ಕಾನೂನು ಮೀರಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಲ್ಲ-ಸಚಿವ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಗರ್ ಹುಕುಂ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಅಧಿಕಾರಿಗಳು ಕಾನೂನು ಮೀರಿ ನಡೆದಿಲ್ಲ. ಒಂದು ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ನಮ್ಮ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ನೀಡಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಸಮಿತಿ ಮುಂದೆ ಅಧಿಕಾರಿಗಳು ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬ ಕಾನೂನು ಇದೆ. ಹೀಗಾಗಿ ಅಧಿಕಾರಿಗಳು ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತ್ಯಜಿಸಿಬಿಡುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳೂ ಕಾನೂನಿನಲ್ಲೇ ಇದ್ದು, ಕಾನೂನು ಮೀರಿ ಏನೂ ಮಾಡಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ಒಂದೆರಡು ರೈತರಿಗೆ ಅನ್ಯಾಯ ಆಗಿದ್ದರೆ ಶಾಸಕರು ನನ್ನ ಗಮನಕ್ಕೆ ತಂದರೆ ಸಮಸ್ಯೆ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

- Advertisement - 

ಇದೇ ವೇಳೆ ಬಗರ್ ಹುಕುಂ ಹೆಸರಿನಲ್ಲಿ ಅನರ್ಹ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದು ಸದನದ ಗಮನ ಸೆಳೆದ ಸಚಿವರು, 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ 7,564 ಜನ ಅರ್ಜಿ ಸಲ್ಲಿಸಿದ್ದಾರೆ. ರಸ್ತೆ ಗುಂಡು ತೋಪು ಒತ್ತುವರಿ ಮಾಡಿರುವವರು 33,632, ಅರಣ್ಯ ಭೂಮಿಯ ಮಂಜೂರಾತಿಗೆ 1,00,565, ನಗರ-ನಗರಸಭೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಗೆ 69,850, ಆ ತಾಲೂಕಿನಲ್ಲೇ ವಾಸಿಸದ ಪಕ್ಕದ ತಾಲೂಕಿನಲ್ಲೂ ವಾಸ ಇಲ್ಲದ 1,620, ಕೃಷಿಕರೇ ಅಲ್ಲದ 13,488, ಜಮೀನಿನ ಸ್ವಾಧೀನದಲ್ಲೇ ಇಲ್ಲದ  44,517, ಅಮೃತ್ ಮಹಲ್ ಕಾವಲ್‌ಭೂ ಮಂಜೂರಾತಿಗೆ 13,488 ಹಾಗೂ ಕೆರೆ ಮಂಜೂರಿಗೂ 3040 ಅರ್ಜಿಗಳು ಬಂದಿವೆ ಎಂದು ಕಂದಾಯ ಸಚಿವರು ಸದನದಲ್ಲಿ ಮಾಹಿತಿ ನೀಡಿದರು.

ಪಡಾ ಭೂ ಮಂಜೂರು:
ಪಡಾ ಅಥವಾ ಬೀಳು ಜಮೀನಿನ ಸ್ವಾಧೀನವನ್ನು ಈ ಹಿಂದೆಯೇ ಬಿಟ್ಟಿದ್ದಾರೆ. ಹೀಗಾಗಿ ಈ ಪೈಕಿ ಕೆಲ ಜಮೀನು ಅರಣ್ಯ ಪ್ರದೇಶಗಳಿಗೆ ಮಂಜೂರಾಗಿದೆ. ಕೆಲವು ಸರ್ಕಾರಿ ಕಚೇರಿಗಳಿಗೆ
, ಸ್ಮಶಾನ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಗ್ರ್ಯಾಂಟ್ ಆಗಿದೆ. ಈ ಬಗ್ಗೆ ಮೊದಲು ಅಧ್ಯಯನ ನಡೆಸಿ ಆ ನಂತರ ಯಾರು ಕೃಷಿಯಲ್ಲಿ ತೊಡಗಿದ್ದಾರೆ ಅಂತವರಿಗೆ ಜಮೀನು ಮಂಜೂರು ಮಾಡುವ ಕೆಲಸ ಆಗಬೇಕು. ಅದನ್ನು ಬಿಟ್ಟು ಎಲ್ಲರ ಅರ್ಜಿಯನ್ನೂ ಸ್ವೀಕರಿಸಿದರೆ ಭವಿಷ್ಯದಲ್ಲಿ ಈ ಸಮಸ್ಯೆ ಇನ್ನೂ ನೂರುಪಟ್ಟು ದೊಡ್ಡದಾಗುವ ಸಾಧ್ಯತೆ ಇದೆ ಎಂದು ಸಚಿವರು ಎಚ್ಚರಿಸಿದರು.
ಪ್ರಸ್ತುತ ಅಧ್ಯಯನ ನಡೆಸುತ್ತಿದ್ದು
, ಬಗರ್ ಹುಕುಂ ಕೆಲಸಗಳು ಮುಗಿದ ನಂತರ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

- Advertisement - 

ಗೋಮಾಳ ಜಮೀನನ್ನು ಬಗರ್‌ಹುಕುಂ ಅಡಿಯಲ್ಲಿ ಮಂಜೂರಾತಿ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಅವರು, ಕೆಲವು ಶಾಸಕರು ಗೋಮಾಳ ಭೂಮಿಗೆ ಸಂಬಂಧಿಸಿ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಕಾನೂನನ್ನು ಮೀರಿ ಏನೂ ಮಾಡುತ್ತಿಲ್ಲ. ನಾವು ಯಾವುದನ್ನೂ ಜಿಲ್ಲಾಧಿಕಾರಿಗಳಿಗೆ ಕೊಟ್ಟಿಲ್ಲ. ಕಾನೂನನ್ನು ಯಥಾವತ್ ಅನುಸರಿಸುತ್ತಿದ್ದೇವೆ. ಕಾನೂನಿನಲ್ಲಿ ಒಂದು ಅಕ್ಷರ ಕೂಡ ಬದಲಿಸಿಲ್ಲ. ನಾವೇನಾದ್ರೂ ಕಾನೂನು ಬದಲಿಸಿದ್ದರೆ ಸದಸ್ಯರು ತಿಳಿಸಲಿ ತಿದ್ದಿಕೊಳ್ಳುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡರು ತಿಳಿಸಿದರು.

 

 

Share This Article
error: Content is protected !!
";