ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಂತ ತಂದೆಯಿಂದ ಹಣ ಕೀಳುವ ದುರಾಸೆಗಾಗಿ 40 ವರ್ಷದ ಮಗನೊಬ್ಬ ತಾನೇ ಅಪಹರಣದ ನಾಟಕವಾಡಿದ್ದ ಪ್ರಕರಣವನ್ನು ಆರ್.ಆರ್.ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ.
62 ವರ್ಷದ ಮನೋಹರ್ ಪಟೇಲ್ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಅಪಹರಣದ ನಾಟಕವಾಡಿ 90 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಪುತ್ರ ಮನೀಷ್ ಪಟೇಲ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಂದೆಗೆ ಸುಳ್ಳು ಹೇಳಿ ಮನೀಷ್ ಪಟೇಲ್ ಸೆಪ್ಟೆಂಬರ್ 28ರಂದು ಮನೆಯಿಂದ ತೆರಳಿದ್ದ. ಆದರೆ, ಮಾರನೇ ದಿನ ಬೆಳಗ್ಗೆ 8 ಗಂಟೆಗೆ ಮನೀಷ್ನ ಮೊಬೈಲ್ ಸಂಖ್ಯೆಯಿಂದಲೇ ತಂದೆಗೆ ವಾಟ್ಸ್ಆ್ಯಪ್ ಕರೆ ಬಂದಿದೆ. ಫೋನ್ನಲ್ಲಿ ಮಾತನಾಡಿದ ಅಪರಿಚಿತರು, "ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ, 90 ಲಕ್ಷ ರೂಪಾಯಿ ನೀಡದಿದ್ದರೆ ಕೊಲೆ ಮಾಡುತ್ತೇವೆ" ಎಂದು ಬೆದರಿಕೆ ಹಾಕಿದ್ದರು.
ನಾಲ್ಕೈದು ಬಾರಿ ಕರೆ ಮಾಡಿದ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಮಗನ ಸುರಕ್ಷತೆಯ ಬಗ್ಗೆ ತೀವ್ರ ಆತಂಕಗೊಂಡ ಮನೋಹರ್ ಪಟೇಲ್ ಅದೇ ದಿನ ಮಧ್ಯಾಹ್ನ ಆರ್.ಆರ್.ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪೊಲೀಸರ ಚುರುಕು ಕಾರ್ಯಾಚರಣೆ ಹಾಗೂ ಸತ್ಯ ಬಯಲು:
ದೂರು ದಾಖಲಿಸಿಕೊಂಡ ತಕ್ಷಣ ಎಚ್ಚೆತ್ತ ಪೊಲೀಸರು ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ಯತ್ನಿಸಿದರೂ ಅದು ಸ್ವಿಚ್ಡ್ ಆಫ್ ಬಂದಿತ್ತು. ಆದರೆ, ಕೆಲ ಸಮಯದ ನಂತರ ಮತ್ತೆ ಅಪರಿಚಿತ ಸಂಖ್ಯೆಯಿಂದ ತಂದೆಗೆ ಕರೆ ಮಾಡಿ "ಹಣ ಅರೇಂಜ್ ಆಯ್ತಾ?" ಎಂದು ದುಷ್ಕರ್ಮಿಗಳು ವಿಚಾರಿಸಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಕರೆಯ ಲೊಕೇಶನ್ ಟ್ರ್ಯಾಕ್ ಮಾಡಿ ಹಾಸನದ ಕಡೆಗೆ ಹುಡುಕಾಟ ನಡೆಸಿದರು.
ಕೊನೆಗೆ ಹಾಸನ ಭಾಗದಲ್ಲಿ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ಬಾಗಿಲು ತೆಗೆದು ಪರಿಶೀಲಿಸಿದಾಗ ಅಚ್ಚರಿಯ ದೃಶ್ಯ ಕಣ್ಣಿಗೆ ಬಿದ್ದಿತು. ಅಪಹರಣಕ್ಕೊಳಗಾಗಿದ್ದ ಎನ್ನಲಾದ ಮನೀಷ್ ಪಟೇಲ್, ಕಿಡ್ನ್ಯಾಪ್ ಮಾಡಿದವರು ಎನ್ನಲಾದ ಇಬ್ಬರು ಸಹಚರರೊಂದಿಗೆ ಯಾವುದೇ ಭಯವಿಲ್ಲದೆ ಜಾಲಿಯಾಗಿ ಕುಳಿತುಕೊಂಡಿರುವುದು ಕಂಡುಬಂದಿದೆ.
ನಂತರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ತಂದೆಯಿಂದ 90 ಲಕ್ಷ ರೂಪಾಯಿ ಸುಲಿಗೆ ಮಾಡಲು ಮನೀಷ್ ಸ್ವತಃ ಈ ಕಟ್ಟುಕಥೆ ಹೆಣೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ಮನೀಷ್ ತಾನೇ ಈ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದು, ಮೂವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.




