ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಕಂಪನಿಯಿಂದ ಕಸ ಸಾಗಾಣಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಭಾರಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಕರಿಗೌಡ ಸೇರಿದಂತೆ ಕಸ ವಿಲೇವಾರಿ ಸಂಸ್ಥೆಯ ಪ್ರಮುಖ ಮುಖ್ಯಸ್ಥರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ.
ಸಿಎಂ ಡಿಕೆಶಿ ಕಡೆಯಿಂದ ತನಿಖೆಗೆ ಆದೇಶ:
ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ. ಟೆಂಡರ್, ಗುತ್ತಿಗೆ, ಭದ್ರತಾ ಠೇವಣಿ ಹಾಗೂ ಕಾರ್ಯಾದೇಶಗಳಲ್ಲಿ ಉಂಟಾಗಿರುವ ನ್ಯೂನತೆಗಳ ಬಗ್ಗೆ ಕೂಡಲೇ ಕೂಲಂಕಷ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ವರದಿ ನೀಡುವಂತೆ ಜಿಬಿಎ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಪ್ಯಾಕೇಜ್ 1, 2 ಮತ್ತು 5ರ ಟೆಂಡರ್ಗಳ ತೀವ್ರ ಪರಿಶೀಲನೆ ಮುಂದುವರೆದಿದೆ.
ಕೋಟಿ ಕೋಟಿ ರೂ. ಅವ್ಯವಹಾರ ಮತ್ತು ನಿಯಮ ಉಲ್ಲಂಘನೆ ಆರೋಪ:
ಈ ಅಕ್ರಮದ ಪ್ರಮುಖ ಭಾಗವಾಗಿ ಪ್ಯಾಕೇಜ್ 2 ಮತ್ತು 5ರ ಗುತ್ತಿಗೆಯನ್ನು 'ಮುನಿಯಪ್ಪ ಎಂಟರ್ಪ್ರೈಸಸ್' ಸಂಸ್ಥೆಗೆ ನೀಡಲಾಗಿದೆ. ಟೆಂಡರ್ ನಿಯಮಗಳು ಹಾಗೂ ಭದ್ರತಾ ಠೇವಣಿ ಪಾವತಿಯಲ್ಲಿ ಈ ಸಂಸ್ಥೆಗೆ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಸ್ವಚ್ಛ ಭಾರತ ನಿಧಿಯ ಸುಮಾರು 150 ಕೋಟಿ ರೂಪಾಯಿ ಹಣ ದುರ್ಬಳಕೆಯಾಗಿರುವ ಗಂಭೀರ ಆರೋಪವೂ ಕೇಳಿಬಂದಿದೆ.
ಪ್ಯಾಕೇಜ್ 2 ಮತ್ತು 5ರಡಿ ಎಸ್ಟಿಎಸ್ ಸ್ಥಾಪನೆಗೆ ಕರೆಯಲಾಗಿದ್ದ ಟೆಂಡರ್ನಲ್ಲಿ ಮುನಿಯಪ್ಪ ಎಂಟರ್ಪ್ರೈಸಸ್ ಭಾಗಿಯಾಗಿದ್ದು, ನಿಗದಿತ ಅಂದಾಜು ಮೊತ್ತಕ್ಕಿಂತ ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿತ್ತು.
ಪ್ಯಾಕೇಜ್ 2: ನಿಗದಿತ ಟೆಂಡರ್ ಮೊತ್ತ 53.4 ಕೋಟಿ ರೂಪಾಯಿ ಇದ್ದರೆ, ಕೇವಲ 33.63 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ.
ಪ್ಯಾಕೇಜ್ 5: ನಿಗದಿತ ಟೆಂಡರ್ ಮೊತ್ತ 55.4 ಕೋಟಿ ರೂಪಾಯಿ ಇದ್ದರೆ, ಕೇವಲ 38.42 ಕೋಟಿ ರೂಪಾಯಿಗೆ ಗುತ್ತಿಗೆ ಖಾಯಂಗೊಳಿಸಲಾಗಿದೆ.
ಈ ರೀತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಮೂಲಕ ದೊಡ್ಡ ಮಟ್ಟದ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಇಡಿಗೆ ದೂರು ದಾಖಲಿಸಲಾಗಿದೆ.




