ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಉಕ್ಕಿನ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಗಮನಾರ್ಹ ಚೇತರಿಕೆ ಕಂಡಿದ್ದು, ಲಾಭದ ಹಾದಿಗೆ ಮರಳಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯು ಸತತ ಮೂರು ತಿಂಗಳುಗಳಿಂದ ನಿವ್ವಳ ಲಾಭ ದಾಖಲಿಸುವ ಮೂಲಕ ಸಕಾರಾತ್ಮಕ ಪ್ರಗತಿ ಸಾಧಿಸಿದೆ. ಈ ಕುರಿತು ಮಾಹಿತಿಯನ್ನ ಹಂಚಿಕೊಂಡಿರುವ ಸಚಿವರು, ಕಾರ್ಮಿಕರ ಶ್ರಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಸತತ ಮೂರು ತಿಂಗಳ ಲಾಭದ ವಿವರ:
ಜುಲೈ 2026: ₹0.33 ಕೋಟಿ ಲಾಭ, ಆಗಸ್ಟ್ 2026: ₹1.71 ಕೋಟಿ ಲಾಭ, ಸೆಪ್ಟೆಂಬರ್ 2026: ₹1.96 ಕೋಟಿ ಲಾಭಗಳಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಆದಾಯದಲ್ಲಿ ಶೇ. 88ಕ್ಕೂ ಹೆಚ್ಚು ಏರಿಕೆ:
ಕಳೆದ ವರ್ಷ ಸೆಪ್ಟೆಂಬರ್ (2025) ತಿಂಗಳಿನಲ್ಲಿ 27.48 ಕೋಟಿ ಇದ್ದ ನಿವ್ವಳ ಆದಾಯವು, ಈ ವರ್ಷದ ಸೆಪ್ಟೆಂಬರ್ (2026) ವೇಳೆಗೆ 51.87 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಾರ್ಖಾನೆಯು 3.78 ಕೋಟಿ ನಷ್ಟ ಅನುಭವಿಸಿತ್ತು. ಆದರೆ ಈ ಬಾರಿ 1.96 ಕೋಟಿ ನಿವ್ವಳ ಲಾಭಗಳಿಸಿ ಸಾಧನೆ ಮಾಡಿದೆ.
ಅಲ್ಲದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 22.77 ಕೋಟಿಯಷ್ಟಿದ್ದ ಒಟ್ಟಾರೆ ನಿವ್ವಳ ನಷ್ಟವು, ಸೆಪ್ಟೆಂಬರ್ 2026ರ ವೇಳೆಗೆ 2.03 ಕೋಟಿಗೆ ಇಳಿಕೆಯಾಗಿದೆ. ಇದರ ಮೂಲಕ ಒಂದೇ ವರ್ಷದಲ್ಲಿ 20 ಕೋಟಿಗೂ ಹೆಚ್ಚಿನ ಚೇತರಿಕೆ ಕಂಡುಬಂದಿದೆ ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯ ಈ ಅದ್ಭುತ ಚೇತರಿಕೆಗೆ ಶ್ರಮಿಸಿದ ಪ್ರತಿಯೊಬ್ಬ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಸಚಿವರು, ಕಾರ್ಯಾಚರಣೆಯ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿ, VISL ಘಟಕವನ್ನು ಸಂಪೂರ್ಣ ಸುಸ್ಥಿರ ಹಾಗೂ ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.




