ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯ ಹಾಗೂ ಆರ್ಥಿಕ ಮುಗ್ಗಟ್ಟನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ತೊಳೆಯುತ್ತಾ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ₹2,660.26 ಕೋಟಿ ಅನುದಾನವನ್ನು ಖಜಾನೆಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿರುವ ಅವರು, ಇದು ಸರ್ಕಾರದ ಆರ್ಥಿಕ ದಿವಾಳಿತನದ ಸ್ಪಷ್ಟ ಮುನ್ಸೂಚನೆ ಎಂದು ಆರೋಪಿಸಿದ್ದಾರೆ.
ಖಜಾನೆಯಿಂದ ಸಾವಿರಾರು ಕೋಟಿ ವರ್ಗಾವಣೆ: 2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ₹2,660.26 ಕೋಟಿ ಅನುದಾನವನ್ನು ರಾಜ್ಯ ಖಜಾನೆಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ಸರ್ಕಾರವೇ ಆದೇಶ ಹೊರಡಿಸಿ ವರ್ಗಾಯಿಸಿದೆ.
ಕಂತು ಬಿಡುಗಡೆಯಾಗದೆ ಮಹಿಳೆಯರ ಪರದಾಟ: ಇನ್ನೊಂದೆಡೆ, ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಕಂತುಗಳ ಅನುದಾನವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ಸರ್ಕಾರಕ್ಕೆ ಕಟು ಪ್ರಶ್ನೆ: ಒಂದೆಡೆ ನಾಡಿನ ಮಹಿಳೆಯರಿಗೆ ಮಾಸಿಕ ಕಂತು ನೀಡಲು ಹಣವಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸುವ ಸರ್ಕಾರ, ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿಗಳನ್ನು ನಿಗಮದ ಖಾತೆಗೆ ಏಕಾಏಕಿ ವರ್ಗಾಯಿಸಿರುವುದರ ಹಿಂದಿನ ಆಂತರಂಗಿಕ ಉದ್ದೇಶವೇನು? ಈ ವರ್ಗಾಯಿಸಿದ ಹಣವನ್ನು ಹೇಗೆ ಮತ್ತು ಎಲ್ಲಿ ಬಳಸಲಾಗಿದೆ ಎಂಬುದಕ್ಕೆ ರಾಜ್ಯದ ಜನತೆಗೆ ಕಾಂಗ್ರೆಸ್ ಸ್ಪಷ್ಟ ಉತ್ತರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸರ್ಕಾರದ ಈ ವೈರುಧ್ಯದ ನಡೆ ರಾಜ್ಯದ ಹಣಕಾಸಿನ ನಿರ್ವಹಣೆಯ ವೈಫಲ್ಯವನ್ನು ಬತ್ತಲೆ ಮಾಡಿದ್ದು, ಇದು ಆಡಳಿತಾತ್ಮಕ ಆರ್ಥಿಕ ಶಿಸ್ತೋ ಅಥವಾ ಆರ್ಥಿಕ ದಿವಾಳಿತನದ ಮುನ್ಸೂಚನೆಯೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.




