ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಕಳೆದ 20 ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ಪ್ರತಿಷ್ಠಿತ 'ಹಿಂದೂ ಮಹಾಗಣಪತಿ' ಶೋಭಾಯಾತ್ರೆ ಮತ್ತು ವಿಸರ್ಜನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಈ ವರ್ಷದ ವಿಶೇಷತೆಯಾಗಿ ಜಯದೇವ ಕ್ರೀಡಾಂಗಣದಲ್ಲಿ ಸುವರ್ಣಗಿರಿ ಮಾದರಿಯ ವಿಷ್ಣು ಅವತಾರದ ಬೃಹತ್ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ಇಡೀ ಚಿತ್ರದುರ್ಗ ನಗರವು ಕೇಸರಿಮಯವಾಗಿ ಕಂಗೊಳಿಸುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ವಿಶೇಷ ಅಲಂಕಾರ ಹಾಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.
ಲಕ್ಷಾಂತರ ಭಕ್ತರ ಆಗಮನ ಹಾಗೂ ಪ್ರಸಾದ ವ್ಯವಸ್ಥೆ: ರಾಜ್ಯದ ಮೂಲೆಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಮಿತಿಯವರು ಕುಡಿಯುವ ನೀರು ಹಾಗೂ ಪ್ರಸಾದ ವಿತರಣೆಗೆ ವ್ಯಾಪಕ ವ್ಯವಸ್ಥೆ ಕೈಗೊಂಡಿದ್ದಾರೆ.
ಶೋಭಾಯಾತ್ರೆ ಸಾಗುವ ಹಾದಿ ಮತ್ತು ಕಲಾ ವೈಭವ: ಚಳ್ಳಕೆರೆ ಗೇಟ್ನಿಂದ ಆರಂಭವಾಗುವ ಈ ಬೃಹತ್ ಶೋಭಾಯಾತ್ರೆಯು ಚಂದ್ರವಳ್ಳಿಯವರೆಗೆ ಸಾಗಲಿದೆ. ಮೆರವಣಿಗೆಯುದ್ಧಕ್ಕೂ ಜನಪದ ಕಲಾತಂಡಗಳು ಹಾಗೂ ವಿಶೇಷ ಸಂಗೀತ ವಲಯಗಳು ಕಳೆಗಟ್ಟಲಿದ್ದು, ಹಬ್ಬದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಲಿವೆ.
ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಮತ್ತು ಸಂಚಾರ ಬದಲಾವಣೆ:ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಾರದಂತೆ ಎಸ್ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ 4,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಕ್ಟೋಬರ್ 3ರಂದು ಶನಿವಾರ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.




