ ನಂತರ ಮೇಲೆ ತಿಳಿಸಿದ 200 ಲೀಟಲ್ ಸೂಕ್ಷ್ಮ ಜೀವಾಣುಗಳ ಮಿಶ್ರಣ ದ್ರಾವನ್ನು ಎಲ್ಲಾ ಕಡೆ ಸಮನಾಗಿ ಸಿಂಪಡಿಸಿಬೇಕು. ತದನಂತರ ಶೇ 50-60% ತೇವಾಂಶವನ್ನು ಕಾಪಾಡಿಕೊಂಡು,ಪ್ರತಿ 7-10 ದಿನಗಳಿಗೊಮ್ಮೆ ಮೇಲೆ ಕೆಳಗೆ ಸಲಿಕೆಯಿಂದ ತಿರುಗಿಸಬೇಕೆಂದರು. ಹೀಗೆ 6-9 ತಿಂಗಳಲ್ಲಿ ಉತ್ಕಷ್ಟವಾದ ಅಡಿಕೆ ಸಿಪ್ಪೆ ಕಾಂಪೋಸ್ಟ್ ತಯಾರಾಗುತ್ತದೆ ಎಂದು ತಿಳಿಸಿದರು.

- Advertisement - 

ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸಲು ಪ್ರೋತ್ಸಾಹಿಸಲು ಅಡಿಕೆ ಸಿಪ್ಪೆ ಕಾಂಪೋಸ್ಟ್ ತಯಾರಿಸಲು ಬಳಸುವ 2 ಕೆಜಿ ಸೂಕ್ಷ್ಮ ಜೀವಾಣುಗಳ ಮಿಶ್ರಣವನ್ನು ತರಬೇತಿಯಲ್ಲಿ ಉಚಿತವಾಗಿ ನೀಡಲಾಯಿತು.
ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ.ಆರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರು ಅಸಮರ್ಪಕವಾಗಿ ರಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳ ಬಳಕೆಯಿಂದ ಮಣ್ಣಿನಲ್ಲಿ ಉಪಕಾರಿ ಸೂಕ್ಷಣು ಜೀವಿಗಳ ಸಂಖ್ಯೆ ಕಡಿಮೆಯಾಗಿ ಮಣ್ಣಿನ ರಚನೆ ಮತ್ತು ಫಲವತ್ತತೆ ಕ್ಷೀಣಿಸುತ್ತಿದೆ.

ಸದರಿ ಉಪಕಾರಿ ಜೀವಿಗಳನ್ನು ಮಣ್ಣಿಗೆ ಬೀಜೋಪಚಾರ ಅಥವಾ ಕಾಂಪೋಷ್ಟ ಗೊಬ್ಬರಗಳ ಜೊತೆಗೆ ಅಣುಜೀವಿ ಗೊಬ್ಬರಗಳನ್ನು ಬಳಸಿ ಮರುಪೂರಣ ಮಾಡುವುದು ಅಗತ್ಯವಾಗಿದೆ. ರೋಗ ಮತ್ತು ಕೀಟಗಳ ನಿರ್ವಹಣೆಗೆ ಪರಿಸರ ಸ್ನೇಹಿ ಉಪಕಾರಿ ಜೈವಿಕ ಪೀಡೆನಾಶಕಗಳ ಬಳಕೆಯಿಂದ ರೋಗಾಣು ಜೀವಿಗಳ ನಿರ್ವಹಣೆ ಸಾಧ್ಯವೆನ್ನುತ್ತಾ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕೆಲಸವಾಗಬೇಕು.

ರೈತರು ಬೆಳೆಗಳಲ್ಲಿ ಹಾನಿ ಮಾಡುವ ಪೀಡೆಗಳ ಸಮರ್ಪಕ ನಿರ್ವಹಣೆಗೆ ರಸಾಯನಿಕ ಪೀಡೆನಾಶಕಗಳನ್ನು ಮೊದಲನೇ ಆದ್ಯತೆಯಾಗಿ ಬಳಸದೇ ಉಪಕಾರಿ ಶೀಲೀಂಧ್ರ, ದುಂಡಾಣು ಮತ್ತು ಜಂತು ಹುಳು ಆಧಾರಿತ ಜೈವಿಕಪೀಡೆ ನಾಶಕಗಳನ್ನು ಬಳಸುವುದು ಸೂಕ್ತವೆಂದರು. ಇದಲ್ಲದೇ ಅಡಿಕೆ ಬೆಳೆಯುವ ರೈತರು ಅಡಿಕೆ ಸಿಪ್ಪೆಯನ್ನು ಸುಡುವುದು ಅಥವಾ ರಸ್ತೆಯ ಬದಿಯಲ್ಲಿ ಹಾಕುವುದರಿಂದ ಹಲವು ಅವಘಡಗಳಿಗೆ ಕಾರಣವಾಗಬಹುದು. ಆದ್ದರಿಂದ ಅಡಿಕೆ ಸಿಪ್ಪೆಯನ್ನು ಕಾಂಪೋಷ್ಟ್ ಆಗಿ ಪರಿವರ್ತಿಸುವ ಸೂಕ್ಷಜೀವಿಗಳ ಮಿಶ್ರಣವನ್ನು ಬಳಸುವ ವಿಧಾನವನ್ನು ಇಂದಿನ ಅರಿವು ಮೂಡಿಸುವ ತರಬೇತಿಯಲ್ಲಿ ಪ್ರಾತ್ಯಕ್ಷೆಯ ಮೂಲಕ ತೋರಿಸಿ ಅಡಿಕೆ ಸಿಪ್ಪೆಯನ್ನು ಸಂಪಬ್ದರಿತವಾದ ಗೊಬ್ಬರವಾಗಿ ಬಳಸಬಹುದೆಂದರು. ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಮಣ್ಣು, ನೀರು ಮತ್ತು ಪರಿಸರ ಉಳಿಸಲು ನಮ್ಮೇಲ್ಲರ ಆದ್ಯತೆಯಾಗಿದೆ ಎಂದು ರಜನೀಕಾಂತ.ಆರ್ ಹೇಳಿದರು.

ತಾಂತ್ರಿಕ ಅಧಿವೇಶನದಲ್ಲಿ ತುಮಕೂರಿನ ಡಿ, ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೆಲಿ. ತಾಂತ್ರಿಕ ಮುಖ್ಯಸ್ಥ ಕುಮಾರ್.ಎಸ್ ಮಾತನಾಡಿ, ಆರೋಗ್ಯಕರ ಮಣ್ಣು ಖನಿಜ, ನೀರು, ಗಾಳಿ, ಸಸ್ಯದ ಅವಶೇಷಗಳು, ಸೂಕ್ಷö್ಮ ಜೀವಿಗಳು ಮತ್ತು ಇತರೆ ಜೀವಿಗಳಿಂದ ಕೂಡಿದ್ದು, ಇದು ನಮ್ಮ ಆಹಾರ ಪೂರೈಕೆಯ ಅಡಿಪಾಯವಾಗಿದೆ. ನಾವು ಅತೀಯಾದ ರಸಾಯನಿಕ ಬಳಕೆಯಿಂದ ಮಣ್ಣನ್ನು ನಿರ್ಲಕ್ಷೆ ಮಾಡಬಾರದು. ಅರಣ್ಯದ ಮಣ್ಣುಗಳು ಉಳುಮೆಯಿಲ್ಲದೆ ಹೆಚ್ಚು ಜೈವಿಕವಾಗಿ ವೈವಿಧ್ಯಮಯವಾಗಿದ್ದು, ನಾವು ಸಾವಯವ ಅಥವಾ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿ ಕಡಿಮೆ ಉಳುಮೆ, ಭೂಮಿಯ ಮುಚ್ಚುಗೆ ಹಾಗೂ ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಸಾರಜನಿಕ ಸ್ಥೀರಿಕರಿಸುವ ಜೈವಿಕ ಗೊಬ್ಬರಗಳಲ್ಲಿ ರೈಜೋಬಿಯಂ ಗೊಬ್ಬರವನ್ನು ದ್ವಿದಳ ಧಾನ್ಯಗಳ ಬೆಳೆಯಲ್ಲಿ, ಅಜಟೋಬ್ಯಕ್ಟರ್ ಮತ್ತು ಅಜೋಸ್ಪಿರಿಲಮ್ ಅಣು ಜೀವಿ ಗೊಬ್ಬರವನ್ನು ಏಕದಳ,ತರಕಾರಿಮತ್ತು ಹಣ್ಣಿನ ಬೆಳೆಗಳಲ್ಲಿ ಬೀಜೋಪಚಾರ ಅಥವಾ ಸಂಪದ್ಬರಿತ ಸಾವಯವ/ಕಾಂಪೋಷ್ಟ್ ಗೊಬ್ಬರದÀಲ್ಲಿ ಮಿಶ್ರಣ ಮಾಡಿಕೊಡಬಹುದು. ರಂಜಕ ಕರಗಿಸುವ ದುಂಡಾಣು ಗೊಬ್ಬರವನ್ನು ಮಣ್ಣಿನಲ್ಲಿ ಕರಗದ ರಂಜಕವನ್ನು ಕರಗಿಸಿ ಸಸ್ಯಗಳಿಗೆ ಒದಗಿಸಿಕೊಡಲು ಸಹಕರಿಯಗಿದೆಂದರು. ಪೊಟ್ಯಾಷಿಯಂ ಕರಗಿಸುವ ದುಂಡಾಣು ಗೊಬ್ಬರ, ಬಯೋ ಎನ್ ಪಿ ಕೆ ಮತ್ತು ವ್ಯಾಮ್ ಜೈವಿಗೊಬ್ಬರಗಳನ್ನು ಎಲ್ಲಾ ಬೆಳೆಗಳಲ್ಲಿಯೂ ಸಹ ಬಳಸಬಹುದು.

ರೈತರು ಜೈವಿಕ ಗೊಬ್ಬರದಲ್ಲಿರುವ ಸೂಕ್ಷö್ಮಜೀವಿಗಳ ಸಂಖ್ಯೆಯನ್ನು ವೃದ್ದಿಸಲು 200ಲೀಟರ್ ನೀರಿಗೆ 4 ಕೆಜಿ ಬೆಲ್ಲ ಮತ್ತು 2 ಕೆ ಜಿ ಜೈವಿಕ ಗೊಬ್ಬರ ಮತ್ತು 1 ಕೆಜಿ ದ್ವಿದಳ ಧಾನ್ಯದ ಹಿಟ್ಟನ್ನು ಹಾಕಿ 5 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಸಾರಿ ಕೋಲಿನಿಂದ ಗೂರಾಡಿ, ನಂತರ ಒಂದು ವಾರದೊಳಗೆ ಸದರಿ ಜೈವಿಕ ಗೊಬ್ಬರವನ್ನು ಬಳಸಬೇಕು. ಹೀಗೆ ತಯಾರಿಸಿದ ದ್ರಾವಣವನ್ನು 1:1 ಪ್ರಮಾಣದಲ್ಲಿ (1 ಲೀಟರ್ ನೀರಿಗೆ 1 ಲೀಟರ್ ಜೈವಿಕ ಗೊಬ್ಬರ ದ್ರಾವಣ) ತೋಟಗಾರಿಕೆ ಬೆಳೆಗಳಬುಡಕ್ಕೆ ಮಣ್ಣಿಗೆ ಹಾಕುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಕುಮಾರ್.ಎಸ್ ಹೇಳಿದರು.

ಚಳ್ಳಕೆರೆ ಉಪವಿಭಾಗದ ಉಪ ಕೃಷಿನಿರ್ದೇಶಕ ಉಮೇಶ್.ಡಿ, ಹಿರಿಯೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ.ಎ.ವಿ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದರು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.

 

Share This Article
error: Content is protected !!
";