ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಮನೆಯಲ್ಲೇ ಕುಳಿತು ಡಾಟಾ ಎಂಟ್ರಿ ಕೆಲಸ ಮಾಡಿಕೊಟ್ಟರೆ ದಿನಕ್ಕೆ 200 ರೂ. ಗಳಿಸಬಹುದು ಎಂಬ ಸಣ್ಣ ಆಸೆಯೊಂದಿಗೆ ಸೈಬರ್ ವಂಚಕರ ಬಲೆಗೆ ಬಿದ್ದ 25 ವರ್ಷದ ಯುವತಿಯೊಬ್ಬರು ಬರೋಬ್ಬರಿ 9,33,866 ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ವಂಚನೆ ನಡೆದಿದ್ದು ಹೇಗೆ?
ಮೊದಲ ಸಂದೇಶ ಮತ್ತು ನಂಬಿಕೆ: ಸೆಪ್ಟೆಂಬರ್ 11, 2026ರಂದು ಸಂತ್ರಸ್ತೆಯ ವಾಟ್ಸಾಪ್ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ತಾನು ‘ಮೇಘಾ ಕಂಪನಿ’ಯ ಎಚ್ಆರ್ ಎಂದು ಪರಿಚಯಿಸಿಕೊಂಡ ವಂಚಕ, ದಿನಕ್ಕೆ 20 ಟಾಸ್ಕ್ ಮುಗಿಸಿದರೆ ಹಣ ಸಿಗುತ್ತದೆ ಎಂದು ನಂಬಿಸಿ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದನು.
ಆಮಿಷಕ್ಕೆ ಬಿದ್ದ ಯುವತಿ: ಲಿಂಕ್ ಮೂಲಕ ಜಾಯಿನ್ ಆಗಿ ಮೊದಲ ದಿನ ನೀಡಿದ 20 ಟಾಸ್ಕ್ ಪೂರ್ಣಗೊಳಿಸಿದ ಯುವತಿಯ ಬ್ಯಾಂಕ್ ಖಾತೆಗೆ ವಂಚಕರು ನಿಜಕ್ಕೂ 200 ರೂಪಾಯಿ ಜಮೆ ಮಾಡಿದ್ದರು. ಕೈಗೆ ಬಂದ ಅಲ್ಪ ಹಣವನ್ನು ನೋಡಿ ನಂಬಿದ ಯುವತಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಬಹುದೆಂಬ ಆಸೆಗೆ ಬಿದ್ದಿದ್ದಾರೆ.
ಹಂತ ಹಂತವಾಗಿ ಹಣ ಲೂಟಿ: ಮರುದಿನ ನೀಡಿದ ಟಾಸ್ಕ್ಗಳು ಅಪೂರ್ಣಗೊಂಡಾಗ '@tutorcode321' (ಅಮರ್ಜೀತ್ ಕುಮಾರ್) ಎಂಬಾತನನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಆತನ ಸೂಚನೆಯಂತೆ ಯುವತಿ ಮೊದಲು 3,000 ರೂ. ಪಾವತಿಸಿದ್ದಾರೆ. ಹೂಡಿಕೆ ಮಾಡಿದ ಹಣ ವಾಪಸ್ ಪಡೆಯಲು ಪ್ರೀಮಿಯಂ ಡೆಪಾಸಿಟ್ ಕಟ್ಟಬೇಕು ಎಂದು ನಂಬಿಸಿ ಹಂತ ಹಂತವಾಗಿ ಸೆಪ್ಟೆಂಬರ್ 12 ರಿಂದ 17ರವರೆಗೆ ಒಟ್ಟು 9,33,866 ರೂ.ಗಳನ್ನು ನಾನಾ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಕೊನೆಗೆ ಹೂಡಿಕೆ ಮಾಡಿದ ಹಣವೂ ವಾಪಸ್ ಬಾರದೆ, ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದ ಕೂಡಲೇ ಸಂತ್ರಸ್ತೆ ಮಂಗಳೂರು ನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.




