ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ವೇದಾವತಿ ನಗರದಲ್ಲಿರುವ ಆರ್.ಬಿ.ಎನ್. ಶಾಲೆಯಲ್ಲಿ ಶ್ರೀ ರಾಘವೇಂದ್ರ ಸೌಹಾರ್ಧ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 9ನೇ ವಾರ್ಷಿಕ ಮಹಾಸಭೆಯನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಖಂಡೇನಹಳ್ಳಿ ಹನುಮಂತರಾಯಪ್ಪ ಅವರು, "ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಅತ್ಯಂತ ಹಿರಿದಾದುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರಿಯ ಸೇವೆಗಳು ತಲುಪಬೇಕು ಮತ್ತು ಆ ಮೂಲಕ ಪ್ರತಿಯೊಬ್ಬರನ್ನೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ" ಎಂದು ತಿಳಿಸಿದರು.
ಸಾಲ ಮರುಪಾವತಿಯ ಮಹತ್ವವನ್ನು ಕುರಿತು ಮಾತನಾಡುತ್ತಾ, "ಸಹಕಾರಿ ಬಂಧುಗಳು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದಾಗ ಮಾತ್ರ, ಅದೇ ಹಣವು ಮತ್ತೊಬ್ಬ ಅಗತ್ಯವಿರುವ ಸಹಕಾರಿಗೆ ನೆರವಾಗಲು ಸಾಧ್ಯವಾಗುತ್ತದೆ. ಈ ಪರಸ್ಪರ ಸಹಕಾರದ ಮನೋಭಾವ ಪ್ರತಿಯೊಬ್ಬ ಸದಸ್ಯರಲ್ಲೂ ಇರಬೇಕು" ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಸಂಘದ ಕಾರ್ಯವೈಖರಿಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಘೋಷಣೆ ಮಾಡಿದ ಅವರು, "ಸಹಕಾರಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗುವುದು. ಸದಸ್ಯರಿಗೆ ಡಿಜಿಟಲ್ ಸೇವೆಗಳು ಹಾಗೂ ಎಲ್ಲಾ ರೀತಿಯ ಆನ್ಲೈನ್ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು" ಎಂದು ಭರವಸೆ ನೀಡಿದರು.
ಈ ಮಹಾಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಭೆಯ ಯಶಸ್ವಿಗೆ ಸಹಕರಿಸಿದರು.




