ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಹಾರೋಗೇರಿ ಗ್ರಾಮದ ರಕ್ಷಿತಾ ಸರಿಕರ್ (23) ಎಂದು ಗುರುತಿಸಲಾಗಿದೆ. ಈ ಕೃತ್ಯ ಎಸಗಿರುವ ಕೇಂದ್ರ ಸಶಸ್ತ್ರ ಸೀಮಾ ಬಲದ (SSB) ಪೇದೆ ಬಸಪ್ಪ ಸಾತನ್ನವಣ್ಣರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಪ್ರೀತಿ ಮತ್ತು ಸಂಚು: ರಕ್ಷಿತಾ ಹಾಗೂ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಕೊಲೆ ದಿನ: ಅಕ್ಟೋಬರ್ 28ರಂದು ಸುತ್ತಾಡಿಕೊಂಡು ಬರೋಣ ಎಂದು ನಂಬಿಸಿ ರಕ್ಷಿತಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ನಾಟಕವಾಡಿದ ಪ್ರಿಯಕರ: ಕೊಲೆ ಮಾಡಿದ ಬಳಿಕ ಯಾವುದೇ ಸುಳಿವು ಸಿಗದಂತೆ ಊರಿಗೆ ವಾಪಸ್ ಬಂದಿದ್ದ ಆರೋಪಿ ಬಸಪ್ಪ, ಮೃತ ಯುವತಿಯ ಸಹೋದರನ ಜೊತೆ ಸೇರಿಕೊಂಡು ರಕ್ಷಿತಾಳಿಗಾಗಿ ಹುಡುಕಾಟ ನಡೆಸುವ ಮೂಲಕ ನಾಟಕವಾಡಿದ್ದಾನೆ. ಬಳಿಕ ಯುವತಿಯ ಸಹೋದರ ಹಾರೋಗೇರಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.
ಬಯಲಾದ ಸತ್ಯ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಪೇದೆ ಬಸಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಬಸಪ್ಪ ತಪ್ಪೊಪ್ಪಿಕೊಂಡಿದ್ದಾನೆ.
ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




