ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಿಕ್ಷಕರ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿರುವ ಎಪಿ ರಂಗನಾಥ್ ಅವರ ಗೆಲುವಿಗೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕೆಂದು ಜೆಡಿಎಸ್ ರಾಜ್ಯಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ವತಿಯಿಂದ ಆಯೋಜನೆ ಮಾಡಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದು ಅವರೊಂದಿಗೆ ಜೆಡಿಎಸ್ ಉತ್ತಮ ಬಾಂಧವ್ಯ ಹೊಂದಿದೆ. ನಮ್ಮ ಮೈತ್ರಿ ಈ ಬಾರಿ ಶಿಕ್ಷಕ ಚುನಾವಣೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ. ಶಾಸಕ ಧೀರಜ್ ಮುನಿರಾಜು ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಎ.ಪಿ ರಂಗನಾಥ್ ಜಯಗಳಿಸಲು ಶ್ರಮಿಸಬೇಕು.
ಶಿಕ್ಷಕರ ಸಮಸ್ಯೆಗಳನ್ನು ಅರಿತಿರುವ ಎ.ಪಿ ರಂಗನಾಥ್ ಶಿಕ್ಷಕರ ಅನುಕೂಲಕ್ಕಾಗಿ ತಮ್ಮದೇ ಆದ ಉತ್ತಮ ಯೋಜನೆಗಳನ್ನು ರೂಪಿಸುವ ಆಲೋಚನೆ ಹೊಂದಿದ್ದಾರೆ. ಶಿಕ್ಷಕರಿಗೆ ಇದೊಂದು ಉತ್ತಮ ಅವಕಾಶ ಗ್ರಾಮಾಂತರ ಜಿಲ್ಲೆಯ ಶಿಕ್ಷಕರು ಪ್ರಜ್ಞಾವಂತರಾಗಿದ್ದು ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ. ಈ ಬಾರಿ ಎನ್‌ಡಿಎ ಅಭ್ಯರ್ಥಿ ಎ.ಪಿ ರಂಗನಾಥ್ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ತಾಲೂಕಿನಲ್ಲಿ ಮೈತ್ರಿ ಪಾಲನೆ ಮಾಡಲಾಗುವುದು ನಮ್ಮ ಪಕ್ಷದ ಕಾರ್ಯಕರ್ತರು ಎನ್.ಡಿ.ಎ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಅರಿತಿರುವ ಎ.ಪಿ ರಂಗನಾಥ್ ಈ ಬಾರಿ ಗೆಲುವು ಸಾಧಿಸಲಿದ್ದಾರೆ. ಅ.೨೩ರಂದು ನಡೆಯಲಿರುವ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು ಎನ್‌ಡಿಎ ಅಭ್ಯರ್ಥಿ ಎಂಪಿ ರಂಗನಾಥ್ ಅವರಿಗೆ ಮತ ನೀಡುವ ಮೂಲಕ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಧ್ವನಿಯಾಗಿ ಶ್ರಮಿಸಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್‌ಎಂ ಹರೀಶ್ ಗೌಡ ಮಾತನಾಡಿ ಈಗಾಗಲೇ ಎರಡು ಚುನಾವಣೆಗಳನ್ನು ಎದುರಿಸಿರುವ ಎ.ಪಿ. ರಂಗನಾಥ್ ರವರಿಗೆ ಶಿಕ್ಷಕರ ಬೇಡಿಕೆಗಳು ಹಾಗೂ ಸಮಸ್ಯೆಗಳ ಸಂಪೂರ್ಣ ಅರಿವಿದೆ. ತಾಲೂಕಿನ ಶಿಕ್ಷಕರು ಪ್ರಭುದ್ಧರಿದ್ದಾರೆ ತಮ್ಮ ಧ್ವನಿಯಾಗಿ ರಾಜ್ಯ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ತಮ್ಮ ಪ್ರತಿನಿಧಿಯಾಗಿ ಎನ್ ಡಿ ಎ ಅಭ್ಯರ್ಥಿ ಎ.ಪಿ.ರಂಗನಾಥ್ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮ ದಲ್ಲಿ ಮುಖಂಡರಾದ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ಬಿಜೆಪಿ ನೆಲಮಂಗಲ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ನಾಗೇಶ್, ನಗರಸಭಾ ಅಧ್ಯಕ್ಷೆ ಪ್ರಭಾನಾಗರಾಜ್, ಬಿಜೆಪಿ ನಗರಾಧ್ಯಕ್ಷ ಮುದ್ದಪ್ಪ ಸೇರಿದಂತೆ ಅನೇಕರು ಹಾಜರಿದ್ದರು.




