ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಅಕ್ರಮದ ತನಿಖೆ ನಡೆಸುತ್ತಿರುವ ಇಡಿ ಲೋಕಾಯುಕ್ತ ಎಡಿಜಿಪಿಗೆ ತನಿಖೆಯ ಪ್ರಗತಿಯ ಬಗ್ಗೆ ಪತ್ರ ಬರೆದಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಾಗತಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್‌ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಭೂ ಸ್ವಾಧೀನ ಪ್ರಕ್ರಿಯೆಯೇ ಅಕ್ರಮ ಎಂದು ಹೇಳಿದೆ. ಪ್ರಾಥಮಿಕ ಹಂತದಲ್ಲಿ ಇಡಿ ನಡೆಸಿದ ತನಿಖೆಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಮುಡಾ ಅಕ್ರಮದ ಬಗ್ಗೆ ಎಳೆಎಳೆಯಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜಾರಿ ನಿರ್ದೇಶನಾಲಯ ಬಿಡಿಸಿ ಇಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಪತ್ನಿಗೆ ಕೊಟ್ಟಿರುವ 14 ಸೈಟ್‌ಗಳು ಸಹ ಅಕ್ರಮ ಎಂದು ಇಡಿ ಉಲ್ಲೇಖಿಸಿದೆ. ಲೋಕಾಯುಕ್ತ ಪೊಲೀಸರು ನಡೆಸಿದ ವಿಚಾರಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿಜಯೇಂದ್ರ, ಮುಡಾ ಹಗರಣವು ಕೇವಲ ಮುಖ್ಯಮಂತ್ರಿ ಕುಟುಂಬಕ್ಕೆ 14 ನಿವೇಶನ ಹಂಚಿಕೆಗೆ ಸೀಮಿತವಾಗಿಲ್ಲ. ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಅವರು ತಿಳಿಸಿದರು.
ನನ್ನ ಹೇಳಿಕೆ ಕೇವಲ ಆರೋಪವಾಗಿರಲಿಲ್ಲ ಎಂಬುದು ಈಗ ಇಡಿ ತನಿಖೆಯಿಂದ ಸಾಬೀತಾಗಿದೆ ಎಂದು ಅವರು ಹೇಳಿದರು. ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತ ತನಿಖೆ ನಡೆಸಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಬಿಎಂ ಅವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದನ್ನು ಇಡಿ ಪತ್ತೆ ಹಚ್ಚಿದೆ. ಕೇಂದ್ರ ಸಂಸ್ಥೆಯು ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಬರೆದ ಪತ್ರದಲ್ಲಿ , ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರರಿಗೆ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದೆ ಎಂದು ತನ್ನ ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದೆ.
ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್ ಜಿ ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.