ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜ್ಯ ಸರ್ಕಾರದ ಇತ್ತೀಚಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೊನೆಗೂ ಜಗಳೂರು ತಾಲೂಕು ಸೇರ್ಪಡೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಹರ್ಷಗೊಂಡಿರುವ ಜಗಳೂರು ತಾಲೂಕಿನ ಸಾರ್ವಜನಿಕರು ಹಾಗೂ ರೈತರು, ಇದಕ್ಕೆ ಕಾರಣಕರ್ತರಾದ ಹಾಲಿ ಶಾಸಕ ಬಿ. ದೇವೇಂದ್ರಪ್ಪ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.
ಜಗಳೂರು ಪಟ್ಟಣದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ನೆನ್ನೆ ಸಂಜೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನತೆ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮತ್ತು ಡೋಲು ಬಾರಿಸಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಶಾಸಕರ ಸಂಪರ್ಕ ಕಚೇರಿವರೆಗೆ ಅದ್ಧೂರಿ ಮೆರವಣಿಗೆಯನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ನಿರ್ಧಾರವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ನನ್ನ ಸಹವಾಸಕ್ಕೆ ಬಂದ್ರೇ ಹುಷಾರ್:ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಕೆ
ಸಂಭ್ರಮಾಚರಣೆಯ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಬಿ. ದೇವೇಂದ್ರಪ್ಪ, ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಕಾರಣರಾದವರನ್ನು ಸ್ಮರಿಸುತ್ತಲೇ, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ನೂರಾರು ತಾಲೂಕುಗಳಲ್ಲಿ ಬರಪರಿಸ್ಥಿತಿ ಇದ್ದರೂ ಎಲ್ಲೂ ಇಂತಹ ಸಂಭ್ರಮವಿಲ್ಲ. ಆದರೆ ಇಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲು ಇಬ್ಬರು ಮಾಜಿ ಶಾಸಕರೇ ಕಾರಣ. ನಿಮಗೆ ಯಾವುದೇ ಕಾರಣಕ್ಕೂ ನೆಮ್ಮದಿ ಇರಕೂಡದು, ಇನ್ಮುಂದೆ ನನ್ನ ಸಹವಾಸಕ್ಕೆ ಬಂದರೆ ಸರಿಯಿರೋದಿಲ್ಲ" ಎಂದು ಕಠಿಣ ಎಚ್ಚರಿಕೆ ರವಾನಿಸಿದರು.
ಆಲ್ಕೋಹಾಲ್ ಪರೀಕ್ಷೆಗೆ ಬಹಿರಂಗ ಸವಾಲು:
ವಿರೋಧಿಗಳ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ತಾವು ಕಳೆದ ನಾಲ್ಕು ವರ್ಷಗಳಿಂದ ಮದ್ಯಪಾನ ಮಾಡುವುದನ್ನೇ ಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು.
"ನಾವು ಮೂವರು (ಇಬ್ಬರು ಮಾಜಿ ಹಾಗೂ ಒಬ್ಬರು ಹಾಲಿ ಶಾಸಕರು) ನೆಟ್ಟಗಿರೋಣ. ಬೇಕಿದ್ದರೆ ನನ್ನ ರಕ್ತವನ್ನು ಪರೀಕ್ಷೆ ಮಾಡಿಸಿ, ಆಲ್ಕೊಹಾಲ್ ಮಾದರಿ ಸಿಗುತ್ತದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ. ರಾತ್ರಿಯಾದರೆ ಡ್ರಂಕ್ ಅಂಡ್ ಡ್ರೈವ್ ಪರಿಶೀಲನೆ ಮಾಡುವ ಮೀಟರ್ ಊದಿ ನಾವೆಲ್ಲರೂ ಮಲ್ಗೋಣ, ಇದಕ್ಕೆ ನೀವೆಲ್ಲರೂ ಸಿದ್ಧರಿದ್ದೀರಾ?" ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು. ತಾವು ಮದ್ಯಪಾನ ಮಾಡುವುದಿಲ್ಲವಾದರೂ, ಅವರಿಬ್ಬರು ಕುಡಿಯುತ್ತಾರೆ ಎಂದು ವ್ಯಂಗ್ಯವಾಡಿದರು.
ಜನರ ಜವಾಬ್ದಾರಿ ನಿಭಾಯಿಸುವ ತೃಪ್ತಿಯಿದೆ:
ತಮ್ಮ ಮೇಲಿದ್ದ ಜನಪರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ತಿಳಿಸಿದ ಶಾಸಕರು, "ತಪ್ಪು ಮಾಡಿದರೆ ನನ್ನ ತಂದೆಯನ್ನೇ ಬಿಡುವವನಲ್ಲ. ಬರ ಘೋಷಣೆ ಆಗಬೆಕೆಂಬುದು ಪುನರುತ್ಥಾನದ ಪ್ರಶ್ನೆಯಾಗಿತ್ತು. ಒಂದು ವೇಳೆ ಬರ ಘೋಷಣೆ ಆಗದಿದ್ದರೆ ರಾಜೀನಾಮೆ ನೀಡುವ ಬಗ್ಗೆಯೂ ಮಾತನಾಡಿದ್ದೆ. ಈಗ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದು, ಇದರಲ್ಲಿ ಉಸ್ತುವಾರಿ ಸಚಿವರು, ಸಂಸದರು ಅಥವಾ ಸಚಿವ ಬಸವಂತಪ್ಪ ಯಾರೇ ಶ್ರಮಿಸಲಿ, ಎಲ್ಲರೂ ನಮ್ಮವರೇ ಅಲ್ಲವೇ?" ಎಂದು ಹರ್ಷ ವ್ಯಕ್ತಪಡಿಸಿದರು.




